ಉಪೇಂದ್ರಗೆ ತಮ್ಮ ಈ ಸಿನಿಮಾವನ್ನು ಹಿಂದಿಗೆ ರೀಮೇಕ್ ಮಾಡುವಾಸೆ
Upendra: ನಟರಾಗಿ ಜನಪ್ರಿಯ ಆಗಿರುವುದಕ್ಕಿಂತಲೂ ಉಪೇಂದ್ರ ನಿರ್ದೇಶಕರಾಗಿ ಹೆಚ್ಚು ಜನಪ್ರಿಯ. ಈ ಹಿಂದೆ ಹಿಂದಿಯಲ್ಲಿಯೂ ಸಿನಿಮಾ ನಿರ್ದೇಶಿಸುವ ಅವಕಾಶ ಅವರಿಗೆ ಒದಗಿ ಬಂದಿತ್ತು ಆದರೆ ಯೋಜನೆ ಕೈಗೂಡಿರಲಿಲ್ಲ. ಆದರೆ ತಾವು ಈಗ ಹಿಂದಿಯಲ್ಲಿ ಸಿನಿಮಾ ಮಾಡುವುದಾದರೆ ತಾವೇ ನಿರ್ದೇಶಿಸಿರುವ ಹಳೆಯ ಸಿನಿಮಾ ಒಂದನ್ನು ರೀಮೇಕ್ ಮಾಡುವ ಆಸೆ ಹೊಂದಿದ್ದಾರೆ ಯಾವುದು ಆ ಸಿನಿಮಾ?
ಉಪೇಂದ್ರ ನಿರ್ದೇಶಕರಾಗಿ ಹೆಚ್ಚು ಜನಪ್ರಿಯ. 90 ರ ದಶಕದಲ್ಲಿ ‘ಶ್’, ‘ಓಂ’, ‘ಎ’ ಇನ್ನಿತರೆ ಸಿನಿಮಾಗಳು ಒಂದರ ಹಿಂದೊಂದು ಬ್ಲಾಕ್ ಬಸ್ಟರ್ ಆದಾಗ ಅವರ ಹೆಸರು ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ ಹರಿದಾಡಿತ್ತು. ಹಿಂದಿ, ತೆಲುಗಿನಲ್ಲಿಯೂ ಸಿನಿಮಾ ನಿರ್ದೇಶಿಸಲು ಅವರಿಗೆ ಅವಕಾಶ ದೊರಕಿತ್ತು. ಉಪೇಂದ್ರ ಸಹ ಪ್ರಯತ್ನಗಳನ್ನು ಮಾಡಿ ತೆಲುಗಿನಲ್ಲಿ ‘ಓಂಕಾರಂ’, ‘ರಾ’ ಸಿನಿಮಾಗಳನ್ನು ಮಾಡಿದರು. ಆದರೆ ಹಿಂದಿಯಲ್ಲಿ ಸಿನಿಮಾ ಮಾಡಲು ಸಾಧ್ಯ ಆಗಿರಲಿಲ್ಲ. ಆದರೆ ಇತ್ತೀಚೆಗಿನ ಸಂದರ್ಶನವೊಂದರಲ್ಲಿ ಅವರು ತಮ್ಮದೇ ನಿರ್ದೇಶನದ ಸಿನಿಮಾ ಒಂದನ್ನು ಹಿಂದಿಯಲ್ಲಿ ರೀಮೇಕ್ ಮಾಡುವ ಆಸೆ ವ್ಯಕ್ತಪಡಿಸಿದ್ದಾರೆ.
1999 ರಲ್ಲಿ ಬಿಡುಗಡೆ ಆಗಿದ್ದ ತಾವೇ ನಟಿಸಿ, ನಿರ್ದೇಶನ ಮಾಡಿದ್ದ ಭಿನ್ನ ಕತೆಯುಳ್ಳ ಸಿನಿಮಾ ‘ಉಪೇಂದ್ರ’ ಅನ್ನು ಹಿಂದಿಗೆ ರೀಮೇಕ್ ಮಾಡುವ ಆಸೆಯನ್ನು ಅವರು ವ್ಯಕ್ತಪಡಿಸಿದ್ದಾರೆ. ‘ಯುಐ’ ಸಿನಿಮಾದ ಪ್ರಚಾರದ ಸಂದರ್ಭದಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಅವರು ಈ ವಿಷಯ ಹಂಚಿಕೊಂಡಿದ್ದರು. 1999 ರಲ್ಲಿ ಬಿಡುಗಡೆ ಆದ ‘ಉಪೇಂದ್ರ’ ಸಿನಿಮಾನಲ್ಲಿ ಉಪ್ಪಿಯ ಜೊತೆಗೆ ರವೀನಾ ಟಂಡನ್, ಪ್ರೇಮಾ ಮತ್ತು ದಾಮಿನಿ ನಾಯಕಿಯರಾಗಿ ನಟಿಸಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಆಗಿತ್ತು. ಸಿನಿಮಾದಲ್ಲಿ ಮಾರುಮುತ್ತು ವಿಲನ್.
