ಕರ್ನಾಟಕದಲ್ಲಿ 5,431 ಸರ್ಕಾರಿ ಹುದ್ದೆಗಳ ನೇಮಕಾತಿ: FDA, SDA ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ 5,431 ಪ್ರಥಮ ದರ್ಜೆ ಸಹಾಯಕ (FDA), ದ್ವಿತೀಯ ದರ್ಜೆ ಸಹಾಯಕ (SDA) ಮತ್ತು ಗ್ರೂಪ್‌-C ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟವಾಗಿದೆ. PUC ಮತ್ತು ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ಅಕ್ಟೋಬರ್ 30 ರಿಂದ ಪ್ರಾರಂಭವಾಗಿ ನವೆಂಬರ್ 25 ಕೊನೆಯ ದಿನವಾಗಿದೆ. ಕರ್ನಾಟಕ ಸರ್ಕಾರಿ ಉದ್ಯೋಗ ಪಡೆಯಲು ಇದೊಂದು ಸುವರ್ಣಾವಕಾಶ.

ಕರ್ನಾಟಕದಲ್ಲಿ 5,431 ಸರ್ಕಾರಿ ಹುದ್ದೆಗಳ ನೇಮಕಾತಿ: FDA, SDA ಸೇರಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಸರ್ಕಾರಿ ಉದ್ಯೋಗ
Image Credit source: Getty Images

Updated on: Nov 19, 2026 | 2:41 PM

ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗ ಪಡೆಯುವ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಉತ್ತಮ ಅವಕಾಶವೊಂದು ಒದಗಿಬಂದಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಪ್ರಥಮ ದರ್ಜೆ ಸಹಾಯಕ (FDA), ದ್ವಿತೀಯ ದರ್ಜೆ ಸಹಾಯಕ (SDA) ಸೇರಿದಂತೆ ವಿವಿಧ ಗ್ರೂಪ್‌-C ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು, ಮಂಡಳಿಗಳು ಮತ್ತು ನಿಗಮಗಳಲ್ಲಿ ಒಟ್ಟು 5,431 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಅಕ್ಟೋಬರ್ 30ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ನವೆಂಬರ್ 25 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಪಿಯುಸಿ ಮತ್ತು ಪದವಿ ಪೂರ್ಣಗೊಳಿಸಿರುವ ಅಭ್ಯರ್ಥಿಗಳಿಗೆ ಈ ನೇಮಕಾತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಆಸಕ್ತರು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ.

Loading...

ಯಾವೆಲ್ಲಾ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ?

KEA ಈ ನೇಮಕಾತಿಯಡಿ ವಿವಿಧ ಸರ್ಕಾರಿ ಇಲಾಖೆಗಳಲ್ಲಿನ ಆಡಳಿತಾತ್ಮಕ, ಲೆಕ್ಕಪತ್ರ ಮತ್ತು ಇತರ ವಿಭಾಗಗಳ ಹುದ್ದೆಗಳನ್ನು ಭರ್ತಿ ಮಾಡಲಿದೆ. ಪ್ರಥಮ ದರ್ಜೆ ಸಹಾಯಕ (FDA), ದ್ವಿತೀಯ ದರ್ಜೆ ಸಹಾಯಕ (SDA), ಅಕೌಂಟ್ಸ್ ಅಸಿಸ್ಟೆಂಟ್, ಜೂನಿಯರ್ ಅಕೌಂಟ್ಸ್ ಅಸಿಸ್ಟೆಂಟ್, ಗ್ರಾಮ ಪಂಚಾಯಿತಿ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಸಹಾಯಕರು, ವಾರ್ಡನ್, ಹಾಸ್ಟೆಲ್ ಸೂಪರಿಂಟೆಂಡೆಂಟ್, ಜೂನಿಯರ್ ಅಸಿಸ್ಟೆಂಟ್, ವಾಣಿಜ್ಯ ತೆರಿಗೆ ನಿರೀಕ್ಷಕರು, ಸಬ್ ರಿಜಿಸ್ಟ್ರಾರ್ ಹಾಗೂ ಸಹಕಾರ ಸಂಘಗಳ ಲೆಕ್ಕ ಪರಿಶೋಧಕರಂತಹ ಹುದ್ದೆಗಳು ನೇಮಕಾತಿಯಲ್ಲಿ ಸೇರಿವೆ.

