ಬೆಂಗಳೂರು: ಆರನೇ ತರಗತಿಯ ಸಮಾಜ ವಿಜ್ಞಾನದ ವಿಷಯದಲ್ಲಿ ಹೊಸ ಧರ್ಮಗಳ ಉದಯ ಎಂಬ 7ನೇ ಪಾಠಕ್ಕೆ ಸರ್ಕಾರ ಎಳ್ಳು ನೀರು ಬಿಟ್ಟಿದೆ. ಈ ಪುಸ್ತಕದಲ್ಲಿ ಬ್ರಾಹ್ಮಣ, ವೈದಿಕ ಆಚರಣೆ ಕುರಿತು ವಿವಾದಾತ್ಮಕ ಅಂಶಗಳಿವೆ. ಈ ಪಠ್ಯಗಳನ್ನ ಕೂಡಲೇ ಕೈಬಿಡಬೇಕು ಅಂತಾ ಬ್ರಾಹ್ಮಣ ಅಭಿವೃದ್ಧಿ ನಿಗಮ ಒತ್ತಾಯಿಸಿತ್ತು. ಎಚ್ಚೆತ್ತ ಶಿಕ್ಷಣ ಇಲಾಖೆ ವಿವಾದಾತ್ಮಕ ಪಾಠಗಳಿಗೆ ತಿಲಾಂಜಲಿ ಹಾಡಿದೆ.
ವಿವಾದಾತ್ಮಕ ಪಾಠಕ್ಕೆ ತಿಲಾಂಜಲಿ
ಅಂದಹಾಗೆ ಸಮಾಜ ವಿಜ್ಞಾನ ಪುಸ್ತಕ ಪುಟ ಸಂಖ್ಯೆ 82, 83ರಲ್ಲಿ ವೈದಿಕ ಆಚರಣೆ ಬಗ್ಗೆ ವಿವರಿಸಲಾಗಿತ್ತು. ವೈದಿಕ ಆಚರಣೆಯಲ್ಲಿ ಕೃಷಿಗೆ ನೆರವಾಗುತ್ತಿದ್ದ ಪ್ರಾಣಿಗಳನ್ನು ಕೊಲ್ಲಲಾಗುತ್ತಿತ್ತು. ಅಲ್ಲದೇ ಯಾಗ, ಯಜ್ಞಗಳಲ್ಲಿ ಆಹಾರ ಧಾನ್ಯ, ಹಾಲು ತುಪ್ಪವನ್ನ ದಹಿಸಲಾಗುತ್ತಿತ್ತು ಅಂತಾ ಉಲ್ಲೇಖಿಸಲಾಗಿತ್ತು. ಅಲ್ಲದೇ ಇದರಿಂದ ಆಹಾರದ ಅಭಾವ ಸೃಷ್ಟಿಯಾಗಿತ್ತು ಅಂತಾ ಪಠ್ಯದಲ್ಲಿ ಹೇಳಲಾಗಿದ್ದ ಅಂಶವನ್ನ ತೆಗೆಯಲಾಗಿದೆ.
‘ಜೈನ, ಬೌದ್ಧ ಧರ್ಮದ ಬಗೆಗಿನ ಪಠ್ಯಕ್ಕೆ ಬ್ರೇಕ್ ಹಾಕಿಲ್ಲ’
ಹೊಸ ಧರ್ಮಗಳ ಉದಯ ಎಂಬ ಸಂಪೂರ್ಣ ಪಾಠಕ್ಕೆ ಬ್ರೇಕ್ ಹಾಕಿಲ್ಲ. ಹೊಸ ಧರ್ಮಗಳು ಏಕೆ ಉದಯಿಸಿದವು? ಎಂಬ ವಿವಾದಾತ್ಮಕ ವಿಷಯಕ್ಕೆ ಮಾತ್ರ ಕತ್ತರಿ ಹಾಕಲಾಗಿದೆ. ಗೌತಮ ಬುದ್ಧ, ಮಹಾವೀರ ವಿಷಯದ ಕಡಿತದ ಬಗ್ಗೆ ನಿರ್ಧರಿಸಿಲ್ಲ. ಶಿಕ್ಷಣ ಸಚಿವರು ಈ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ ಅಂತ ಕರ್ನಾಟಕ ಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕ ಮಾದೇಗೌಡ ಸಚಿವರ ಹೆಗಲ ಮೇಲೆ ಹಾಕಿದ್ದಾರೆ. ಆದ್ರೆ ಜೈನ ಧರ್ಮದ 23ನೇ ತೀರ್ಥಂಕರ ಮಹಾವೀರ ಮತ್ತು ಬೌಧ ಧರ್ಮದ ಸ್ಥಾಪಕ ಬುದ್ಧನ ವಿಚಾರದ ಪಾಠಕ್ಕೂ ಬ್ರೇಕ್ ಹಾಕಲಾಗಿದೆ. ಇನ್ನು ಪಠ್ಯ ಪುಸ್ತಕದ 82, 83ರಲ್ಲಿದ್ದ ವೈದಿಕ ಆಚರಣೆ, 87ನೇ ಪುಟದಲ್ಲಿರುವ ಜೈನ ಮತ್ತು ಬೌದ್ಧ ಧರ್ಮದ ವಿಷಯಾಂಶಗಳನ್ನು ಮೌಲ್ಯ ಮಾಪನಕ್ಕೆ ಪರಿಗಣಿಸದಿರಲು ಶಿಕ್ಷಣ ಇಲಾಖೆ ಎಲ್ಲಾ ಬಿಇಒ, ಡಿಡಿಪಿಐ ಕಚೇರಿಗಳಿಗೆ ಸುತ್ತೋಲೆ ಹೊರಡಿಸುವಂತೆ ಆದೇಶ ನೀಡಿದೆ.
