ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದವರಿಗೆ ಕರ್ನಾಟಕ ಹೈಕೋರ್ಟ್ ಗುಡ್ ನ್ಯೂಸ್
ಈಗಾಗಲೇ ಕರ್ನಾಟಕದಲ್ಲಿ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯ ಗಡುವನ್ನು ಮೂರು ಬಾರಿ ವಿಸ್ತರಿಸಲಾಗಿದ್ದು, ಸೆಪ್ಟೆಂಬರ್ 15ಕ್ಕೆ ಡೆಡ್ಲೈನ್ ಕೊನೆಗೊಂಡಿತ್ತು. ಇನ್ನು ಮುಂದೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸದ ವಾಹನ ಮಾಲೀಕರಿಗೆ ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಹೇಳಿತ್ತು. ಆದರೆ, ವಾಹನ ಮಾಲೀಕರಿಗೆ ಈಗ ಕರ್ನಾಟಕ ಹೈಕೋರ್ಟ್ ರಿಲೀಫ್ ನೀಡಿದೆ.
ಬೆಂಗಳೂರು, ಸೆಪ್ಟೆಂಬರ್ 18: ಕರ್ನಾಟಕದಲ್ಲಿ ವಾಹನಗಳಿಗೆ ಹೈ ಸೆಕ್ಯುರಿಟಿ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಅನ್ನು ಇನ್ನೂ ಅಳವಡಿಸದವರಿಗೆ ಹೈಕೋರ್ಟ್ನಿಂದ ರಿಲೀಫ್ ದೊರೆತಿದೆ. ನಂಬರ್ ಪ್ಲೇಟ್ ಅಳವಡಿಕೆ ಗಡುವು ವಿಸ್ತರಣೆಯಾಗಿದೆ. ಗಡುವು ವಿಸ್ತರಿಸಬೇಕು ಎಂದು ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ವಿಚಾರಣೆಯನ್ನು ಮುಂದೂಡಿದೆ. ಜತೆಗೆ, ಗಡುವು ಕೂಡ ವಿಸ್ತರಣೆಯಾಗಿದೆ.
ನ್ಯಾಯಮೂರ್ತಿಗಳಾದ ಕೆ ಕಾಮೇಶ್ವರ ರಾವ್ ಮತ್ತು ಕೆ ರಾಜೇಶ್ ರೈ ಅವರ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಿಚಾರಣೆ ನಡೆಸಿದ್ದು, ನವೆಂಬರ್ 20ಕ್ಕೆ ಮುಂದಿನ ವಿಚಾರಣೆ ಮುಂದೂಡಿಕೆ ಮಾಡಿದೆ. ಜತೆಗೆ, ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆ ದಿನಾಂಕವನ್ನೂ ವಿಸ್ತರಣೆ ಮಾಡಿ ಆದೇಶ ಪ್ರಕಟಿಸಿದೆ.
ಈ ಹಿಂದೆ ಸಾರಿಗೆ ಹೊರಡಿಸಿದ್ದ ಸುತ್ತೋಲೆ ಪ್ರಕಾರ, ಸೆಪ್ಟೆಂಬರ್ 15ಕ್ಕೆ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಸಲು ಕೊನೆಯ ದಿನವಾಗಿತ್ತು.
ಬಲವಂತದ ಕ್ರಮ ಇಲ್ಲ ಎಂದಿದ್ದ ಸಾರಿಗೆ ಆಯುಕ್ತ
ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ಸಂಬಂಧಿಸಿದ ಅರ್ಜಿ ಹೈಕೋರ್ಟ್ನಲ್ಲಿ ವಿಚಾರಣೆ ಹಂತದಲ್ಲಿರುವುದರಿಂದ ಸೆಪ್ಟೆಂಬರ್ 15ರ ಗಡುವಿನ ಬಳಿಕವೂ ನಂಬರ್ ಪ್ಲೇಟ್ ಅಳವಡಿಸದವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳುವುದಿಲ್ಲ ಎಂದು ಕರ್ನಾಟಕ ಸಾರಿಗೆ ಆಯುಕ್ತ ಯೋಗೇಶ್ ತಿಳಿಸಿದ್ದರು.
