ಮಾಧ್ಯಮಗಳು ಭಯ ಹುಟ್ಟಿಸುತ್ತಿವೆ ಕ್ರಮ ಕೈಗೊಳ್ಳಿ ಎಂದು ಅರ್ಜಿ; ಚಾನೆಲ್ ಬದಲಿಸುವ ಆಯ್ಕೆಯೂ ವೀಕ್ಷಕರಿಗಿದೆ ಎಂದ ಹೈಕೋರ್ಟ್
ಚಿತಾಗಾರಗಳ ದೃಶ್ಯಗಳನ್ನು ಪ್ರಸಾರ ಮಾಡುವುದರಿಂದ ವೀಕ್ಷಕರಿಗೆ ಮಾನಸಿಕ ಒತ್ತಡವಾಗಿ ಸಾವು ಸಂಭವಿಸಬಹುದು. ಹೀಗಾಗಿ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಕಾಯ್ದೆಯಡಿ ಮಾಧ್ಯಮಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಲೆಟ್ಸ್ ಕಿಟ್ ಫೌಂಡೇಷನ್ ಪಿಐಎಲ್ ಸಲ್ಲಿಸಿತ್ತು.
ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡಿದ್ದು ಸಾವು-ನೋವುಗಳ ಕುರಿತಾದ ವರದಿ ಸಹಜವಾಗಿಯೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ವಾಸ್ತವತೆಯೇ ಭೀಕರವಾಗಿದ್ದು ಆ ಕುರಿತಾದ ವರದಿಗಳನ್ನು ನೋಡಿದಾಗ ಜನರಲ್ಲಿಯೂ ಆತಂಕ ಮೂಡುತ್ತಿದೆ. ಆದರೆ, ಕೆಲವರು ಮಾತ್ರ ಮಾಧ್ಯಮಗಳು ಇಂತಹ ವರದಿ ಪ್ರಸಾರ ಮಾಡುವ ಕುರಿತು ಆಕ್ಷೇಪ ಎತ್ತುತ್ತಿದ್ದು, ಜನರಲ್ಲಿ ಭಯ ಹುಟ್ಟಿಸುವಂತೆ ವರದಿ ಮಾಡಲಾಗುತ್ತಿದೆ ಎಂಬ ಆರೋಪವನ್ನೂ ಹೊರಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೊವಿಡ್‌ನಿಂದ ಸಾಯುತ್ತಿರುವವರ ದೃಶ್ಯ ಪ್ರಸಾರಕ್ಕೆ ನಿರ್ಬಂಧ ಕೋರಿ ಲೆಟ್ಸ್ ಕಿಟ್ ಫೌಂಡೇಷನ್ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ಮಾಡಿದ ಕರ್ನಾಟಕ ಉಚ್ಛ ನ್ಯಾಯಾಲಯದ ಸಿಜೆ ಎಎಸ್ ಒಕಾ ನೇತೃತ್ವದ ಪೀಠ ಪ್ರಕರಣವನ್ನು ಇತ್ಯರ್ಥಗೊಳಿಸಿ, ವೀಕ್ಷಕರಿಗೆ ಚಾನಲ್ ಬದಲಿಸುವ ಆಯ್ಕೆಯೂ ಇದೆ. ಉತ್ತಮವಾದದ್ದನ್ನು ವೀಕ್ಷಿಸಲು ಚಾನಲ್ ಬದಲಿಸಬಹುದು ಎಂದು ಅಭಿಪ್ರಾಯಪಟ್ಟಿದೆ.
ಮಾಧ್ಯಮಗಳು ಜೀವಭಯದ ಭೀತಿ ಹುಟ್ಟಿಸುತ್ತಿವೆ. ಕೊವಿಡ್‌ನಿಂದ ನರಳುವ ಸಾವಿನ ದೃಶ್ಯ ಪ್ರಸಾರ ಮಾಡುತ್ತಿರುವುದು ಜನರಲ್ಲಿ ಭಯ, ಆತಂಕ, ಖಿನ್ನತೆ ಮೂಡಿಸುತ್ತಿದೆ. ಚಿತಾಗಾರಗಳ ದೃಶ್ಯಗಳನ್ನು ಪ್ರಸಾರ ಮಾಡುವುದರಿಂದ ವೀಕ್ಷಕರಿಗೆ ಮಾನಸಿಕ ಒತ್ತಡವಾಗಿ ಸಾವು ಸಂಭವಿಸಬಹುದು. ಹೀಗಾಗಿ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಕಾಯ್ದೆಯಡಿ ಮಾಧ್ಯಮಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಲೆಟ್ಸ್ ಕಿಟ್ ಫೌಂಡೇಷನ್ ಪಿಐಎಲ್ ಸಲ್ಲಿಸಿತ್ತು.
ಇದನ್ನು ವಿಚಾರಿಸಿದ ಹೈಕೋರ್ಟ್ ವಿಭಾಗೀಯ ಪೀಠ ಈ ಬಗ್ಗೆ ಸಂಬಂಧಿಸಿದ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಎಂದು ಅರ್ಜಿದಾರರಿಗೆ ಸೂಚನೆ ನೀಡಿದ್ದು, ವೀಕ್ಷಕರಿಗೆ ಚಾನಲ್ ಬದಲಿಸುವ ಆಯ್ಕೆಯೂ ಇದೆ. ಉತ್ತಮವಾದದ್ದನ್ನು ವೀಕ್ಷಿಸಲು ಚಾನಲ್ ಬದಲಿಸಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಪಿಐಎಲ್ ಇತ್ಯರ್ಥಪಡಿಸಿದೆ. ಕೊವಿಡ್ ಆರಂಭವಾದಾಗಿನಿಂದಲೂ ವಾಸ್ತವ ಚಿತ್ರಣವನ್ನು ಕಟ್ಟಿಕೊಡುತ್ತಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಈ ಸಂದರ್ಭದಲ್ಲಿ ಹೈಕೋರ್ಟ್ ಸದರಿ ಅಭಿಪ್ರಾಯವನ್ನು ವ್ಯಕ್ತಪಡಿಸಿರುವುದು ಗಮನಾರ್ಹವಾಗಿದೆ.
(Viewers have option to change channel if they do not like one says Karnataka High Court on PIL against News Channels for covering Covid death news) ಇದನ್ನೂ ಓದಿ: ಮಾಧ್ಯಮಗಳು ಹೈಕೋರ್ಟ್ ಅಭಿಪ್ರಾಯ ವರದಿ ಮಾಡದಂತೆ ನಿರ್ಬಂಧ ವಿಧಿಸಲಾಗುವುದಿಲ್ಲ: ಸುಪ್ರೀಂಕೋರ್ಟ್