ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೆನಡಾ ಭೇಟಿಗೆ ಬೆಂಬಲ; ಪ್ರವೇಶ ತಡೆಯುವ ಯತ್ನಕ್ಕೆ 100ಕ್ಕೂ ಹೆಚ್ಚು ಹಿಂದೂ ಸಂಘಟನೆಗಳ ವಿರೋಧ
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಕೆನಡಾ ಭೇಟಿಗೆ ಬೆಂಬಲ ಸೂಚಿಸಿ 100ಕ್ಕೂ ಹೆಚ್ಚು ಕೆನಡಿಯನ್ ಸಂಘಟನೆಗಳು ಹಾಗೂ ನಾಗರಿಕ ಹಕ್ಕುಗಳ ಒಕ್ಕೂಟಗಳು ಕೆನಡಾ ಸರ್ಕಾರಕ್ಕೆ ಪತ್ರ ಬರೆದಿವೆ. ರಾಜಕೀಯ ಒತ್ತಡಗಳಿಗೆ ಮಣಿಯದೆ, ಕೇವಲ ಸಾಕ್ಷ್ಯಾಧಾರಗಳು ಮತ್ತು ಕಾನೂನು ಪ್ರಕ್ರಿಯೆಗಳ ಆಧಾರದ ಮೇಲೆ ಅವರ ಪ್ರವೇಶದ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಒಟ್ಟಾವಾ ಸರ್ಕಾರವನ್ನು ಒತ್ತಾಯಿಸಲಾಗಿದೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ಕೆನಡಾ ಪ್ರವೇಶಕ್ಕೆ ಅನುಮತಿ ನೀಡಬಾರದು ಮತ್ತು ಅವರನ್ನು ‘ಅನರ್ಹ’ ಎಂದು ಘೋಷಿಸಬೇಕು ಎಂದು ಎನ್‌ಡಿಪಿ ಸಂಸದರಾದ ಜೆನ್ನಿ ಕ್ವಾನ್, ಹೀಥರ್ ಮೆಕ್‌ಫರ್ಸನ್ ಸೇರಿದಂತೆ ಹಲವು ಸಂಘಟನೆಗಳು ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ.

ಒಟ್ಟಾವಾ, ಆಗಸ್ಟ್ 20: ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸರಸಂಘಚಾಲಕ ಮೋಹನ್ ಭಾಗವತ್ (Mohan Bhagwat) ಅವರ ಕೆನಡಾ ಭೇಟಿಗೆ ಅನುಮತಿ ನೀಡಬಾರದು ಮತ್ತು ಅವರನ್ನು ‘ಅನರ್ಹ’ ಎಂದು ಘೋಷಿಸಬೇಕು ಎಂಬ ಸಂಸದರು ಹಾಗೂ ಕೆಲವು ಸಂಘಟನೆಗಳ ಆಗ್ರಹಕ್ಕೆ ಕೆನಡಾದ 100ಕ್ಕೂ ಹೆಚ್ಚು ಹಿಂದೂ ಮತ್ತು ನಾಗರಿಕ ಹಕ್ಕುಗಳ ಸಂಘಟನೆಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ. ಮೋಹನ್ ಭಾಗವತ್ ಅವರ ಭೇಟಿಗೆ ಬೆಂಬಲ ಸೂಚಿಸಿ ಪ್ರಧಾನಿ ಮಾರ್ಕ್ ಕಾರ್ನಿ ನೇತೃತ್ವದ ಕೆನಡಾ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ.
ಯಾವುದೇ ರಾಜಕೀಯ ಒತ್ತಡಗಳಿಗೆ ಮಣಿಯದೆ, ಕೇವಲ ಸಾಕ್ಷ್ಯಾಧಾರಗಳು ಮತ್ತು ಕಾನೂನು ಪ್ರಕ್ರಿಯೆಗಳ ಆಧಾರದ ಮೇಲೆ ಮೋಹನ್ ಭಾಗವತ್ ಕೆನಡಾದೊಳಗೆ ಪ್ರವೇಶ ಮಾಡಬೇಕೇ, ಬೇಡವೇ ಎಂಬುದರ ಕುರಿತು ನಿರ್ಧಾರ ಕೈಗೊಳ್ಳಬೇಕು ಎಂದು ಕೆನಡಾ ಸರ್ಕಾರವನ್ನು ಅಲ್ಲಿನ ಹಿಂದೂ ಸಂಘಟನೆಗಳು ಒತ್ತಾಯಿಸಿವೆ.