ಇನ್ನು ರಾಜ್ಯದಲ್ಲಿ ಹೊಸ ಧರ್ಮಗಳ ಉದಯ ಪಠ್ಯ ಕಡಿತದ ಬೆನ್ನಲ್ಲೇ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಇದನ್ನೆಲ್ಲಾ ಗಮನಿಸಿದ ಶಿಕ್ಷಣ ಸಚಿವ ಸುರೇಶ್ ಕುಮಾರ್ ಉಲ್ಟಾ ಹೊಡೆದಿದ್ದಾರೆ. ಜೈನ ಮತ್ತು ಬೌದ್ಧ ಸೇರಿದಂತೆ ಯಾವುದೇ ಧರ್ಮದ ಪರಿಚಯ ಪಾಠಗಳಿಗೆ ಕೊಕ್ ನೀಡಲಾಗಿಲ್ಲ. ಹೊಸ ಧರ್ಮಗಳ ಉದಯ ಏಕೆ ಉದಯಿಸ್ಪಟ್ಟವು ಎಂಬುದು ಕೆಲವು ಮಹನೀಯರು, ಸಮುದಾಯದವರ ಮನವಿ ಮೇರೆಗೆ ಕೈ ಬಿಡಲಾಗಿದೆ. ಚಿಕ್ಕ ಮಕ್ಕಳಿಗೆ ಆ ಧರ್ಮದ ಪಾಠ ಅಗತ್ಯವಿಲ್ಲ ಅಂತ ಸ್ಪಷ್ಟೀಕರಣ ನೀಡಿದ್ದಾರೆ.
ಪಠ್ಯ ಪುಸ್ತಕದ ಒಂದು ವಿವಾದ ಇತ್ಯರ್ಥ ಮಾಡಲು ಹೋದ ಸರ್ಕಾರ, ಮತ್ತೊಂದು ವಿವಾದವನ್ನ ಮೈ ಮೇಲೆ ಎಳೆದುಕೊಂಡು ಮತ್ತೆ ಇದೀಗ ಏನೂ ಆಗಿಲ್ಲ ಅನ್ನೋ ರೀತಿ ಸ್ಪಷ್ಟನೆ ನೀಡಿದೆ. ಇಂತಹ ವಿಷಯಗಳಲ್ಲಿ ಸರ್ಕಾರ ಸಂಬಂಧಪಟ್ಟವರ ಜೊತೆ ಸಭೆ ನಡೆಸಿ ತೀರ್ಮಾನ ತೆಗೆದುಕೊಂಡಿದ್ದರೇ ಇಂತಹ ವಿವಾದ ಹುಟ್ಟುತ್ತಿರಲಿಲ್ಲ.