ಈ ಹುದ್ದೆಗಳನ್ನು ಉಳಿಕೆ ಮೂಲ ವೃಂದ (RPC) ಮತ್ತು ಕಲ್ಯಾಣ ಕರ್ನಾಟಕ (KK) ವೃಂದಗಳ ಅಡಿಯಲ್ಲಿ ಭರ್ತಿ ಮಾಡಲಾಗುತ್ತದೆ. ಅಭ್ಯರ್ಥಿಗಳು ತಾವು ಅರ್ಜಿ ಸಲ್ಲಿಸುವ ಹುದ್ದೆ ಮತ್ತು ವೃಂದಕ್ಕೆ ಸಂಬಂಧಿಸಿದ ಅಧಿಸೂಚನೆಯನ್ನು ಪ್ರತ್ಯೇಕವಾಗಿ ಪರಿಶೀಲಿಸಬೇಕು.

ಒಟ್ಟು 5,431 ಹುದ್ದೆಗಳ ವಿವರ:

KEA ಒಟ್ಟು ನಾಲ್ಕು ಪ್ರತ್ಯೇಕ ಅಧಿಸೂಚನೆಗಳ ಮೂಲಕ 5,431 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. RPC ವೃಂದದ ಪದವಿ ಮಟ್ಟದ ಹುದ್ದೆಗಳಿಗೆ 2,163 ಮತ್ತು ಪಿಯುಸಿ ಮಟ್ಟದ ಹುದ್ದೆಗಳಿಗೆ 2,070 ಸ್ಥಾನಗಳನ್ನು ಮೀಸಲಿಡಲಾಗಿದೆ. ಇನ್ನು ಕಲ್ಯಾಣ ಕರ್ನಾಟಕ ವೃಂದದಲ್ಲಿ 563 FDA ಹುದ್ದೆಗಳು ಮತ್ತು 635 SDA ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಹೀಗೆ ನಾಲ್ಕು ವಿಭಾಗಗಳನ್ನು ಸೇರಿಸಿದರೆ ಒಟ್ಟು 5,431 ಹುದ್ದೆಗಳಾಗುತ್ತವೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿ ಸೂಕ್ತ ಹುದ್ದೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಶೈಕ್ಷಣಿಕ ಅರ್ಹತೆ ಏನಿರಬೇಕು?

ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಆಯಾ ಹುದ್ದೆಗಳಿಗೆ ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆಯನ್ನು ಹೊಂದಿರಬೇಕು. ದ್ವಿತೀಯ ದರ್ಜೆ ಸಹಾಯಕ (SDA) ಮತ್ತು ಇತರ ಪಿಯುಸಿ ಮಟ್ಟದ ಹುದ್ದೆಗಳಿಗೆ ಮಾನ್ಯತೆ ಪಡೆದ ಮಂಡಳಿಯಿಂದ ದ್ವಿತೀಯ ಪಿಯುಸಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ಇನ್ನು ಪ್ರಥಮ ದರ್ಜೆ ಸಹಾಯಕ (FDA) ಮತ್ತು ಪದವಿ ಮಟ್ಟದ ಹುದ್ದೆಗಳಿಗೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪೂರ್ಣಗೊಳಿಸಿರಬೇಕು. ಕೆಲವು ತಾಂತ್ರಿಕ ಮತ್ತು ವಿಶೇಷ ಹುದ್ದೆಗಳಿಗೆ ಸಂಬಂಧಪಟ್ಟ ವಿಷಯದಲ್ಲಿ ಡಿಪ್ಲೊಮಾ ಅಥವಾ ಇತರ ನಿರ್ದಿಷ್ಟ ವಿದ್ಯಾರ್ಹತೆ ಅಗತ್ಯವಿರುತ್ತದೆ. ಹೀಗಾಗಿ ಅರ್ಜಿ ಸಲ್ಲಿಸುವ ಮೊದಲು ಹುದ್ದೆವಾರು ಅರ್ಹತೆಯನ್ನು ಪರಿಶೀಲಿಸುವುದು ಮುಖ್ಯ.

ವಯೋಮಿತಿ ಎಷ್ಟಿರಬೇಕು?

ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ವಯಸ್ಸಾಗಿರಬೇಕು. ಗರಿಷ್ಠ ವಯೋಮಿತಿ ಅಭ್ಯರ್ಥಿಗಳ ವರ್ಗಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 40 ವರ್ಷ, 2A, 2B, 3A ಮತ್ತು 3B ವರ್ಗದ ಅಭ್ಯರ್ಥಿಗಳಿಗೆ 43 ವರ್ಷ ಹಾಗೂ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 45 ವರ್ಷ ಗರಿಷ್ಠ ವಯೋಮಿತಿ ನಿಗದಿಪಡಿಸಲಾಗಿದೆ. ಇತರ ವಿಶೇಷ ವರ್ಗಗಳಿಗೆ ಅನ್ವಯಿಸುವ ವಯೋಮಿತಿ ಸಡಿಲಿಕೆಗಳ ಕುರಿತು ಅಧಿಕೃತ ಅಧಿಸೂಚನೆಯಲ್ಲಿ ಮಾಹಿತಿ ಪಡೆಯಬಹುದು.

