
ಬೆಂಗಳೂರು, ಜನವರಿ 22: ನರೇಗಾ (NREGA) ಯೋಜನೆ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿರುವುದರ ವಿರುದ್ಧ ಕರ್ನಾಟಕ ಸರ್ಕಾರ ಕರೆದಿರುವ ವಿಶೇಷ ಅಧಿವೇಶನ (Karnataka Assembly Special Session) ಕೂಡ ರಾಜ್ಯಪಾಲರು (Karnataka Governor) ಮತ್ತು ಸರ್ಕಾರದ ವಿರುದ್ಧದ ಸಂಘರ್ಷಕ್ಕೆ ಕಾರಣವಾಗಿದೆ. ಅಧಿವೇಶನ ಉದ್ದೇಶಿಸಿ ಮಾತನಾಡಲು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ವಿಧಾನಸಭೆಗೆ ಬರುತ್ತಾರೆಯೇ ಎಂಬ ಅನುಮಾನವಿತ್ತು. ಆದರೆ, ಇದನ್ನು ಹುಸಿ ಮಾಡಿದ ರಾಜ್ಯಪಾಲರು, ಕೇವಲ ಒಂದೆರಡು ವಾಕ್ಯಗಳಲ್ಲಿ ಮಾತನಾಡಿ ಶುಭಾಶಯ ತಿಳಿಸಿ ಸರ್ಕಾರ ಕೊಟ್ಟ ಭಾಷಣದ ಪ್ರತಿ ಪೂರ್ತಿ ಓದದೆ ತೆರಳಿದರು. ಇದಕ್ಕೆ ಆಡಳಿತ ಪಕ್ಷದ ಶಾಸಕರು ತೀವ್ರ ವಿರೋಧ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು. ಈ ಸಂದರ್ಭದಲ್ಲಿ ವಿಧಾನಸಭೆ ಹೈಡ್ರಾಮಾಕ್ಕೆ ಸಾಕ್ಷಿಯಾಯಿತು.
ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ 11 ಅಂಶಗಳನ್ನು ತೆಗೆಯುವಂತೆ ರಾಜ್ಯಪಾಲರು, ಬುಧವಾರ ಸೂಚಿಸಿದ್ದರು. ಆದರೆ, ಅದನ್ನು ಸರ್ಕಾರ ನಿರಾಕರಿಸಿತ್ತು. ಹೀಗಾಗಿ ರಾಜ್ಯಪಾಲರು ಭಾಷಣ ಮಾಡಲು ಬರುವುದು ಅನುಮಾನ ಎಂದು ಹೇಳಲಾಗಿತ್ತು. ಒಂದು ವೇಳೆ ರಾಜ್ಯಪಾಲರು ವಿಧಾನಸಭೆಗೆ ಬಾರದಿದ್ದರೆ ಮುಂದಿನ ಕಾನೂನು ಕ್ರಮಕ್ಕಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವುದಕ್ಕೆ ಕೂಡ ಸರ್ಕಾರ ಸಿದ್ಧತೆ ನಡೆಸಿತ್ತು.
ಆಡಳಿತಾರೂಢ ಕಾಂಗ್ರೆಸ್ ನಾಯಕರ ನಿರೀಕ್ಷೆಗಳನ್ನು ಹುಸಿ ಮಾಡಿದ ರಾಜ್ಯಪಾಲರು, ವಿಧಾನಸಭೆಗೆ ಬಂದು ಭಾಷಣ ಆರಂಭಿಸಿದರು. ಸರ್ಕಾರ ಸಿದ್ಧಪಡಿಸಿದ ಭಾಷಣದ ಮೊದಲ ಮತ್ತು ಕೊನೆಯ ಪ್ಯಾರದ ಒಂದೆರಡು ಲೈನ್ ಮಾತ್ರ ಓದಿ, ಶುಭಾಶಯ ಕೋರಿ ಸರ್ಕಾರಕ್ಕೆ ಶಾಕ್ ಕೊಟ್ಟರು. ಬಳಿಕ ಅಲ್ಲಿಂದ ನಿರ್ಗಮಿಸಿದರು.
