
ಬೆಂಗಳೂರು, ಆಗಸ್ಟ್ 17: ಕೋಲ್ಕತ್ತದಲ್ಲಿ ವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿರುವುದನ್ನು ಖಂಡಿಸಿ ಕರ್ನಾಟಕದಾದ್ಯಂತ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯರು ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಇಂದು ಆಸ್ಪತ್ರೆಗಳಲ್ಲಿ ಎಮರ್ಜನ್ಸಿ ಹೊರತುಪಡಿಸಿ ಹೊರರೋಗಿ ಸೇವೆ ವಿಭಾಗ (ಒಪಿಡಿ) ಲಭ್ಯವಿರುವುದಿಲ್ಲ. ಬೆಳಗ್ಗೆ 6 ಗಂಟೆಯಿಂದ ಭಾನುವಾರ ಬೆಳಗ್ಗೆ 6 ಗಂಟೆಯವರೆಗೂ ಆಸ್ಪತ್ರೆ ಓಪಿಡಿ ಬಂದ್ ಆಗಿರಲಿದೆ. ವೈದ್ಯರ ಪ್ರತಿಭಟನೆಯ ಕಾರಣ ರಾಜ್ಯದ ಆಸ್ಪತ್ರೆಗಳಲ್ಲಿ ಏನೇನು ಲಭ್ಯವಿರಲಿದೆ, ಯಾವ ಸೇವೆ ದೊರೆಯುವುದಿಲ್ಲ ಎಂಬ ಮಾಹಿತಿ ಇಲ್ಲಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ತುರ್ತು ವೈದ್ಯಕೀಯ ಸೇವೆಗಳು ದೊರೆಯಲಿವೆ. ಆದರೆ, ವೈದ್ಯರು ಕಪ್ಪುಪಟ್ಟಿ ಧರಿಸಿ ಸೇವೆ ನೀಡಲಿದ್ದಾರೆ. ಮತ್ತೊಂದೆಡೆ, ಖಾಸಗಿ ವೈದ್ಯರು ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಕಚೇರಿ ಎದುರು ಹೋರಾಟ ನಡೆಸಲು ಸಜ್ಜಾಗಿದ್ದಾರೆ.
ಈ ಮಧ್ಯೆ, ಕೊಲ್ಕತ್ತಾದ ಮೃತ ವೈದ್ಯೆಯ ಸಾವಿಗೆ ನ್ಯಾಯ ಒದಗಿಸಬೇಕು. ಹಿಂಸಾಚಾರದ ವಿರುದ್ಧ ವೈದ್ಯರಿಗೆ ರಕ್ಷಣೆ ಒದಗಿಸಬೇಕು. ಆಸ್ಪತ್ರೆಗಳನ್ನು ಸೇಫ್ ಝೋನ್ ಎಂದು ಘೋಷಿಸಬೇಕು ಎಂದು ಐಎಂಎ ಆಗ್ರಹಿಸಿದೆ.
ಇದನ್ನೂ ಓದಿ: ಕರ್ನಾಟಕದಾದ್ಯಂತ ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಓಪಿಡಿ ಬಂದ್!
ಐಎಂಎ ವ್ಯಾಪ್ತಿಯ ವೈದ್ಯರು, ಫನಾ ಬೆಂಬಲಿತ ಖಾಸಗಿ ಆಸ್ಪತ್ರೆಗಳ ಒಕ್ಕೂಟ, ಸರ್ಕಾರಿ ವೈದ್ಯಾಧಿಕಾರಿಗಳ ಅಸೋಸಿಯೇಷನ್, ಮಕ್ಕಳ ವೈದ್ಯರ ಅಸೋಸಿಯೇಷನ್, ಅರ್ಥೋಪಿಟಿಕ್ ಅಸೋಸಿಯೇಷನ್, ಮೆಡಿಕಲ್ ಕಾಲೇಜ್ ವೈದ್ಯರ ಅಸೋಸಿಯೇಷನ್ ಹಾಗೂ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.
ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