ಸುದೀಪ್ ಅಕ್ಕನ ಮಗ ಸಂಚಿತ್ ನಟನೆಯ ಹೊಸ ಚಿತ್ರ ಅನೌನ್ಸ್; ಕಿಚ್ಚ, ಕೆಆರ್ಜಿ ನಿರ್ಮಾಣ
ಹೊಸ ವರ್ಷದ ಪ್ರಯುಕ್ತ ಕಿಚ್ಚ ಸುದೀಪ್ ಕಡೆಯಿಂದ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್ ಹೀರೋ ಆಗಿ ನಟಿಸಲಿರುವ ಹೊಸ ಸಿನಿಮಾ ಅನೌನ್ಸ್ ಮಾಡಲಾಗಿದೆ. ಜ.24ರಂದು ಈ ಸಿನಿಮಾದ ಟೈಟಲ್ ಮತ್ತು ಫಸ್ಟ್ ಲುಕ್ ಬಿಡುಗಡೆ ಆಗಲಿದೆ. ವಿವೇಕ ಅವರು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಆ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ..
ಸಿಕ್ಕಾಪಟ್ಟೆ ಮಾಸ್ ಆಗಿ ಮೂಡಿಬಂದ ‘ಮ್ಯಾಕ್ಸ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಇದು ಸುದೀಪ್ ಅವರ ಅಭಿಮಾನಿಗಳಿಗೆ ಸಖತ್ ಖುಷಿ ನೀಡಿದೆ. ಅದೇ ಖುಷಿಯಲ್ಲಿ ಇನ್ನೊಂದು ಹೊಸ ಸುದ್ದಿಯನ್ನು ನೀಡಲಾಗಿದೆ. ಹೊಸ ವರ್ಷದ ಪ್ರಯುಕ್ತ ಕಿಚ್ಚ ಸುದೀಪ್ ಅವರ ಕಡೆಯಿಂದ ಹೊಸ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಳ್ಳಲಾಗಿದೆ. ಈ ಸುದ್ದಿ ಕೇಳಿ ಸುದೀಪ್ ಫ್ಯಾನ್ಸ್ಗೆ ತುಂಬ ಖುಷಿ ಆಗಿದೆ. ಅಂದಹಾಗೆ, ಇದು ಸುದೀಪ್ ನಟಿಸಲಿರುವ ಸಿನಿಮಾವಲ್ಲ. ಬದಲಿಗೆ, ಸುದೀಪ್ ಬಂಡವಾಳ ಹೂಡಲಿರುವ ಸಿನಿಮಾ ಎಂಬುದು ವಿಶೇಷ.
ಹೌದು, ಕಿಚ್ಚ ಸುದೀಪ್ ಅವರ ‘ಸುಪ್ರಿಯಾನ್ವಿ ಪ್ರೊಡಕ್ಷನ್’ ಹಾಗೂ ‘ಕೆಆರ್ಜಿ ಸ್ಟುಡಿಯೋಸ್’ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ ಸಿನಿಮಾ ಇದು. ಈ ಸಿನಿಮಾದಲ್ಲಿ ಹೀರೋ ಆಗಿ ಸುದೀಪ್ ಅವರ ಅಕ್ಕನ ಮಗ ಸಂಚಿತ್ ಸಂಜೀವ್ ಅಭಿನಯಿಸಲಿದ್ದಾರೆ. ಇದು ಸಂಚಿತ್ ಅವರ ಚೊಚ್ಚಲ ಸಿನಿಮಾ ಆಗಿದ್ದು, ಸುದೀಪ್ ಅವರು ನಿರ್ಮಾಣ ಮಾಡುತ್ತಿರುವುದರಿಂದ ಜನರಲ್ಲಿ ನಿರೀಕ್ಷೆ ಜಾಸ್ತಿ ಆಗಿದೆ.
‘ಎಕ್ಕ’ ಸಿನಿಮಾದ ನಂತರ ‘ಕೆಆರ್ಜಿ ಸ್ಟುಡಿಯೋಸ್’ ಸಂಸ್ಥೆಯು ಸಂಚಿತ್ ನಟನೆಯ ಸಿನಿಮಾವನ್ನು ಅನೌನ್ಸ್ ಮಾಡಿದೆ. ‘ಕೆಆರ್ಜಿ’ ಕಡೆಯಿಂದ ಒಂದರ ಹಿಂದೊಂದು ಚಿತ್ರಗಳು ಮೂಡಿಬರುತ್ತಿವೆ. ಈಗ ಅನೌನ್ಸ್ ಆಗಿರುವುದು ಸುದೀಪ್ ಸಹೋದರಿಯ ಮಗನ ಸಿನಿಮಾ ಆದ್ದರಿಂದ ಸಹಜವಾಗಿಯೇ ಈ ಪ್ರಾಜೆಕ್ಟ್ ಮೇಲೆ ನಿರೀಕ್ಷೆ ಡಬಲ್ ಆಗಿದೆ. ಸದ್ಯದಲ್ಲೇ ಈ ಚಿತ್ರಕ್ಕೆ ಮುಹೂರ್ತ ನಡೆಯಲಿದೆ. ಬಳಿಕ ಚಿತ್ರೀಕರಣ ಆರಂಭ ಆಗಲಿದೆ. ಪಾತ್ರವರ್ಗ ಹಾಗೂ ಇನ್ನುಳಿದ ತಂತ್ರಜ್ಞರ ಬಗ್ಗೆ ಮುಹೂರ್ತದ ದಿನ ಮಾಹಿತಿ ಹೊರಬೀಳಲಿದೆ.
ಇದನ್ನೂ ಓದಿ: ಬಾಸ್ ವಿವಾದ ಹಾಗೂ ದರ್ಶನ್ ಫ್ಯಾನ್ಸ್ ಬಗ್ಗೆ ನೇರವಾಗಿ ಮಾತನಾಡಿದ ಸುದೀಪ್
ಈ ಸಿನಿಮಾಗೆ ವಿವೇಕ ಅವರು ನಿರ್ದೇಶನ ಮಾಡಲಿದ್ದಾರೆ. ಅವರಿಗೂ ಇದು ಚೊಚ್ಚಲ ನಿರ್ದೇಶನದ ಪ್ರಯತ್ನ. ಈ ಮೊದಲು ತಮಿಳು, ತೆಲುಗು ಮತ್ತು ಹಿಂದಿ ಸಿನಿಮಾಗಳ ತೆರೆಹಿಂದೆ ಕೆಲಸ ಮಾಡಿದ ಅನುಭವ ಅವರಿಗೆ ಇದೆ. ಈಗ ಅವರು ಸ್ವತಂತ್ರ ನಿರ್ದೇಶಕನಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡುತ್ತಿದ್ದಾರೆ. ಮೈಸೂರು ಮೂಲದ ವಿವೇಕ ಅವರು ಸಂಚಿತ್ ಸಲುವಾಗಿ ವಿಭಿನ್ನ ಕಥೆಯನ್ನು ಸಿದ್ಧ ಮಾಡಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಕ್ರೈಂ ಥ್ರಿಲ್ಲರ್ ಕಹಾನಿ ಇರಲಿದೆ. ಈ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಏನು ಎಂಬುದು ಜನವರಿ 24ಕ್ಕೆ ತಿಳಿಯಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:12 pm, Wed, 1 January 25