ರಾಜ್ಯಪಾಲರು ನಿರ್ಗಮಿಸುತ್ತಿದ್ದಂತೆಯೇ ಅವರನ್ನು ತಡೆಯಲು ಎಂಎಲ್‌ಸಿ ಬಿಕೆ ಹರಿಪ್ರಸಾದ್ ಮುಂದಾದರು. ಕಾಂಗ್ರೆಸ್ ಪಕ್ಷದ ಶಾಸಕರು ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ, ವಿಧಾನಸಭೆಯಲ್ಲಿ ಹೈಡ್ರಾಮವೇ ನಡೆಯಿತು. ನಂತರ ಸ್ಪೀಕರ್ ಯುಟಿ ಖಾದರ್, ಸಭಾಪತಿ ಹೊರಟ್ಟಿ ಹಾಗೂ ಸಿಎಂ ಸಿದ್ದರಾಮಯ್ಯ ರಾಜ್ಯಪಾಲರನ್ನು ಬೀಳ್ಕೊಟ್ಟರು. ರಾಜ್ಯಪಾಲರು ಕಾರು ಹತ್ತಿದ ಕೂಡಲೇ, ‘ಸಂವಿಧಾನ ಧಿಕ್ಕರಿಸಿದ ರಾಜ್ಯಪಾಲರಿಗೆ’ ಎಂದು ವಿಧಾನಪರಿಷತ್ ಸದಸ್ಯ ಐವಾನ್ ಡಿಸೋಜಾ ಸೇರಿ ಇತರರು ಘೋಷಣೆ ಕೂಗಿದರು.
ರಾಜ್ಯಪಾಲರು ಮೊದಲ ಮತ್ತು ಕೊನೆ ಪ್ಯಾರಾ ಮಾತ್ರ ಓದಿದ ಕಾರಣ ಅವರು ಭಾಷಣ ಓದಿದ್ದಾರೆ ಎಂದೇ ಭಾವಿಸಲಾಗುತ್ತದೆ. ಹೀಗಾಗಿ ಅಧಿವೇಶನ ನಡೆಯುವುದಕ್ಕೆ ಸಮಸ್ಯೆ ಎದುರಾಗದು ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ವಿಶೇಷ ಅಧಿವೇಶನ: ಸರ್ಕಾರಕ್ಕೆ ಚೆಕ್ ಮೇಟ್ ಇಡ್ತಾರಾ ರಾಜ್ಯಪಾಲರು? ಕುತೂಹಲ ಮೂಡಿಸಿದ ನಡೆ!
ಸಂವಿಧಾನದ ಪ್ರಕಾರ ಭಾಷಣ ಮಾಡುವುದು ರಾಜ್ಯಪಾಲರ ಕರ್ತವ್ಯ. ರಾಜ್ಯಪಾಲರು ಅವರು ಸಿದ್ಧ ಮಾಡಿ ಭಾಷಣವನ್ನು ಓದುವಂತಿಲ್ಲ. ನರೇಗಾ ಬದಲಿ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ತಂದಿದ್ದಾರೆ. ಯೋಜನೆಯಲ್ಲಿ ಮಹಾತ್ಮ ಗಾಂಧೀಜಿ ಹೆಸರನ್ನು ತೆಗೆದುಹಾಕಿದ್ದಾರೆ. ಹೊಸ ಕಾಯ್ದೆಯಲ್ಲಿ ರಾಜ್ಯ ಸರ್ಕಾರ ಅಧಿಕಾರವನ್ನು ಕಿತ್ತುಹಾಕಿದ್ದಾರೆ. ವಿಪಕ್ಷಗಳು ಉದ್ದೇಶಪೂರ್ವಕವಾಗಿ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.
Published On - 11:27 am, Thu, 22 January 26