ಅರ್ಜಿ ಶುಲ್ಕ ಎಷ್ಟು?

ಅಭ್ಯರ್ಥಿಗಳ ವರ್ಗಕ್ಕೆ ಅನುಗುಣವಾಗಿ ಅರ್ಜಿ ಶುಲ್ಕವನ್ನು ನಿಗದಿಪಡಿಸಲಾಗಿದೆ. ಸಾಮಾನ್ಯ ವರ್ಗ ಹಾಗೂ 2A, 2B, 3A ಮತ್ತು 3B ಅಭ್ಯರ್ಥಿಗಳು ಒಟ್ಟು 750 ರೂ. ಪಾವತಿಸಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1, ಮಾಜಿ ಸೈನಿಕರು ಮತ್ತು ತೃತೀಯ ಲಿಂಗದ ಅಭ್ಯರ್ಥಿಗಳು 500 ರೂ. ಪಾವತಿಸಬೇಕಾಗುತ್ತದೆ. ವಿಶೇಷ ಚೇತನ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ವಿನಾಯಿತಿ ಇದ್ದು, 250 ರೂ. ಪ್ರಕ್ರಿಯೆ ಶುಲ್ಕ ಪಾವತಿಸಬೇಕಾಗುತ್ತದೆ.

ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?

ಈ ನೇಮಕಾತಿಗೆ ಅಭ್ಯರ್ಥಿಗಳನ್ನು ಸ್ಪರ್ಧಾತ್ಮಕ ಲಿಖಿತ ಪರೀಕ್ಷೆ, ಅನ್ವಯಿಸುವವರಿಗೆ ಕನ್ನಡ ಭಾಷಾ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿದ್ದು, ಮೊದಲ ಪತ್ರಿಕೆಯಲ್ಲಿ ಸಾಮಾನ್ಯ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಇರಲಿವೆ. ಎರಡನೇ ಪತ್ರಿಕೆಯಲ್ಲಿ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಪ್ರತಿ ಪತ್ರಿಕೆಗೆ 100 ಅಂಕಗಳಿದ್ದು, ಒಟ್ಟು 200 ಅಂಕಗಳಿಗೆ ಪರೀಕ್ಷೆ ನಡೆಯಲಿದೆ. ಪ್ರತಿ ಪತ್ರಿಕೆಗೆ ಎರಡು ಗಂಟೆಗಳ ಕಾಲಾವಕಾಶ ನೀಡಲಾಗುತ್ತದೆ. ತಪ್ಪು ಉತ್ತರಗಳಿಗೆ 0.25 ಅಂಕಗಳ ಋಣಾತ್ಮಕ ಮೌಲ್ಯಮಾಪನವಿರುತ್ತದೆ. ಕನ್ನಡ ಭಾಷಾ ಪರೀಕ್ಷೆಯು 150 ಅಂಕಗಳಿಗೆ ನಡೆಯಲಿದ್ದು, ಇದು ಅರ್ಹತಾ ಪರೀಕ್ಷೆಯಾಗಿದೆ. ಅನ್ವಯಿಸುವ ವಿನಾಯಿತಿ ನಿಯಮಗಳನ್ನು ಅಭ್ಯರ್ಥಿಗಳು ಗಮನಿಸಬೇಕು.

ಪರೀಕ್ಷೆ ಯಾವಾಗ ನಡೆಯಲಿದೆ?

KEA ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ ಕನ್ನಡ ಭಾಷಾ ಪರೀಕ್ಷೆ 2027ರ ಜನವರಿ 8ರಂದು ನಡೆಯಲಿದೆ. ಪದವಿ ಮಟ್ಟದ ಕಲ್ಯಾಣ ಕರ್ನಾಟಕ ವೃಂದದ ಪರೀಕ್ಷೆ ಜನವರಿ 9ರಂದು ಮತ್ತು RPC ವೃಂದದ ಪರೀಕ್ಷೆ ಜನವರಿ 10ರಂದು ನಡೆಯಲಿದೆ. ಇನ್ನು ಪಿಯುಸಿ ಮಟ್ಟದ ಕಲ್ಯಾಣ ಕರ್ನಾಟಕ ವೃಂದದ ಪರೀಕ್ಷೆ ಜನವರಿ 16ರಂದು ಹಾಗೂ RPC ವೃಂದದ ಪರೀಕ್ಷೆ ಜನವರಿ 17ರಂದು ನಡೆಯಲಿದೆ.

ಇದನ್ನೂ ಓದಿ: ಮೊದಲ ಉದ್ಯೋಗ ಪಡೆಯುವುದು ಹೇಗೆ? ಫ್ರೆಶರ್‌ಗಳು ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರಗಳಿವು

ಆಯ್ಕೆಯಾದವರಿಗೆ ಎಷ್ಟು ವೇತನ ಸಿಗಲಿದೆ?