ಯಾರಿಗೆಲ್ಲ ಪತ್ರ?:
ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ, ಸಾರ್ವಜನಿಕ ಸುರಕ್ಷತಾ ಸಚಿವ ಗ್ಯಾರಿ ಆನಂದಸಂಗರೀ, ವಲಸೆ ಸಚಿವೆ ಲೀನಾ ಮೆಟ್ಲೆಜ್ ದಿಯಾಬ್ ಮತ್ತು ವಿದೇಶಾಂಗ ಸಚಿವೆ ಅನಿತಾ ಆನಂದ್ ಅವರಿಗೆ ಈ ಮನವಿ ಪತ್ರವನ್ನು ಕಳುಹಿಸಲಾಗಿದೆ.
ಇದನ್ನೂ ಓದಿ: ಮೀಸಲಾತಿ ವ್ಯವಸ್ಥೆ ಬಗ್ಗೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದೇನು?
101 ಸಂಘಟನೆಗಳ ಬೆಂಬಲ:
ಕೆನಡಾ ಇಂಡಿಯಾ ಫೌಂಡೇಶನ್, ಕೆನಡಿಯನ್ ಹಿಂದೂ ಚೇಂಬರ್ ಆಫ್ ಕಾಮರ್ಸ್, ಹಿಂದೂ ಸ್ವಯಂಸೇವಕ ಸಂಘ (HSS), ವಿಎಚ್‌ಪಿ ಕೆನಡಾ ಹಾಗೂ ದೇಶದ ಪ್ರಮುಖ ಹಿಂದೂ ದೇವಾಲಯಗಳು ಸೇರಿದಂತೆ ಒಟ್ಟು 101 ಪ್ರಮುಖ ಸಾಂಸ್ಕೃತಿಕ ಮತ್ತು ನಾಗರಿಕ ಹಕ್ಕುಗಳ ಸಂಸ್ಥೆಗಳು ಈ ಪತ್ರಕ್ಕೆ ಸಹಿ ಹಾಕಿವೆ.
ಮೋಹನ್ ಭಾಗವತ್ ಅವರ ಭೇಟಿಗೆ ತಡೆ ನೀಡಲು ನಡೆಯುತ್ತಿರುವ ಅಭಿಯಾನಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸಂಘಟನೆಗಳು, “ಅವರ ಮೇಲಿನ ಆರೋಪಗಳಿಗೆ ಸೂಕ್ತ ಸಾಕ್ಷ್ಯಾಧಾರಗಳ ಅಗತ್ಯವಿದೆ. ಮೋಹನ್ ಭಾಗವತ್ ಅವರು ದ್ವೇಷಪೂರಿತ ಭಾಷಣ ಮಾಡಿದ್ದಾರೆ, ಅಲ್ಪಸಂಖ್ಯಾತರ ವಿರುದ್ಧ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದಾರೆ ಅಥವಾ ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪಗಳಿಗೆ ಯಾವುದೇ ಬಲವಾದ ಪುರಾವೆಗಳಿಲ್ಲ” ಎಂದು ಸ್ಪಷ್ಟಪಡಿಸಿವೆ.
