Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೋಕಾಯುಕ್ತ ಎಡಿಜಿಪಿಗೆ ಬೆದರಿಕೆ ಆರೋಪ: ಕುಮಾರಸ್ವಾಮಿಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್​

ಲೋಕಾಯುಕ್ತದ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಮತ್ತು ವಿಶೇಷ ಪೊಲೀಸ್‌ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥರಾದ ಎಂ ಚಂದ್ರಶೇಖರ್‌ ದೂರು ಆಧರಿಸಿ ಬೆಂಗಳೂರಿನ ಸಂಜಯ್‌ನಗರ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಇದನ್ನು ರದ್ದು ಕೋರಿ ಕುಮಾರಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್​, ತಾತ್ಕಾಲಿಕ ರಿಲೀಫ್ ನೀಡಿದೆ.

ಲೋಕಾಯುಕ್ತ ಎಡಿಜಿಪಿಗೆ ಬೆದರಿಕೆ ಆರೋಪ: ಕುಮಾರಸ್ವಾಮಿಗೆ ತಾತ್ಕಾಲಿಕ ರಿಲೀಫ್ ನೀಡಿದ ಹೈಕೋರ್ಟ್​
ಎಡಿಜಿಪಿ ಚಂದ್ರಶೇಖರ್, ಹೆಚ್​ಡಿ ಕುಮಾರಸ್ವಾಮಿ
Follow us
Ramesha M
| Updated By: ರಮೇಶ್ ಬಿ. ಜವಳಗೇರಾ

Updated on: Nov 06, 2024 | 7:54 PM

ಬೆಂಗಳೂರು, (ನವೆಂಬರ್ 06): ಎಡಿಜಿಪಿ ಚಂದ್ರಶೇಖರ್ ದೂರಿನ ಮೇರೆಗೆ ಬೆಂಗಳೂರಿನ ಸಂಜಯ್‌ನಗರ ಪೊಲೀಸ್​ ಠಾಣೆಯಲ್ಲಿ ಕೇಂದ್ರ ಸಚಿವ ಎಚ್​ಡಿ ಕುಮಾರಸ್ವಾಮಿ ವಿರುದ್ಧ ಎಫ್​ಐಆರ್ ದಾಖಲಾಗಿದ್ದು,  ಈ ಪ್ರಕರಣ ರದ್ದು ಕೋರಿ ಕುಮಾರಸ್ವಾಮಿ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್,  ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಆದೇಶ ಹೊರಡಿಸಿದೆ. ಈ ಮೂಲಕ ಪುತ್ರನ ಉಪಚುನಾವಣೆ ಮಧ್ಯ ಈ ಎಫ್​ಐಆರ್​ ಟೆನ್ಷನ್ ನಲ್ಲಿದ್ದ ಕುಮಾರಸ್ವಾಮಿಗೆ ​ಈಗ ಮಧ್ಯಂತರ ರಿಲೀಫ್ ಸಿಕ್ಕಂತಾಗಿದೆ.

ಪ್ರಕರಣ ರದ್ದು ಕೋರಿ ಎಚ್.ಡಿ.ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ, ಸುರೇಶ್ ಬಾಬು ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಪೊಲೀಸರನ್ನು ಕಳಿಸಿ ಬಂಧಿಸಲು ಯತ್ನಿಸುತ್ತಿದ್ದಾರೆ. 10 ವರ್ಷದ ಹಿಂದಿನ ನಿರೀಕ್ಷಣಾ ಜಾಮೀನು ರದ್ದುಪಡಿಸಲು ಯತ್ನಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಪರ ಹಿರಿಯ ವಕೀಲ ಹಷ್ಮತ್ ಪಾಷಾ ವಾದ ಮಂಡಿಸಿದರು.

ಈ ವಾದ ಆಲಿಸಿದ ಹೈಕೋರ್ಟ್, ಯಾವುದೇ ಬಲವಂತದ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ಆದೇಶಿಸಿದ. ಅಲ್ಲದೇ ಎಫ್ಐಆರ್ ಆಧರಿಸಿ ಹಳೆಯ ನಿರೀಕ್ಷಣಾ ಜಾಮೀನು ರದ್ದುಪಡಿಸುವಂತಿಲ್ಲ ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಏಕಸದಸ್ಯ ಪೀಠ ನಿರ್ಬಂಧಿಸಿದೆ. ಇನ್ನು ಬಲವಂತದ ಕ್ರಮ ಕೈಗೊಳ್ಳುವುದಿಲ್ಲವೆಂಬ SPP ಹೇಳಿಕೆಯನ್ನೂ ಸಹ ಹೈಕೋರ್ಟ್ ದಾಖಲಿಸಿಕೊಂಡಿದೆ.

ಎಫ್‌ಐಆರ್‌ನಲ್ಲಿ ಏನಿದೆ?

