AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಾರಿಗೆ ಮುಷ್ಕರ ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಿದ ಹೈಕೋರ್ಟ್

Karnataka High Court On Transport Strike: ಈಗಿರುವ ನಿಯಮದಂತೆ ವೇತನ ಹೆಚ್ಚಳಕ್ಕೆ ಸಮ್ಮತಿಸಲಾಗಿದೆ ಎಂದು ಸಾರಿಗೆ ನಿಗಮದ ಪರ ವಕೀಲೆ ರೇಣುಕಾ ಕೋರ್ಟ್​ಗೆ ತಿಳಿಸಿದರು.

ಸಾರಿಗೆ ಮುಷ್ಕರ ವಿಚಾರಣೆಯನ್ನು ಮೇ 26ಕ್ಕೆ ಮುಂದೂಡಿದ ಹೈಕೋರ್ಟ್
ಕರ್ನಾಟಕ ಹೈಕೋರ್ಟ್​
guruganesh bhat
|

Updated on: May 12, 2021 | 5:36 PM

Share

ಬೆಂಗಳೂರು: ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಸಲ್ಲಿದಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಮೇ 3ರಂದು ಸಾರಿಗೆ ಸಂಘಟನೆಗಳೊಂದಿಗೆ ಸಭೆ ನಡೆದಿದೆ. ಕೆಲವು ನೌಕರರ ವರ್ಗಾವಣೆ ಹಿಂಪಡೆಯಲಾಗಿದೆ. ಬಹುತೇಕ ನೌಕರರ ಅಮಾನತು ರದ್ದುಪಡಿಸಲಾಗಿದೆ. ಕೊವಿಡ್ ಹಿನ್ನೆಲೆಯಲ್ಲಿ ಕೆಲ ಬೇಡಿಕೆ ಕೈಬಿಡಲಾಗಿದೆ. ಈಗಿರುವ ನಿಯಮದಂತೆ ವೇತನ ಹೆಚ್ಚಳಕ್ಕೆ ಸಮ್ಮತಿಸಲಾಗಿದೆ ಎಂದು ಸಾರಿಗೆ ನಿಗಮದ ಪರ ವಕೀಲೆ ರೇಣುಕಾ ಕೋರ್ಟ್​ಗೆ ತಿಳಿಸಿದರು. ಈ ವಿಷಯದ ಸಾರಿಗೆ ನೌಕರರ ಒಕ್ಕೂಟ ಆಕ್ಷೇಪ ವ್ಯಕ್ತಪಡಿಸಿತು. ಇದೇ ವೇಳೆ ಸಾರಿಗೆ ನಿಗಮ ಸಲ್ಲಿಸಿರುವ ಹೇಳಿಕೆಯನ್ನು ಲಿಖಿತ ರೂಪದಲ್ಲಿ ನೀಡಲು ಸೂಚಿಸಿದ ಹೈಕೋರ್ಟ್ ವಿಚಾರಣೆಯನ್ನು ಮೇ 26 ಕ್ಕೆ ಮುಂದೂಡಿತು.

ಈ ಮುನ್ನವೇ ರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಮುಷ್ಕರ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ  ವಿಚಾರಣೆ ನಡೆಸಿದ್ದ ಹೈಕೋರ್ಟ್​, ಮುಷ್ಕರ ಹಿಂಪಡೆದು ನೌಕರರು ಪಟ್ಟು ಸಡಿಲಿಸಿದ್ದಾರೆ. ಸರ್ಕಾರವೂ ಈಗ ಪಟ್ಟು ಸಡಿಲಿಸಿ ಮಾತುಕತೆಗೆ ಮುಂದಾಗಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಮತ್ತು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್‌ ಅವರಿದ್ದ ನ್ಯಾಯಪೀಠವು ಸೂಚನೆ ನೀಡಿತ್ತು.