ಇದನ್ನೂ ಓದಿ:‘ಯುಐ’ ಸಿನಿಮಾ ಗೆಲುವಿನ ಬಳಿಕ ಉಡುಪಿ ಕೃಷ್ಣನ ದರ್ಶನ ಪಡೆದ ಉಪೇಂದ್ರ
ಅದೇ ಸಂದರ್ಶನದಲ್ಲಿ ಪ್ಯಾನ್ ಇಂಡಿಯಾ ಸಿನಿಮಾ, ಕನ್ನಡ ಚಿತ್ರರಂಗದ ಬೆಳವಣಿಗೆ ಇನ್ನಿತರೆ ವಿಷಯಗಳ ಬಗ್ಗೆಯೂ ಮಾತನಾಡಿದ್ದ ಉಪೇಂದ್ರ, ‘ಪ್ಯಾನ್ ಇಂಡಿಯಾ ಸಿನಿಮಾಗಳು, ವಿವಿಧ ಸಂಸ್ಕೃತಿಗಳ ಪರಿಚಯವನ್ನು ಪ್ರೇಕ್ಷಕರಿಗೆ ಮಾಡಿಸುತ್ತದೆ. ಬೇರೆ ಬೇರೆ ಸಂಸ್ಕೃತಿಯ ಜನರನ್ನು ಪರಸ್ಪರ ಹತ್ತಿರ ತರುತ್ತದೆ’ ಎಂದಿದ್ದಾರೆ. ಕನ್ನಡ ಚಿತ್ರರಂಗದ ಬೆಳವಣಿಗೆ ಬಗ್ಗೆಯೂ ಮಾತನಾಡಿರುವ ಉಪೇಂದ್ರ, ದಶಕಗಳಿಂದಲೂ ಚಿತ್ರರಂಗ ಬೆಳೆಯುತ್ತಲೇ ಸಾಗುತ್ತಿದೆ. ತಂತ್ರಜ್ಞಾನದ ನೆರವಿನಿಂದಾಗಿ ಹೆಚ್ಚು ಗುಣಮಟ್ಟದ ಸಿನಿಮಾಗಳನ್ನು ನಿರ್ಮಿಸಲಾಗುತ್ತಿದೆ. ಬಜೆಟ್ಗಳು ಸಹ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿವೆ ಎಂದಿದ್ದಾರೆ.
ಉಪೇಂದ್ರ ನಟಿಸಿ ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾ ಎರಡು ವಾರಗಳ ಹಿಂದಷ್ಟೆ ಬಿಡುಗಡೆ ಆಗಿತ್ತು. ಸಿನಿಮಾ ಬಹಳ ಒಳ್ಳೆಯ ಪ್ರದರ್ಶನ ಕಂಡಿತು. ‘ಮ್ಯಾಕ್ಸ್’ ಸಿನಿಮಾದಿಂದ ಪ್ರತಿಸ್ಪರ್ಧೆ ಎದುರಿಸಿದರೂ ಸಹ ‘ಯುಐ’ ಉತ್ತಮ ಪ್ರದರ್ಶನವನ್ನು ಕಾಯ್ದಿರಿಸಿಕೊಂಡು ಹಿಟ್ ಸಿನಿಮಾ ಎನಿಸಿಕೊಂಡಿದೆ. ‘ಯುಐ’ ಸಿನಿಮಾದಲ್ಲಿ ರೀಶ್ಮಾ ನಾಣಯ್ಯ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾಕ್ಕೆ ಲಹರಿ ವೇಲು ಮತ್ತು ಕೆಪಿ ಶ್ರೀಕಾಂತ್ ಬಂಡವಾಳ ಹೂಡಿದ್ದು ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