Assembly Elections: ಜಮ್ಮು ಕಾಶ್ಮೀರದಲ್ಲಿ ಸೆ. 18, ಹರಿಯಾಣದಲ್ಲಿ ಅಕ್ಟೋಬರ್ 1ಕ್ಕೆ​ ವಿಧಾನಸಭಾ ಚುನಾವಣೆ

ನವದೆಹಲಿ: ದೆಹಲಿಯ ವಿಜ್ಞಾನ ಭವನದಲ್ಲಿ ಚುನಾವಣಾ ಆಯೋಗ ಇಂದು ಸುದ್ದಿಗೋಷ್ಠಿ ನಡೆಸಿದ್ದು, ಹರಿಯಾಣ, ಜಮ್ಮು ಕಾಶ್ಮೀರ ರಾಜ್ಯಗಳ​ ವಿಧಾನಸಭಾ ಚುನಾವಣೆ ದಿನಾಂಕ ಘೋಷಣೆ ಮಾಡಿದೆ. ಚುನಾವಣಾ ಸಿದ್ಧತೆಯನ್ನು ಮೇಲ್ವಿಚಾರಣೆ ಮಾಡಲು ಚುನಾವಣಾ ಆಯೋಗವು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣಕ್ಕೆ ಭೇಟಿ ನೀಡಿತ್ತು.

Assembly Elections: ಜಮ್ಮು ಕಾಶ್ಮೀರದಲ್ಲಿ ಸೆ. 18, ಹರಿಯಾಣದಲ್ಲಿ ಅಕ್ಟೋಬರ್ 1ಕ್ಕೆ​ ವಿಧಾನಸಭಾ ಚುನಾವಣೆ
ಸಾಂದರ್ಭಿಕ ಚಿತ್ರ
Follow us
ಸುಷ್ಮಾ ಚಕ್ರೆ
|

Updated on:Aug 16, 2024 | 3:56 PM

ನವದೆಹಲಿ: ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣದ ವಿಧಾನಸಭಾ ಚುನಾವಣೆಯ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದೆ. ಜಮ್ಮು-ಕಾಶ್ಮೀರದ 90 ಕ್ಷೇತ್ರಗಳಿಗೆ 3 ಹಂತದಲ್ಲಿ ಮತದಾನ ನಡೆಯಲಿದೆ. ಸೆಪ್ಟೆಂಬರ್ 18ರಂದು ಮೊದಲ ಹಂತದಲ್ಲಿ 24 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಸೆಪ್ಟೆಂಬರ್ 25ರಂದು 2ನೇ ಹಂತದ 26 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ಅಕ್ಟೋಬರ್ 1ರಂದು 3ನೇ ಹಂತದ 40 ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಜಮ್ಮು-ಕಾಶ್ಮೀರದಲ್ಲಿ ಅಕ್ಟೋಬರ್ 4ರಂದು ಮತ ಎಣಿಕೆ ನಡೆಯಲಿದೆ. ಹರಿಯಾಣದ 90 ಕ್ಷೇತ್ರಗಳಿಗೆ ಅಕ್ಟೋಬರ್ 1ರಂದು ಮತದಾನ ನಡೆಯಲಿದ್ದು, ಅಕ್ಟೋಬರ್ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಜಮ್ಮು ಮತ್ತು ಕಾಶ್ಮೀರದ ಎಲ್ಲ ಪ್ರಾದೇಶಿಕ ಮತ್ತು ರಾಷ್ಟ್ರೀಯ ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ವಿಧಾನಸಭೆ ಚುನಾವಣೆ ನಡೆಸುವ ನಿರ್ಧಾರವನ್ನು ಸ್ವಾಗತಿಸಿವೆ. ಹರಿಯಾಣದ ಶಾಸಕಾಂಗ ಸಭೆಯ ಅವಧಿಯು ನವೆಂಬರ್ 3 ರಂದು ಕೊನೆಗೊಳ್ಳುತ್ತದೆ. ಸುಪ್ರೀಂ ಕೋರ್ಟ್ ನಿಗದಿಪಡಿಸಿದ ಗಡುವು ಸೆಪ್ಟೆಂಬರ್ 30ರ ಮೊದಲು ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭಾ ಚುನಾವಣೆಯನ್ನು ನಡೆಸಲು ಚುನಾವಣಾ ಸಮಿತಿಯು ಯೋಜಿಸಿದೆ.

ಚುನಾವಣಾ ಸಿದ್ಧತೆಯನ್ನು ಮೇಲ್ವಿಚಾರಣೆ ಮಾಡಲು ಚುನಾವಣಾ ಆಯೋಗವು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣಕ್ಕೆ ಭೇಟಿ ನೀಡಿತ್ತು. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್, ಜಮ್ಮು ಕಾಶ್ಮೀರದ ಒಟ್ಟು ವಿಧಾನಸಭಾ ಕ್ಷೇತ್ರಗಳ ಸಂಖ್ಯೆ 90. ಜಮ್ಮು ಕಾಶ್ಮೀರದಲ್ಲಿ ಒಟ್ಟು 87.09 ಲಕ್ಷ ಮತದಾರರಿದ್ದಾರೆ. ಜಮ್ಮು ಕಾಶ್ಮೀರದಲ್ಲಿನ ಒಟ್ಟು ಮತಗಟ್ಟೆಗಳ ಸಂಖ್ಯೆ 11,838 ಎಂದಿದ್ದಾರೆ.

ಇದನ್ನೂ ಓದಿ: ಚುನಾವಣೆಯಲ್ಲಿ ಸ್ಪರ್ಧಿಸುತ್ತೇವೆ, ಜಮ್ಮು ಕಾಶ್ಮೀರದಲ್ಲಿ ನಮ್ಮದೇ ಬಹುಮತ ಬರಲಿದೆ: ಫಾರೂಕ್ ಅಬ್ದುಲ್ಲಾ

ಹರಿಯಾಣದಲ್ಲಿ ವಿಧಾನಸಭಾ ಚುನಾವಣೆಯು 90 ಸ್ಥಾನಗಳಿಗೆ ನಡೆಯಲಿದೆ, ಅದರಲ್ಲಿ 73 ಸಾಮಾನ್ಯ ಮತ್ತು 17 ಪರಿಶಿಷ್ಟ ಜಾತಿಗಳಿಗೆ (SC) ಮೀಸಲಾಗಿದೆ. 87 ಲಕ್ಷಕ್ಕೂ ಹೆಚ್ಚು ಮತದಾರರು ಜಮ್ಮು ಕಾಶ್ಮೀರದ ವಿಧಾನಸಭಾ ಚುನಾವಣೆಯಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ. ಅಂತಿಮ ಮತದಾರರ ಪಟ್ಟಿಯನ್ನು ಆಗಸ್ಟ್ 20ರಂದು ಪ್ರಕಟಿಸಲಾಗುವುದು. ಜಮ್ಮು ಮತ್ತು ಕಾಶ್ಮೀರದ 90 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ ಎಂದು ಸಿಇಸಿ ತಿಳಿಸಿದೆ, ಈ ಪೈಕಿ 74 ಸಾಮಾನ್ಯ ಮತ್ತು 16 ಮೀಸಲು (ಎಸ್‌ಟಿ – 9, ಎಸ್‌ಸಿ – 7) ಇದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:49 pm, Fri, 16 August 24