AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಛಲವಾದಿ, ಈಶ್ವರಪ್ಪಗೆ ನೀಡಿದ್ದ ಭದ್ರತೆ ವಾಪಸ್ ಪಡೆದ ಸರ್ಕಾರ: ಖರ್ಗೆ, ಮಹದೇವಪ್ಪಗೆ ಹೆಚ್ಚಿನ ಭದ್ರತೆ

ಬಿಜೆಪಿ ಹಾಗೂ ಕಾಂಗ್ರೆಸ್ ​ನಾಯಕರ ಭದ್ರತಾ ಸಿಬ್ಬಂದಿಯನ್ನು ರಾಜ್ಯ ಸರ್ಕಾರ ಪರಿಷ್ಕರಣೆ ಮಾಡಿದ್ದು, ಕೆಲ ನಾಯಕರಿಗೆ ನೀಡಲಾಗಿದ್ದ ಭದ್ರತಾ ಸಿಬ್ಬಂದಿಯನ್ನು ವಾಪಸ್ ಪಡೆದುಕೊಳ್ಳಲಾಗಿದೆ. ಇನ್ನು ಕೆಲವರಿಗೆ ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ. ಹಾಗಾದ್ರೆ, ಗೃಹ ಇಲಾಖೆಯು ಯಾರೆಲ್ಲಾ ಭದ್ರತೆಯನ್ನು ಹಿಂಪಡೆದುಕೊಂಡಿದುಕೊಂಡಿದೆ? ಎನ್ನುವ ಮಾಹಿತಿ ಇಲ್ಲಿದೆ.

ಛಲವಾದಿ, ಈಶ್ವರಪ್ಪಗೆ ನೀಡಿದ್ದ ಭದ್ರತೆ ವಾಪಸ್ ಪಡೆದ ಸರ್ಕಾರ: ಖರ್ಗೆ, ಮಹದೇವಪ್ಪಗೆ ಹೆಚ್ಚಿನ ಭದ್ರತೆ
Chalavadi Narayanaswamy And Ks Eshwarappa
ಕಿರಣ್​ ಹನಿಯಡ್ಕ
| Edited By: |

Updated on: Oct 17, 2025 | 7:00 PM

Share

ಬೆಂಗಳೂರು, (ಅಕ್ಟೋಬರ್ 17): ಬಿಜೆಪಿ ಹಾಗೂ ಕಾಂಗ್ರೆಸ್ ​ನಾಯಕರ ಭದ್ರತಾ ಸಿಬ್ಬಂದಿಯನ್ನು ಪರಿಷ್ಕರಣೆ ಮಾಡಲಾಗಿದೆ. ಕರ್ನಾಟಕ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ((Chalavadi Narayanaswamy) )ನಿವಾಸದ ಭದ್ರತಾ ಗಾರ್ಡ್ ಹಿಂಪಡೆದುಕೊಳ್ಳಲಾಗಿದೆ. ಹಾಗೇ ಮಾಜಿ ಉಪಮುಖ್ಯಮಂತ್ರಿ, ಬಿಜೆಪಿ ಉಚ್ಛಾಟಿತ ನಾಯಕ ಕೆಎಸ್ ಈಶ್ವರಪ್ಪನವರ ನಿವಾಸದ ಗಾರ್ಡ್ ಹಾಗೂ ಬೆಂಗಾವಲು ಭದ್ರತೆ ಎರಡನ್ನೂ ಗೃಹ ಇಲಾಖೆ ವಾಪಸ್ ಪಡೆದುಕೊಂಡಿದೆ. ಇನ್ನು ಗೃಹ ಇಲಾಖೆಯ ಈ ನಡೆಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಚಿವ ಮಹದೇವಪ್ಪಗೆ ಭದ್ರತೆ ಹೆಚ್ಚಳ