ಈ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಹುದ್ದೆ ಮತ್ತು ಇಲಾಖೆಗೆ ಅನುಗುಣವಾಗಿ ವೇತನ ನೀಡಲಾಗುತ್ತದೆ. ಪಿಯುಸಿ ಮಟ್ಟದ ಕೆಲವು ಹುದ್ದೆಗಳಿಗೆ 34,100 ರೂ.ನಿಂದ 67,600 ರೂ.ವರೆಗೆ ವೇತನ ಶ್ರೇಣಿ ನಿಗದಿಪಡಿಸಲಾಗಿದೆ. FDA ಮತ್ತು ಇತರ ಪದವಿ ಮಟ್ಟದ ಹುದ್ದೆಗಳಿಗೆ 44,425 ರೂ.ನಿಂದ 83,700 ರೂ.ವರೆಗೆ ವೇತನ ಶ್ರೇಣಿ ಇರಲಿದೆ. ಕೆಲವು ವಿಶೇಷ ಮತ್ತು ಮೇಲ್ವಿಚಾರಕ ಹುದ್ದೆಗಳಿಗೆ ಇದಕ್ಕಿಂತ ಹೆಚ್ಚಿನ ವೇತನ ಶ್ರೇಣಿಯೂ ಲಭ್ಯವಿದೆ. ನಿಖರ ವೇತನವನ್ನು ಆಯಾ ಹುದ್ದೆಯ ಅಧಿಸೂಚನೆಯಲ್ಲಿ ಪರಿಶೀಲಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ?

ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಅಲ್ಲಿ ನೇಮಕಾತಿ ವಿಭಾಗದಲ್ಲಿ KEA FDA, SDA Recruitment 2026 ಅಧಿಸೂಚನೆಯನ್ನು ಆಯ್ಕೆ ಮಾಡಿಕೊಂಡು ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಬೇಕು.

ಮೊದಲು ಅಗತ್ಯ ವೈಯಕ್ತಿಕ ಮತ್ತು ಶೈಕ್ಷಣಿಕ ಮಾಹಿತಿಯನ್ನು ನಮೂದಿಸಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳು, ಫೋಟೋ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಬೇಕು. ನಿಗದಿತ ಅರ್ಜಿ ಶುಲ್ಕ ಪಾವತಿಸಿ ಅರ್ಜಿಯನ್ನು ಸಲ್ಲಿಸಬೇಕು. ಮುಂದಿನ ಬಳಕೆಗಾಗಿ ಅರ್ಜಿಯ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಇಟ್ಟುಕೊಳ್ಳುವುದು ಉತ್ತಮ.

ಅಧಿಕೃತ ವೆಬ್‌ಸೈಟ್:

ಅರ್ಜಿ ಸಲ್ಲಿಕೆ, ಅಧಿಸೂಚನೆ ಮತ್ತು ನೇಮಕಾತಿಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ https://cetonline.karnataka.gov.in/ ಗೆ ಭೇಟಿ ನೀಡಬಹುದು. ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮೊದಲು ತಮ್ಮ ವಿದ್ಯಾರ್ಹತೆ, ವಯೋಮಿತಿ, ಮೀಸಲಾತಿ ಮತ್ತು ಹುದ್ದೆವಾರು ಅರ್ಹತೆಗಳನ್ನು ಅಧಿಕೃತ ಅಧಿಸೂಚನೆಯಲ್ಲಿ ಪರಿಶೀಲಿಸಿಕೊಳ್ಳಬೇಕು.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ಅಕ್ಷತಾ ವರ್ಕಾಡಿ

ಅಕ್ಷತಾ ವರ್ಕಾಡಿ – ಮೂಲತಃ ಕಾಸರಗೋಡು ಜಿಲ್ಲೆಯ ಮಂಜೇಶ್ವರದ ವರ್ಕಾಡಿಯವರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು, ಟಿವಿ9 ಡಿಜಿಟಲ್​ ಮೂಲಕ ವೃತ್ತಿ ಜೀವನವನ್ನು ಆರಂಭಿಸಿದ್ದಾರೆ. ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇವರಿಗಿದೆ. ಸದ್ಯ ಆಧ್ಯಾತ್ಮ, ಶಿಕ್ಷಣ, ಉದ್ಯೋಗವಕಾಶ, ರಾಜಕೀಯ, ಕ್ರೈಂ ಸುದ್ದಿಗಳನ್ನು ಬರೆಯುತ್ತಿದ್ದು, ಇವರು ಓದುಗರಿಗೆ ಉತ್ತಮ ಹಾಗೂ ಆಸಕ್ತಿದಾಯಕ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us