ಬಿಜೆಪಿಯಲ್ಲಿ ಬಂಡಾಯದ ಬೇಗುದಿ: ವರಿಷ್ಠರ ಅಂಗಳಕ್ಕೆ ಪಾದಯಾತ್ರೆ ಸಮರ

ವಾಲ್ಮೀಕಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣ ವಿರುದ್ಧ ಕೂಡಲಸಂಗಮದಿಂದ ಬಳ್ಳಾರಿಗೆ ಪಾದಯಾತ್ರೆ ಕೈಗೊಳ್ಳುವ ಬಗ್ಗೆ ಬಿಜೆಪಿ ಬಂಡಾಯ ನಾಯಕರು ಇತ್ತೀಚೆಗೆ ಸಭೆ ನಡೆಸಿ ಸಮಾಲೋಚನೆ ನಡೆಸಿದ್ದರು. ಆದರೆ ಈಗ ಪ್ರತ್ಯೇಕ ಪಾದಯಾತ್ರೆ ವಿಚಾರದಲ್ಲಿ ರಾಜ್ಯ ಬಿಜೆಪಿಯಲ್ಲಿ ಒಡಕು ಸೃಷ್ಟಿಯಾಗುವ ಸುಳಿವು ದೊರೆತಿದೆ. ಇದರ ಬೆನ್ನಲ್ಲೇ ಹೈಕಮಾಂಡ್ ಅಖಾಡಕ್ಕಿಳಿದಿದೆ.

ಬಿಜೆಪಿಯಲ್ಲಿ ಬಂಡಾಯದ ಬೇಗುದಿ: ವರಿಷ್ಠರ ಅಂಗಳಕ್ಕೆ ಪಾದಯಾತ್ರೆ ಸಮರ
ಬಿಜೆಪಿಯಲ್ಲಿ ಬಂಡಾಯದ ಬೇಗುದಿ: ವರಿಷ್ಠರ ಅಂಗಳಕ್ಕೆ ಪಾದಯಾತ್ರೆ ಸಮರ
Follow us
ಕಿರಣ್​ ಹನಿಯಡ್ಕ
| Updated By: Ganapathi Sharma

Updated on: Aug 17, 2024 | 7:02 AM

ಬೆಂಗಳೂರು, ಆಗಸ್ಟ್ 17: ಮುಡಾ ಹಗರಣ ಖಂಡಿಸಿ ಬಿಜೆಪಿ-ಜೆಡಿಎಸ್ ನಾಯಕರು ಮೈಸೂರು ಚಲೋ ಪಾದಯಾತ್ರೆ ನಡೆಸಿದ ಕೆಲವೇ ದಿನಗಳಲ್ಲಿ ಬಿಜೆಪಿಯಲ್ಲಿ ಬಂಡಾಯದ ಬೇಗುದಿ ಹೆಚ್ಚಾಗುತ್ತಿದೆ. ಮೈಸೂರು ಚಲೋ ಪಾದಯಾತ್ರೆಯಿಂದ ದೂರವೇ ಉಳಿದಿದ್ದ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ಟೀಂ ಮೊನ್ನೆ ಮೊನ್ನೆಯಷ್ಟೇ ಬೆಳಗಾವಿಯಲ್ಲಿ ಪ್ರತ್ಯೇಕ ಸಭೆ ನಡೆಸಿ ಸೆಡ್ಡು ಹೊಡೆದಿದ್ದರು. ಈ ಸಭೆಯಲ್ಲಿ ಅರವಿಂದ ಲಿಂಬಾವಳಿ, ಜಿ.ಎಂ.ಸಿದ್ದೇಶ್ವರ್, ಅಣ್ಣಾ ಸಾಹೇಬ್ ಜೊಲ್ಲೆ, ಪ್ರತಾಪ್ ಸಿಂಹ ಸೇರಿ 12 ನಾಯಕರು ಭಾಗಿಯಾಗಿದ್ದು ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಪ್ರತ್ಯೇಕ ಪಾದಯಾತ್ರೆ ವಿಚಾರ ಪಕ್ಷದಲ್ಲಿ ಒಡಕಿಗೆ ಕಾರಣವಾಗುತ್ತಿದೆ ಎಂಬುದು ಅರಿತ ಕೂಡಲೇ ಸಮಸ್ಯೆ ನಿವಾರಣೆಗೆ ಪಕ್ಷದ ಹೈಕಮಾಂಡ್ ಅಖಾಡಕ್ಕಿಳಿದಿದೆ.

ವಾಲ್ಮೀಕಿ ನಿಗಮ ಹಗರಣದ ವಿಚಾರಕ್ಕೆ ಬಳ್ಳಾರಿ ಪಾದಯಾತ್ರೆ ನಡೆಯಬೇಕು ಎಂದು 3 ರೀತಿಯ ಪ್ರಯತ್ನಗಳು ಬಿಜೆಪಿ ಒಳಗೊಳಗೆ ನಡೆಯುತ್ತಿದೆ. ನಮ್ಮ ನೇತೃತ್ವದಲ್ಲಿ ನಡೆಯಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಬಳ್ಳಾರಿ ಪಾದಾಯತ್ರೆ ನಡೆದರೆ ಪಕ್ಷದ ವತಿಯಿಂದ ನಡೆಯಲಿ ಎಂದು ವಿಜಯೇಂದ್ರ ಹಠಕ್ಕೆ ಬಿದ್ದಿದ್ದಾರೆ. ಹೀಗಾಗಿ ಈ ಬಂಡಾಯ ಶಮನಕ್ಕೆ ಬಿಜೆಪಿ ಹೈಕಮಾಂಡ್ ಮದ್ದು ಅರೆಯಲು ಮುಂದಾಗಿದೆ.