ಇನ್ನು ಈ ಸಮಾಜ ವಿಜ್ಞಾನ ಪಠ್ಯ ಕರ್ನಾಟಕ ಪಠ್ಯಪುಸ್ತಕ ಪ್ರಾಧಿಕಾರದಿಂದ 2016-17ನೇ ಸಾಲಿನಲ್ಲಿ ಮುದ್ರಣವಾಗಿರುವ ಪುಸ್ತಕ. ಆಗ ಪ್ರೊ.ಟಿ.ಆರ್.ಚಂದ್ರಶೇಖರ್ ಪಠ್ಯ ಪುಸ್ತಕ ರಚನಾ ಸಮಿತಿಯ ಅಧ್ಯಕ್ಷರಾಗಿದ್ದರು. ಪಠ್ಯ ಪುಸ್ತಕ ರಚನಾ ಸಮಿತಿಯ ವ್ಯವಸ್ಥಾಪಕ ನಿರ್ದೇಶಕರಾಗಿ ನರಸಿಂಹಯ್ಯ ಮತ್ತು ಪ್ರೊ. ಬರಗೂರು ರಾಮಚಂದ್ರಪ್ಪ ಸರ್ವಾಧ್ಯಕ್ಷರಾಗಿದ್ದರು.
ಹೊಸ ಧರ್ಮಗಳ ಉದಯ ಪಾಠ ರಚನೆ ಹೇಗಾಯ್ತು?
ಪ್ರಾಚೀನ ಇತಿಹಾಸ (NCERT) ಎಂಬ ಪುಸ್ತಕದಿಂದ ಹೊಸ ಧರ್ಮಗಳ ಉದಯ ಎಂಬ ಅಂಶ ತೆಗೆದುಕೊಳ್ಳಲಾಗಿದೆ. ಭಾರತೀಯ ವಿದ್ಯಾಭವನದ ವೇಗ ಯುಗ ಎಂಬ ಪುಸ್ತಕದಿಂದಲೂ ಕೆಲ ಅಂಶ ತೆಗೆದುಕೊಳ್ಳಲಾಗಿದೆ. ಈ ಪುಸ್ತಕದಲ್ಲಿನ ಅಂಶಗಳನ್ನು ಆರಿಸಿ ಪಠ್ಯ ರಚನೆ ಮಾಡಲಾಗಿದೆ, ಊಹೆಗಳಿಂದ ಹೊಸ ಧರ್ಮಗಳ ಪಾಠ ರಚನೆಯಾಗಿಲ್ಲ.
ಈ ಪಾಠ ರಚನೆಯಾಗಿದ್ದು ಹೇಗೆ? ಯಾವಾಗ?
ಈ ಪುಸ್ತಕ ರಚನೆ ಆಗುವ ವೇಳೆ ಸಿದ್ದರಾಮಯ್ಯ ಸಿಎಂ ಆಗಿದ್ದರು. ಆಗ ಬಜೆಟ್ನಲ್ಲಿ ಪುಸ್ತಕಕ್ಕೆ ಅನುಮೋದನೆ ಸಿಕ್ಕಿದ ಬಳಿಕ ಪರಿಷ್ಕರಣೆ ಮಾಡಲಾಯ್ತು. ಬಜೆಟ್ ಆದ ನಂತರ ಪಠ್ಯ ರಚನೆಗೆ ಎಲ್ಲಾ ವಿಷಯಗಳಿಗೂ ಸೇರಿ ಒಟ್ಟು 27 ಸಮಿತಿ ಮಾಡಲಾಯಿತು. ಆಗ 6 ಮತ್ತು 7ನೇ ತರಗತಿ ಪಠ್ಯ ಪುಸ್ತಕ ರಚನೆಗೆ ಪ್ರೊ. ಟಿ.ಆರ್.ಚಂದ್ರಶೇಖರ್ ಅಧ್ಯಕ್ಷರಾಗಿದ್ದರು. ಒಟ್ಟು 5 ಜನ ಸದಸ್ಯರಿಂದ ಈ ಪಠ್ಯ ರಚನೆಯಾಗಿದೆ. ಎಲ್ಲ ವಿಷಯಗಳ ಪಠ್ಯಕ್ಕೂ ಎರಡೆರಡು ಕಮಿಟಿ ಇರುತ್ತೆ. 2016-17ರಲ್ಲಿ ಅನುಷ್ಠಾನ ಮಾಡಲಾಗಿತ್ತು. ಆಗ ಯಾವುದೇ ರೀತಿಯ ಅಪೋಸ್ ಕೇಳಿ ಬರ್ಲಿಲ್ಲ ಎಂದು ಪಠ್ಯ ಪುಸ್ತಕ ರಚನಾ ಸಮಿತಿಯ ಸರ್ವಾಧ್ಯಕ್ಷ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ಇದನ್ನೂ ಓದಿ: Text Book Controversy: ಬರಗೂರರ ‘ಇತಿಹಾಸ’ವನ್ನು ಸರಿಯಾಗಿ ತಿದ್ದಿದ ಶಿಕ್ಷಣ ಇಲಾಖೆ