ಗಡುವನ್ನು ಮತ್ತೊಮ್ಮೆ ವಿಸ್ತರಿಸುವ ಅಥವಾ ವಾಹನ ಚಾಲಕರಿಗೆ ದಂಡ ವಿಧಿಸುವ ನಿರ್ಧಾರವನ್ನು ಸೆಪ್ಟೆಂಬರ್ 18ರ ನಂತರವೇ ಕೈಗೊಳ್ಳುತ್ತೇವೆ ಎಂದು ಅವರು ಹೇಳಿದ್ದರು.
4ನೇ ಬಾರಿ ಗಡುವು ವಿಸ್ತರಣೆ
ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಅಳವಡಿಕೆಯ ಗಡುವು ಒಟ್ಟು ಮೂರು ಬಾರಿ ವಿಸ್ತರಣೆಯಾಗಿತ್ತು. 2019ರ ಏಪ್ರಿಲ್ 1 ರ ಮೊದಲು ನೋಂದಾಯಿಸಲ್ಪಟ್ಟ ವಾಹನಗಳಿಗೆ ಎಚ್‌ಎಸ್‌ಆರ್‌ಪಿ ಕಡ್ಡಾಯಗೊಳಿಸುವ ಅಧಿಸೂಚನೆಯನ್ನು 2023ರ ಆಗಸ್ಟ್ನಲ್ಲಿ ಸಾರಿಗೆ ಇಲಾಖೆ ಪ್ರಕಟಿಸಿತ್ತು. ಮೊದಲಿಗೆ 2023 ರ ನವೆಂಬರ್ 17 ರ ಗಡುವನ್ನು ನಿಗದಿಪಡಿಸಲಾಗಿತ್ತು. ನಿಧಾನಗತಿಯ ಅಳವಡಿಕೆಯ ಕಾರಣ ಆ ನಂತರದಲ್ಲಿ ಗಡುವನ್ನು ಮೂರು ಬಾರಿ ವಿಸ್ತರಿಸಲಾಗಿತ್ತು. ಇದೀಗ ಹೈಕೋರ್ಟ್ ಆದೇಶದ ನಂತರ 4ನೇ ಬಾರಿ ಗಡುವು ವಿಸ್ತರಣೆ ಮಾಡಿದಂತಾಗಿದೆ.
ಇದನ್ನೂ ಓದಿ: ಎಚ್‌ಎಸ್‌ಆರ್‌ಪಿ ಅಳವಡಿಕೆ: ಬಲವಂತದ ಕ್ರಮ ಇಲ್ಲ ಎಂದಿದ್ದ ಕರ್ನಾಟಕ ಸಾರಿಗೆ ಆಯುಕ್ತ
ಸಾರಿಗೆ ಇಲಾಖೆ ಅಂಕಿಅಂಶಗಳ ಪ್ರಕಾರ, ಸೆಪ್ಟೆಂಬರ್ 15ರ ಗಡುವಿನ ವರೆಗೆ ರಾಜ್ಯದಲ್ಲಿರುವ ಎರಡು ಕೋಟಿ ಹಳೆಯ ವಾಹನಗಳ ಪೈಕಿ ಶೇ 26ರಷ್ಟಕ್ಕೆ ಮಾತ್ರ, ಅಂದರೆ 52 ಲಕ್ಷ ವಾಹನಗಳಿಗಷ್ಟೇ ಎಚ್‌ಎಸ್‌ಆರ್‌ಪಿ ಅಳವಡಿಸಲಾಗಿದೆ. ಡೆಡ್ಲೈನ್ ನಂತರ ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಇಲ್ಲದೆ ಸಂಚರಿಸುವ ವಾಹನ ಮಾಲೀಕರಿಗೆ 500 ರೂ. ದಂಡ ವಿಧಿಸುವುದಾಗಿ ಸಾರಿಗೆ ಇಲಾಖೆ ಹೇಳಿತ್ತು. ಸದ್ಯ ಹೈಕೋರ್ಟ್ ಆದೇಶದಿಂದಾಗಿ ವಾಹನ ಮಾಲೀಕರು ದಂಡದಿಂದ ಬಚಾವಾಗಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:16 pm, Wed, 18 September 24