ಇಂದು ದೆಹಲಿಗೆ ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಪ್ರಯಾಣ

ಈ ಎಲ್ಲ ಬೆಳವಣಿಗೆ ನಡುವೆ ಇಂದು (ಆಗಸ್ಟ್ 17) ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ದೆಹಲಿಗೆ ಪ್ರಯಾಣಿಸುತ್ತಿದ್ದಾರೆ. ಸದಸ್ಯತ್ವ ಅಭಿಯಾನದ ಬಗ್ಗೆ ಸಭೆ ಇರುವುದರಿಂದ ತೆರಳುತ್ತಿದ್ದಾರೆ. ಪಿ.ರಾಜೀವ್, ಸುನೀಲ್ ಕುಮಾರ್, ಪ್ರೀತಂಗೌಡ ಕೂಡ ತೆರಳಲಿದ್ದು ಮಧ್ಯಾಹ್ನ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇನ್ನೊಂದ್ಕಡೆ ವಾಲ್ಮೀಕಿ ನಿಗಮದಲ್ಲಿ ನಡೆದ ಹಗರಣ ಖಂಡಿಸಿ ಬಳ್ಳಾರಿಗೆ ಪಾದಯಾತ್ರೆ ನಡೆಸುವ ಬಗ್ಗೆ ವರಿಷ್ಠರ ಜತೆ ವಿಜಯೇಂದ್ರ ಪ್ರತ್ಯೇಕ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ರಮೇಶ್ ಜಾರಕಿಹೊಳಿಗೆ ಬಿಎಲ್ ಸಂತೋಷ್ ಬುಲಾವ್

ಒಂದೆಡೆ ವಿಜಯೇಂದ್ರ ಹಾಗೂ ತಂಡ ದೆಹಲಿಗೆ ತೆರಳುತ್ತಿದ್ದರೆ, ಇನ್ನೊಂದೆಡೆ ರೆಬೆಲ್ ತಂಡ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ಬಿಜೆಪಿಯಲ್ಲಿನ ಭಿನ್ನಮತ ಶಮನಕ್ಕೆ ಆರ್​ಎಸ್​ಎಸ್ ನಾಯಕರು ಎಂಟ್ರಿ ಕೊಟ್ಟಿದ್ದಾರೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಆಗಸ್ಟ್ 19ರಂದು ದೆಹಲಿಗೆ ಬರಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್​​ ಬುಲಾವ್ ನೀಡಿದ್ದಾರೆ. ಇತ್ತ ಶಾಸಕ ಯತ್ನಾಳ್, ಪ್ರತಾಪ್ ಸಿಂಹ ಸೇರಿ ಹಲವರು ಪ್ರಯಾಣ ಬೆಳೆಸುವ ಸಾಧ್ಯತೆ ಇದೆ.

‘ಬಿಜೆಪಿಯಲ್ಲಿ ಸಂತೋಷ ಕೂಟ vs ಯಡಿಯೂರಪ್ಪ ಬಣದ ಕಿತ್ತಾಟ’

ಬಿಜೆಪಿಯಲ್ಲಿ ಸಂತೋಷ ಕೂಟ vs ಯಡಿಯೂರಪ್ಪ ಬಣದ ಕಿತ್ತಾಟ ಜೋರಾಗಿದೆ. ವಿಧಾನಸಭಾ ಚುನಾವಣೆಯ ನಂತರ ಸೈಲೆಂಟ್ ಆಗಿದ್ದ ಸಂತೋಷ್ ಈಗ ಮತ್ತೆ ಆಕ್ಟಿವ್ ಆಗಿದ್ದಾರೆ. ಪಾದಯಾತ್ರೆ ಎನ್ನುವುದು ಬಿಜೆಪಿಗರು ಬಿಜೆಪಿಗರ ವಿರುದ್ಧವೇ ಮಾಡುತ್ತಿರುವ ಪ್ರತಿಷ್ಠೆಯ ಕದನವಾಗಿದೆ. ವಿಜಯೇಂದ್ರರ ವಿರುದ್ಧ ಪಾದಯಾತ್ರೆಗೆ ಹೈಕಮಾಂಡ್ ಒಪ್ಪಿಗೆ ಕೊಡಿಸಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಮುನ್ನುಡಿ ಬರೆಯಲು ಸಂತೋಷ್ ತಂತ್ರ ರೂಪಿಸಿದ್ದಾರೆ. ಎಂದು ಕಾಂಗ್ರೆಸ್‌ ಟ್ವೀಟ್ ಮಾಡಿದೆ.

ಇದನ್ನೂ ಓದಿ: ಕರ್ನಾಟಕ ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ: ಜಾರಕಿಹೊಳಿಗೆ ಬಿಎಲ್​​​​ ಸತೋಷ್ ದಿಢೀರ್ ಬುಲಾವ್

ಇನ್ನೊಂದೆಡೆ ಆಗಸ್ಟ್ 21ರಂದು ಬಿಜೆಪಿ ಅತೃಪ್ತ ನಾಯಕರು ಬೆಂಗಳೂರಲ್ಲಿ ನಡೆಸಬೇಕಿದ್ದ ಸಭೆ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದೆ. ಒಟ್ಟಿನಲ್ಲಿ ರಾಜ್ಯ ಬಿಜೆಪಿಯಲ್ಲಿ ಎದ್ದಿರುವ ಪಾದಯಾತ್ರೆ ವಿವಾದ ವರಿಷ್ಠರಿಗೆ ಬಿಸಿ ತುಪ್ಪವಾಗಿರುವುದು ಸುಳ್ಳಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