ಜೂನ್,ಜುಲೈ ತಿಂಗಳಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಕೆನೆಭರಿತ ಹಾಲಿನ ಪುಡಿ ವಿತರಣೆಗೆ ಅನುದಾನ ಬಿಡುಗಡೆ
ಶಾಲೆಗಳು ಭೌತಿಕವಾಗಿ ನಡೆಯದೇ ಇದ್ದರೂ ಮಧ್ಯಾಹ್ನ ಉಪಹಾರದ ಆಹಾರ ಧಾನ್ಯಗಳು, ಅಡುಗೆ ಎಣ್ಣೆ ಸೇರಿದಂತೆ ಪೂರಕ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ನಿರಂತರವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರು: ವಿದ್ಯಾರ್ಥಿಗಳಿಗೆ ಪೌಷ್ಟಿಕಾಂಶಯುತ ಆಹಾರ ದೊರೆಯುವಂತೆ ಮಾಡಲು ಜೂನ್, ಜುಲೈ ತಿಂಗಳುಗಳಿಗೆ ಕೆನೆಭರಿತ ಹಾಲಿನ ಪುಡಿಯನ್ನು ವಿತರಿಸಲು ಶಿಕ್ಷಣ ಇಲಾಖೆ ಅನುದಾನ ಬಿಡುಗಡೆ ಮಾಡಿದೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದ್ದಾರೆ. ಪ್ರತಿ ತಿಂಗಳು ಅರ್ಧ ಕೆಜಿ ಕೆನೆಭರಿತ ಹಾಲಿನಪುಡಿಯನ್ನು ಸರ್ಕಾಋಇ ಶಾಲೆಗಳ ವಿದ್ಯಾರ್ಥಿಗಳಿಗೆ ವಿತರಣೆ ಮಾಡಲಾಗುತ್ತಿದ್ದು, ಈ ಮೂಲಕ ಕ್ಷೀರಭಾಗ್ಯ ಯೋಜನೆ ಅನುಷ್ಠಾನಗೊಳಿಸಲಾಗುವುದು. ಸಂಕಷ್ಟದಲ್ಲಿರುವ ರೈತರು ಮತ್ತು ಹಾಲು ಉತ್ಪಾದಕರಿಗೂ ಸರ್ಕಾರದಿಂದ ಸಕಾಲಿಕ ನೆರವು ಒದಗಿಸಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಶಾಲೆಗಳು ಭೌತಿಕವಾಗಿ ನಡೆಯದೇ ಇದ್ದರೂ ಮಧ್ಯಾಹ್ನ ಉಪಹಾರದ ಆಹಾರ ಧಾನ್ಯಗಳು, ಅಡುಗೆ ಎಣ್ಣೆ ಸೇರಿದಂತೆ ಪೂರಕ ಸಾಮಗ್ರಿಗಳನ್ನು ವಿದ್ಯಾರ್ಥಿಗಳಿಗೆ ನಿರಂತರವಾಗಿ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದೇವೆ. ಇಂತಹ ಸಂಕಷ್ಟದ ಸಮಯದಲ್ಲಿ ನಮ್ಮ ಸರ್ಕಾರಿ ಶಾಲಾ ಮಕ್ಕಳಿಗೆ ಪೌಷ್ಟಿಕಾಂಶದ ಆಹಾರ ದೊರಕಬೇಕು ಎಂಬ ಸದುದ್ದೇಶದಿಂದ ಈಗ ಜೂನ್ ಹಾಗೂ ಜುಲೈ ತಿಂಗಳುಗಳಿಗೆ ಸಂಬಂಧಿಸಿದಂತೆ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳಿಗೂ ಅರ್ಧ ಕಿಲೋಗ್ರಾಂ ಕೆನೆಭರಿತ ಹಾಲಿನ ಪುಡಿಯನ್ನು ಒದಗಿಸಲು ಆಲೋಚಿಸಿದ್ದೇವೆ. ಆ ಮೂಲಕ ನಮ್ಮ ವಿದ್ಯಾರ್ಥಿಗಳ ಆರೋಗ್ಯಕ್ಕೆ ಪರಿಪೂರ್ಣ ಬೆಂಬಲವನ್ನು ದೊರಕಿಸುವ, ಅವರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉದ್ದೇಶ ಸರ್ಕಾರದ್ದಾಗಿದೆ ಎಂದು ಅವರು ತಿಳಿಸಿದ್ದಾರೆ.
ಸರ್ಕಾರದ ಈ ನಿರ್ಧಾರವು ಮಕ್ಕಳ ಪೌಷ್ಟಿಕತೆಗೆ ಪೂರಕವಾಗುವುದಷ್ಟೇ ಅಲ್ಲ, ಸಂಕಷ್ಟದಲ್ಲಿರುವ ಗ್ರಾಮೀಣ ಹಾಲು ಉತ್ಪಾದಕರ, ರೈತರ ಆರ್ಥಿಕ ಮಟ್ಟ ಸುಧಾರಿಸಲು ನೆರವಾಗಲಿದೆ ಎಂದು ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಈ ಹಾಲಿನ ಪುಡಿಯ ಪ್ಯಾಕೆಟ್ ವಿತರಣಾ ಪ್ರಕ್ರಿಯೆಯನ್ನು ಸಮರ್ಪಕವಾಗಿ ನಿರ್ವಹಿಸುವ ಜವಾಬ್ದಾರಿ ನಿಗದಿಪಡಿಸಲಾಗಿದೆ ಎಂದಿರುವ ಸಚಿವ ಸುರೇಶ್ ಕುಮಾರ್, ತಮ್ಮ ಇಲಾಖೆಯು ಸಲ್ಲಿಸಿದ ಪ್ರಸ್ತಾವನೆಗೆ ಅತಿ ಶೀಘ್ರದಲ್ಲಿ ಅನುಮೋದನೆ ನೀಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
(Karnataka Govt distributes skim milk powder government school students in June and July )