ಇದನ್ನೂ ಓದಿ: ‘ಜೆನ್-ಜಿ ದೇಶವಿರೋಧಿಗಳಲ್ಲ, ಅವರ ಬಗ್ಗೆ ಅತಿಯಾದ ನಂಬಿಕೆಯಿದೆ’; ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್
ಕೆನಡಾದಲ್ಲಿ 10 ಲಕ್ಷಕ್ಕೂ ಹೆಚ್ಚು ಹಿಂದೂ ಜನಸಂಖ್ಯೆಯಿದ್ದು, ಮೋಹನ್ ಭಾಗವತ್ ಅವರ ಈ ಭೇಟಿಯು ಹಿಂದೂ ಸಮುದಾಯಕ್ಕೆ ಬಹಳ ಮಹತ್ವದ್ದಾಗಿದೆ ಎಂದು ಸಂಸ್ಥೆಗಳು ಹೇಳಿವೆ. ಮೋಹನ್ ಭಾಗವತ್ ಅವರ ಪ್ರವೇಶವನ್ನು ತಡೆಯಲು ನಡೆಯುತ್ತಿರುವ ಅಭಿಯಾನವು ಕೆನಡಾದ ಹಿಂದೂಗಳಲ್ಲಿ “ಹಿಂದೂ ವಿರೋಧಿ ಮನಸ್ಥಿತಿ” ಅಥವಾ “ಹಿಂದೂಫೋಬಿಯಾ” (Hinduphobia) ಎಂಬ ಭಾವನೆಯನ್ನು ಹುಟ್ಟುಹಾಕಬಹುದು ಎಂದು ಎಚ್ಚರಿಸಲಾಗಿದೆ.
ಮೋಹನ್ ಭಾಗವತ್ ಭೇಟಿಯ ವಿರೋಧಕ್ಕೆ ಕಾರಣವೇನು?:
ಆರ್‌ಎಸ್‌ಎಸ್ ಶತಮಾನೋತ್ಸವದ (100ನೇ ವರ್ಷ) ಆಚರಣೆಯ ಭಾಗವಾಗಿ ಆಗಸ್ಟ್ 25ರಿಂದ ಮೋಹನ್ ಭಾಗವತ್ ಅಮೆರಿಕ, ಕೆನಡಾ ಮತ್ತು ಯುನೈಟೆಡ್ ಕಿಂಗ್‌ಡಮ್ (ಯುಕೆ) ಪ್ರವಾಸ ಕೈಗೊಳ್ಳಲಿದ್ದಾರೆ. ಆದರೆ, ಕೆನಡಾದ ಕೆಲ ವಿರೋಧ ಪಕ್ಷಗಳ ಸಂಸದರು ಮತ್ತು ಸಂಘಟನೆಗಳು ಸಾರ್ವಜನಿಕ ಸುರಕ್ಷತೆ ಹಾಗೂ ರಾಷ್ಟ್ರೀಯ ಭದ್ರತೆಯ ನೆಪವೊಡ್ಡಿ ಮೋಹನ್ ಭಾಗವತ್ ಅವರ ಪ್ರವೇಶವನ್ನು ತಡೆಯಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತಿವೆ. ಮೋಹನ್ ಭಾಗವತ್ ದ್ವೇಷಪೂರಿತ ಭಾಷಣ ಮಾಡುತ್ತಾರೆ ಎಂಬ ಆರೋಪಗಳನ್ನು ಮಾಡಿ ಅವರ ಭೇಟಿಗೆ ವಿರೋಧ ವ್ಯಕ್ತಪಡಿಸಲಾಗುತ್ತಿದೆ.
1925ರಲ್ಲಿ ಭಾರತದಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ಜಗತ್ತಿನ ಅತಿ ದೊಡ್ಡ ಸ್ವಯಂಸೇವಕ ಸಂಘಟನೆಯಾಗಿ ಬೆಳೆದಿದೆ. ಭಾರತ ಮಾತ್ರವಲ್ಲದೆ ಜಾಗತಿಕ ಮಟ್ಟದಲ್ಲಿಯೂ ಶಿಕ್ಷಣ, ಸಾಮಾಜಿಕ ಸೇವೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತನ್ನ ಅಂಗಸಂಸ್ಥೆಗಳ ಮೂಲಕ ನಿರಂತರವಾಗಿ ತೊಡಗಿಸಿಕೊಂಡಿದೆ ಎಂದು ಹಿಂದೂ ಸಂಘಟನೆಗಳು ಬರೆದ ಪತ್ರದಲ್ಲಿ ಸಮರ್ಥಿಸಿಕೊಳ್ಳಲಾಗಿದೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