ಅಮಾನತಾಗಿರುವ ಸಿಬ್ಬಂದಿ ಅಮಾನತು ಪ್ರಶ್ನಿಸಿ ಮೇಲ್ಮನವಿ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿಗಳು ಸಲ್ಲಿಕೆಯಾದ 2 ವಾರಗಳ ಒಳಗೆ ಪ್ರಾಧಿಕಾರವು ಇತ್ಯರ್ಥಪಡಿಸಬೇಕು. ವಜಾಗೊಂಡ‌ ನೌಕರರೂ ಮೇಲ್ಮನವಿ ಸಲ್ಲಿಸಬೇಕು. ಈ ಅರ್ಜಿಗಳನ್ನು 2 ತಿಂಗಳಲ್ಲಿ ಮೇಲ್ಮನವಿ ಪ್ರಾಧಿಕಾರ ತೀರ್ಮಾನಿಸಬೇಕು. ಮೇ 12ರೊಳಗೆ ಸರ್ಕಾರ ಮಾತುಕತೆ ನಡೆಸಬೇಕು. ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಲು ಯತ್ನಿಸಬೇಕು. ಮಾತುಕತೆಯ ಬಳಿಕ ಸಮಸ್ಯೆ ಮುಂದುವರಿಯಬಾರದು. ಪ್ರಯಾಣಿಕರಿಗೆ ತೊಂದರೆಯಾಗಬಾರದು. ಮೇ 12ರೊಳಗೆ ಮಾತುಕತೆ ನಡೆಸದಿದ್ದರೆ ಮಧ್ಯಸ್ಥಿಕೆಗೆ ‌ನಿವೃತ್ತ ನ್ಯಾಯಾಧೀಶರನ್ನು ನೇಮಿಸಲಾಗುವುದು ಎಂದು ಹೈಕೋರ್ಟ್​ ವಿಭಾಗೀಯ ಪೀಠವು ಹೇಳಿತ್ತು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯದಲ್ಲಿ ಈಚೆಗೆ ಸಾರಿಗೆ ನಿಗಮಗಳ ನೌಕರರು ನಡೆಸಿದ್ದ ಮುಷ್ಕರಿಂದ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಸದ್ಯದ ಆರ್ಥಿಕ ಪರಿಸ್ಥಿತಿಯಲ್ಲಿ ನೌಕರರ ಬೇಡಿಕೆ ಈಡೇರಿಸಲು ಆಗುವುದಿಲ್ಲ ಎಂದು ಹೇಳಿದ್ದ ರಾಜ್ಯ ಸರ್ಕಾರ ಮುಷ್ಕರ ನಿರತ ಹಲವು ನೌಕರರನ್ನು ಅಮಾನತು, ವಜಾ ಮಾಡಿತ್ತು. ನಂತರದ ದಿನಗಳಲ್ಲಿ ಹೈಕೋರ್ಟ್​ ಆದೇಶಕ್ಕೆ ತಲೆಬಾಗಿ ನೌಕರರು ಕೆಲಸಕ್ಕೆ ಹಾಜರಾಗಿದ್ದರು.

ಇದನ್ನೂ ಓದಿ: ಸಂಸದ ತೇಜಸ್ವಿ ಸೂರ್ಯ ಮತ್ತಿತರರ ವಿರುದ್ಧದ ಪಿಐಎಲ್ ರಾಜಕೀಯ ಪ್ರೇರಿತವಾದದ್ದು; ವಿಚಾರಣೆಗೆ ನಿರಾಕರಿಸಿದ ಹೈಕೋರ್ಟ್

ಮಾಧ್ಯಮಗಳು ಭಯ ಹುಟ್ಟಿಸುತ್ತಿವೆ ಕ್ರಮ ಕೈಗೊಳ್ಳಿ ಎಂದು ಅರ್ಜಿ; ಚಾನೆಲ್​ ಬದಲಿಸುವ ಆಯ್ಕೆಯೂ ವೀಕ್ಷಕರಿಗಿದೆ ಎಂದ ಹೈಕೋರ್ಟ್​

(Karnataka High Court postponed May 26 to KSRTC BMTC Karnataka transport strike hearing)