ಛಲವಾದಿ ನಾರಾಯಣಸ್ವಾಮಿ ಹಾಗೂ ಈಶ್ವರಪ್ಪನವರ ಭದ್ರತಾ ಗಾರ್ಡ್ ವಾಪಡ್ ಪಡೆದುಕೊಂಡಿರುವ ಗೃಹ ಇಲಾಖೆ, ಸಚಿವ ಹೆಚ್​.ಸಿ.ಮಹದೇವಪ್ಪ ಅವರಿಗೆ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಿದೆ. ಹೌದು…ಸಚಿವ ಮಹದೇವಪ್ಪ ಅವರಿಗೆ ಬೆಂಗಾವಲು ಭದ್ರತೆ ಸಿಬ್ಬಂದಿ ಹೆಚ್ಚಿಸಿ ಆದೇಶ ಹೊರಡಿಸಿದೆ. ಇದಕ್ಕೆ ಛಲವಾದಿ ನಾರಾಯಣಸ್ವಾಮಿ ಕೆಂಡಾಮಂಡಲರಾಗಿದ್ದು, ನನ್ನ ಭದ್ರತೆ ವಾಪಸ್ ಪಡೆದುಕೊಂಡು ಪ್ರಿಯಾಂಕ್ ಖರ್ಗೆಗೆ ಭದ್ರತೆ ಹೆಚ್ಚಿಸಿದ್ದಾರೆ ಎಂದು ಕಿಡಿಕಾರಿದ್ದಾರೆ.

ಇದನ್ನು ಓದಿ: ಸಿಎಂ ಸಿದ್ದರಾಮಯ್ಯಗೆ ಅಶೋಕ್ ಮಹತ್ವದ ಪತ್ರ: ವಿಪಕ್ಷ ನಾಯಕರ ಪತ್ರದಲ್ಲೇನಿದೆ?

ಏನಾದರೂ ಆದ್ರೆ ಖರ್ಗೆ ಕುಟುಂಬ ಹೊಣೆ ಎಂದ ಛಲವಾದಿ

ಇನ್ನು ಈ ಬಗ್ಗೆ ಛಲವಾದಿ ನಾರಾಯಣಸ್ವಾಮಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ನಮ್ಮ ಮನೆಗೆ ಬೆಂಗಾವಲು ರಕ್ಷಕರನ್ನು ಕೊಟ್ಟಿದ್ದರು. ಭದ್ರತಾ ದೃಷ್ಟಿಯಿಂದ ಕೊಡಲೇ ಬೇಕು. ಆದರೆ ಮೂವರು ಭದ್ರತಾ ಸಿಬ್ಬಂದಿಯನ್ನು ವಾಪಸ್ ಪಡೆದಿದ್ದಾರೆ. ಇದರ ಹಿಂದೆ ಪ್ರಿಯಾಂಕ್ ಖರ್ಗೆ (Priyank Kharge) ಇದ್ದಾರೆ. ನನಗೆ ಏನಾದರೂ ಆದರೆ ಸರ್ಕಾರ ಎಷ್ಟು ಹೊಣೆಯೋ, ಪ್ರಿಯಾಂಕ್ ಖರ್ಗೆ ಕುಟುಂಬವೂ ಕೂಡ ಹೊಣೆ ಎಂದು ಆಕ್ರೋಶ ಹೊರಹಾಕಿದರು.