ಆಂಧ್ರಪ್ರದೇಶ ಮೂಲದ ಜಂತಕಲ್‌ ಮೈನಿಂಗ್‌ ಕಂಪನಿಯ ಸಹವರ್ತಿ ಸಂಸ್ಥೆಯಾಗಿರುವ ಶ್ರೀ ಸಾಯಿ ವೆಂಕಟೇಶ್ವರ್‌ ಮಿನರಲ್ಸ್‌ ಕಂಪನಿಗೆ ಆಗ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಎನ್‌ಇಬಿ ರೇಂಜ್‌ನಲ್ಲಿ 550 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಲೀಸ್‌ ನೀಡಲು ಪರವಾನಗಿಗೆ ಅನುಮೋದನೆ ಕಡತಕ್ಕೆ ಸಹಿ ಹಾಕಿದ್ದರು. 2007ರ ಅಕ್ಟೋಬರ್‌ 5ರಂದು ಸಹಿ ಹಾಕಲಾಗಿತ್ತು. ಈ ವೇಳೆ ಸಲ್ಲಿಕೆಯಾಗಿದ್ದ 29 ಅರ್ಜಿಗಳ ಪೈಕಿ ಕೊನೆಯದಾಗಿ ಸಲ್ಲಿಕೆಯಾಗಿದ್ದ ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಅರ್ಜಿಯನ್ನು ಸರ್ಕಾರ ನಿಯಮಾವಳಿ ಉಲ್ಲಂಘಿಸಿ ಅನುಮೋದಿಸಿ ಮಂಜೂರು ಮಾಡಲಾಗಿತ್ತು ಎಂಬುದು ಕುಮಾರಸ್ವಾಮಿ ಅವರ ಮೇಲಿರುವ ಆರೋಪವಾಗಿದೆ.

ಈ ಪ್ರಕರಣದಲ್ಲಿ ಹೆಚ್ಚುವರಿ ಸಾಕ್ಷ್ಯಾಧಾರಗಳು ದೊರೆತಿದ್ದರಿಂದ ಕಾನೂನು ಕ್ರಮಕೈಗೊಳ್ಳಲು ಅನುಮತಿ ನೀಡುವಂತೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅವರಿಗೆ ಎಸ್‌ಐಟಿ ಮುಖ್ಯಸ್ಥರಾಗಿರುವ ಎಂ ಚಂದ್ರಶೇಖರ್‌ ಮನವಿ ಮಾಡಿದ್ದರು.

ಇದರಿಂದ ಕೆರಳಿದ ಕುಮಾರಸ್ವಾಮಿ ಅವರು ಸೆಪ್ಟೆಂಬರ್‌ 28 ಮತ್ತು 29ರಂದು ಮಾಧ್ಯಮಗೋಷ್ಠಿ ನಡೆಸಿ ತನ್ನ ವಿರುದ್ಧ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪ ಮಾಡಿ, ಬೆದರಿಕೆ ಹಾಕಿದ್ದಾರೆ. ಕರ್ನಾಟಕ ಕೇಡರ್‌ನಿಂದ ಬೇರೆ ರಾಜ್ಯಕ್ಕೆ ಕಳುಹಿಸುವುದಾಗಿ ಮೌಖಿಕವಾಗಿ ಬೆದರಿಕೆ ಹಾಕಿದ್ದು, ತಮ್ಮ ಕುಟುಂಬದ ವಿರುದ್ಧ ಸುಳ್ಳು ಆರೋಪ ಮಾಡಿ, ತೊಂದರೆ ಕೊಡುವುದಾಗಿ ಬೆದರಿಕೆ ಹಾಕಿದ್ದಾರೆ. ತಾನು ಬೆಂಗಳೂರಿನ ಬೌರಿಂಗ್‌ ಆಸ್ಪತ್ರೆಯಲ್ಲಿ ನಕಲಿ ವೈದ್ಯಕೀಯ ದಾಖಲೆ ಪಡೆದು ಕರ್ನಾಟಕ ಕೇಡರ್‌ಗೆ ಸೇರ್ಪಡೆಯಾಗಿರುವುದಾಗಿ ಆರೋಪಿಸಿದ್ದಾರೆ. ಅಲ್ಲದೇ, ತಾನು ಲಂಚ ಸ್ವೀಕರಿಸುತ್ತಿರುವುದಾಗಿ ಸುಳ್ಳು ಆರೋಪ ಮಾಡಿದ್ದಾರೆ ಎಂದು ಚಂದ್ರಶೇಖರ್‌ ದೂರಿನಲ್ಲಿ ತಿಳಿಸಿದ್ದರು.

ಸೆಪ್ಟೆಂಬರ್‌ 29ರಂದು ನಿಖಿಲ್‌ ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ಮಾಧ್ಯಮ ಗೋಷ್ಠಿಯಲ್ಲಿ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಆನಂತರ ಜೆಡಿಎಸ್‌ ಶಾಸಕ ಸುರೇಶ್‌ ಬಾಬು ಅವರು ತನ್ನ ವಿರುದ್ಧ ಸುಳ್ಳು ಆರೋಪ ಮಾಡಿ ಕ್ರಮಕ್ಕೆ ಆಗ್ರಹಿಸಿ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೂಲಕ ಬೆದರಿಕೆ ಹಾಕಿದ್ದಾರೆ ಎಂದು ಚಂದ್ರಶೇಖರ್‌ ಅವರ ದೂರಿನಲ್ಲಿ ವಿವರಿಸಿದ್ದರು.