ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲೋನ್ ಪ್ರಕರಣ ಸಿಐಡಿ ತನಿಖೆ: ರಮೇಶ್ ಜಾರಕಿಹೊಳಿಗೆ ಸಂಕಷ್ಟ
ಬೆಳಗಾವಿಯ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲೋನ್ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗಿದೆ.
ಬೆಂಗಳೂರು, (ಜನವರಿ 19): ಬೆಳಗಾವಿಯ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲೋನ್ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ವಹಿಸಿದೆ. ಬೆಳಗಾವಿ ಜಿಲ್ಲೆ ಗೋಕಾಕ್ ತಾಲೂಕಿನಲ್ಲಿರುವ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಹೆಸರಿನಲ್ಲಿ ಅಪೆಕ್ಸ್ ಬ್ಯಾಂಕ್ನಿಂದ ಕೋಟ್ಯಾಂತರ ರೂಪಾಯಿ ಸಾಲ ಪಡೆದು ಮರುಪಾವತಿಸದ ಹಿನ್ನೆಲೆಯಲ್ಲಿ ರಮೇಶ್ ಜಾರಕಿಹೊಳಿ ಸೇರಿದಂತೆ ಇತರರ ವಿರುದ್ಧ ದೂರು ದಾಖಲಾಗಿದೆ. ಇದೀಗ ರಾಜ್ಯ ಸರ್ಕಾರ, ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿಗೆ ಸಂಕಷ್ಟ ಎದುರಾಗಿದೆ.
ಮಾಜಿ ಸಚಿವ, ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ವಿವಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನಲ್ಲಿ ಸಾಲ ಪಡೆದು ಪಾವತಿಸದೇ ಮೋಸ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಬ್ಯಾಂಕ್ ಮ್ಯಾನೇಜರ್ ರಾಜಣ್ಣ ವಿವಿಪುರಂ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಆರೋಪಿಗಳು ತಾವು ಪಡೆದ ಸಾಲವನ್ನು ಬ್ಯಾಂಕ್ಗೆ ಮರುಪಾವತಿ ಮಾಡುವುದರಿಂದ ತಪ್ಪಿಸಿಕೊಂಡು ಬ್ಯಾಂಕ್ಗೆ ಮೋಸ ಮಾಡಬೇಕೆಂಬ ಉದ್ದೇಶದಿಂದ ಬ್ಯಾಂಕ್ನವರಿಗೆ ಯಾವುದೇ ಮಾಹಿತಿ ನೀಡದೆ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲಿಮಿಟೆಡ್ ಕಂಪನಿಯ ಆಡಳಿತ ಮಂಡಳಿಯಲಿದ ತಮ್ಮ ಹುದ್ದೆಗಳಿಂದ ಹೊರಬಂದು ಸಂಬಂಧವಿಲ್ಲದ ವ್ಯಕ್ತಿಗಳನ್ನು ಕಂಪನಿಗೆ ನಿರ್ದೇಶಕರನ್ನಾಗಿ ನೇಮಿಸಿ ಬ್ಯಾಂಕ್ನವರಿಗೆ ನಂಬಿಕೆ ದ್ರೋಹವೆಸಗಿ ಮೋಸ ಮಾಡಿದ್ದಾರೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಐಪಿಸಿ ಸೆಕ್ಷನ್ 420 (ವಂಚನೆ) ಪ್ರಕರಣದ A1 ಶಾಸಕ ರಮೇಶ್ ಜಾರಕಿಹೊಳಿ, ವಸಂತ್ ವಿ ಪಾಟೀಲ್, ಶಂಕರ್ ಪವಾಡೆ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಬ್ಯಾಂಕ್ಗೆ ಸಾಲ ತೀರಿಸದ ಆರೋಪ: ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲು
ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲಿಮಿಟೆಡ್ ಕಂಪನಿ ಹೆಸರಿನಲ್ಲಿ ಚಾಮರಾಜಪೇಟೆಯ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ನಿಂದ 2013ರಿಂದ 2017ರವರೆಗೆ ಒಟ್ಟು 232 ಕೋಟಿ 88 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಬಳಿಕ 2023ರ ವೇಳೆಗೆ 439 ಕೋಟಿ 7 ಲಕ್ಷ ರೂ. ಸಾಲ ಬಾಕಿ ಉಳಿದಿತ್ತು. ಆದ್ರೆ, ಸಾಲ ಮರುಪಾವತಿಸದ ಹಿನ್ನೆಲೆಯಲ್ಲಿ ಬ್ಯಾಂಕ್ ಮ್ಯಾನೇಜರ್ ರಾಜಣ್ಣ ಅವರು ವಿವಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ, ವಸಂತ್ ವಿ.ಪಾಟೀಲ್, ಶಂಕರ್ ಪವಾಡೆ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಲಿಮಿಟಿಡ್ ಇಬ್ಬರು ಪದಾಧಿಕಾರಿಗಳ ವಿರುದ್ಧವೂ ಎಫ್ಐಆರ್ ದಾಖಲಾಗಿದೆ. ಈ ಸಂಬಂಧ ಪ್ರಕರಣದಲ್ಲಿ ರಮೇಶ್ ಜಾರಕಿಹೊಳಿ ಎ1 ಆರೋಪಿಯಾಗಿದ್ದಾರೆ. ಇದೀಗ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:05 pm, Fri, 19 January 24