ನನಗೆ ಕೊಟ್ಟ ಭದ್ರತೆಯನ್ನು ವಾಪಸ್ ಪಡೆದಿದ್ದು ಯಾಕೆ? ಇದಕ್ಕೆ ಗೃಹ ಸಚಿವರು ಉತ್ತರ ಕೊಡಲೇಬೇಕು. ಇಲ್ಲದೇ ಇದ್ದರೆ ನನಗೆ ಕೊಟ್ಟಿರುವ ಕಾರು, ಬೆಂಗಾವಲು,ಭದ್ರತಾ ಸಿಬ್ಬಂದಿ ಎಲ್ಲರನ್ನೂ ವಾಪಸ್ ಕಳುಹಿಸುತ್ತೇನೆ . ಪ್ರಿಯಾಂಕ್ ಖರ್ಗೆ ಮನೆಗೆ ಬೆದರಿಕೆ ಬಂದಿದೆ ಎಂದು ಮತ್ತಷ್ಟು ಅವರ ಮನೆಗೆ ಭದ್ರತೆ ನೀಡಿದ್ದಾರೆ. ನನ್ನ ಭದ್ರತೆ ವಾಪಸ್ ಪಡೆದು, ಅವರಿಗೆ ಭದ್ರತೆ ಹೆಚ್ಚಿಸಿದ್ದಾರೆ. ಇವರ ಭ್ರಷ್ಟಾಚಾರ ಎತ್ತಿ ತೋರಿಸುವ ಕೆಲಸ ವಿಪಕ್ಷ ನಾಯಕರು ಮಾಡಬಾರದು ಎಂಬ ನಿರ್ಧಾರಕ್ಕೆ ಸರ್ಕಾರ ಬಂದಿದೆ. ನಾನು ವಿಪಕ್ಷ ನಾಯಕನಾಗಿ ಒಂದೂವರೆ ವರ್ಷ ಆಗುತ್ತಿದೆ. ಇಲ್ಲಿವರೆಗೂ ಸರ್ಕಾರಿ ಗೃಹ ಕೊಟ್ಟಿಲ್ಲ. ಇದೇ ಸ್ಥಾನದಲ್ಲಿ ಸಿದ್ದರಾಮಯ್ಯ ಇದ್ದಾಗ ಜಗಳ ಮಾಡಿ ಮನೆ ತೆಗೆದುಕೊಂಡಿದ್ದರು ಎಂದರು.

ರವಿಕುಮಾರ್ ಕೆಂಡಾಮಂಡಲ

ಛಲವಾದಿ ನಾರಾಯಣಸ್ವಾಮಿ ನಿವಾಸಕ್ಕೆ ನೀಡಿದ್ದ ಭದ್ರತೆ ವಾಪಸ್​ ಪಡೆದಿರುವ ಬಗ್ಗೆ ಬಿಜೆಪಿ ಎಂಎಲ್​ಸಿ ಎನ್​.ರವಿಕುಮಾರ್ ಮಾತನಾಡಿ, RSS ಕಚೇರಿಗೆ ಕೊಟ್ಟಿರುವ ಭದ್ರತೆ ವಾಪಸ್ ಪಡೆದಿದ್ದು ಯಾಕೆ? ಸಂಘದ ಚಟುವಟಿಕೆಗಳು ಹತ್ತಿಕ್ಕುವ, ಅಭದ್ರತೆ ಉಂಟು ಮಾಡುವ ಪಿತೂರಿ ಸರ್ಕಾರವೇ ಮಾಡುತ್ತಿದ್ಯಾ? ಕಾಂಗ್ರೆಸ್ ಪಕ್ಷದ ಕಿಡಿಗೇಡಿಗಳು ಅನುಮತಿ ಪಡೆಯದೇ ಆರ್​​ಎಸ್​ಎಸ್ ಕಚೇರಿ ಮುಂದೆ ಬೇಕಾಬಿಟ್ಟಿ ಘೋಷಣೆ ಕೂಗಿದ್ದಾರೆ. ಕಿಡಿಗೇಡಿಗಳು ಅಲ್ಲದಿದ್ದರೆ ಅನುಮತಿ ಪಡೆದು ಪ್ರತಿಭಟನೆ ಮಾಡುತ್ತಿದ್ದರು. ಸರ್ಕಾರಿ ಸ್ಥಳಗಳಲ್ಲಿ ಅನುಮತಿ ಪಡೆದು ಚಟುವಟಿಕೆ ಮಾಡಲು ಆದೇಶಿಸಿದ್ದಾರೆ. ಕಾಂಗ್ರೆಸ್​ ಪಕ್ಷದ ಕಿಡಿಗೇಡಿಗಳ ವಿರುದ್ಧ ಕೇಸ್ ಹಾಕದೇ ಇದ್ದರೆ ಸಿಎಂ ಮತ್ತು 33 ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.