ತಾವೇ ದೂರುದಾರರಾಗಿ, ತಾವೇ ತೀರ್ಪು ಕೊಟ್ಟ ಮಾಲೂರು ಜಡ್ಜ್: ಹೈಕೋರ್ಟ್ ಛೀಮಾರಿ

ನಿಧಾನಕ್ಕೆ ಚಲಿಸುವಂತೆ ಕೇಳಿದ್ದಕ್ಕೆ ಮೂವರ ವಿರುದ್ಧ ದೂರು ಮಾಲೂರು ಜಡ್ಜ್​​​​ ದಾಖಲಿಸಿದ್ದ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದ್ದು, ಪೊಲೀಸರ ಮೇಲೆ ಒತ್ತಡ ಹೇರಿ ಎಫ್​​​ಐಆರ್ ದಾಖಲಿಸಿದ್ದ ಜೆಎಂಎಫ್ ಸಿ ಜಡ್ಜ್  ಗಾಯಾತ್ರಿ ನಡೆಗೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇನ್ನು ಪ್ರಭಾವ ಬಳಿಸಿದ್ದಕ್ಕೆ ಹೈಕೋರ್ಟ್ ಛೀಮಾರಿ ಹಾಕಿದ್ದು, ಜಡ್ಜ್​​ ದಾಖಲಿಸಿದ್ದ ಕೇಸಿಗೆ ತಡೆ ನೀಡಿದೆ.

ತಾವೇ ದೂರುದಾರರಾಗಿ, ತಾವೇ ತೀರ್ಪು ಕೊಟ್ಟ ಮಾಲೂರು ಜಡ್ಜ್: ಹೈಕೋರ್ಟ್ ಛೀಮಾರಿ
ಉಚ್ಛ ನ್ಯಾಯಾಲಯ
Image Credit source: Bar and Bench
Edited By:

Updated on: Jul 29, 2026 | 10:15 PM

ಬೆಂಗಳೂರು, (ಜುಲೈ 29):  ಖಾಸಗಿ ಜಗಳಕ್ಕೆ ತಮಗಿರುವ ಹುದ್ದೆ ಹಾಗೂ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ಬೈಕ್ ಸವಾರ (Biker), ಆತನ ತಾಯಿ ಹಾಗೂ 69 ವರ್ಷದ ವೃದ್ಧ ತಾತನ ವಿರುದ್ಧ ಎಫ್‌ಐಆರ್ (FIR) ದಾಖಲಿಸಿದ್ದ ಮಾಲೂರು ಜೆಎಂಎಫ್‌ಸಿ (JMFC) ಜಡ್ಜ್ ಗಾಯತ್ರಿ ಅವರ ವರ್ತನೆಗೆ ಕರ್ನಾಟಕ ಹೈಕೋರ್ಟ್ (Karnataka High Court) ತೀವ್ರ ತರಾಟೆಗೆ ತೆಗೆದುಕೊಂಡಿದೆ. ಹೌದು..  ಬೈಕ್ ಸವಾರ, ಅಜ್ಜ, ಮಹಿಳೆ ಮೇಲಿನ ಪ್ರಕರಣದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, ಜಡ್ಜ್ ಆದ ಮಾತ್ರಕ್ಕೆ ನಾಗರಿಕರೊಂದಿಗೆ ಇಂಥ ವರ್ತನೆ ಸರಿಯಲ್ಲ ಎಂದು ಜೆಎಂಎಫ್ ಸಿ ಜಡ್ಜ್ ವರ್ತನೆಗೆ ಬೇಸರ ವ್ಯಕ್ತಪಡಿಸಿದೆ. ಅಲ್ಲದೇ  ಬೈಕ್ ಚಾಲಕ, ತಾಯಿ, ತಾತನ ವಿರುದ್ಧದ ಎಫ್ಐಆರ್​ಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.

ತಾವೇ ದೂರುದಾರರು, ತಾವೇ ಜಡ್ಜ್ ಆಗಿ ಆದೇಶಿಸಿದ್ದಾರೆ

ಮಾಲೂರು ಜಡ್ಜ್ ತಮ್ಮ ಖಾಸಗಿ ಇನ್ನೋವಾ ಕಾರಿನಲ್ಲಿ ಪತಿಯೊಂದಿಗೆ ತೆರಳುತ್ತಿದ್ದಾಗ ನಿಧಾನಕ್ಕೆ ಚಲಿಸುವಂತೆ ಬೈಕ್ ಚಾಲಕ ಹೇಳಿದ್ದಕ್ಕೆ ಜಗಳ ಮಾಡಿದ್ದಾರೆ. ಜಡ್ಜ್ ಗಾಯತ್ರಿ ಹಾಗೂ ಪತಿ ಆತನ‌ ಮನೆಯವರೆಗೆ ಚೇಸ್ ಮಾಡಿದ್ದಾರೆ. ಸಿಸಿಟಿವಿ ವೈರಲ್ ಆದ ಬಳಿಕ ಎಫ್ಐಆರ್ ದಾಖಲಿಸಿದ್ದಾರೆ. ಜಡ್ಜ್ ಒತ್ತಡದಿಂದ 70 ವರ್ಷದ ತಾತನನ್ನೂ ಪೊಲೀಸರು ಬಂಧಿಸಿದ್ದರು ಎಂದು ಎಸ್ ಪಿಪಿ ಬಿ.ಎನ್.ಜಗದೀಶ್ ಅವರು ಜಗಳದ ದೃಶ್ಯ ನ್ಯಾಯಮೂರ್ತಿಗಳಿಗೆ ತೋರಿಸಿದ್ದಾರೆ. ಅಲ್ಲದೇ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆದ ದೃಶ್ಯ ತಗೆಯಲೂ ಆದೇಶಿಸಿದ್ದಾರೆ. ತಾವೇ ದೂರುದಾರರು, ತಾವೇ ಜಡ್ಜ್ ಆಗಿ ಆದೇಶಿಸಿದ್ದಾರೆ ಎಂದು ಎಸ್ ಪಿಪಿ ಬಿ.ಎನ್.ಜಗದೀಶ್ ವಾದ ಮಂಡಿಸಿದರು.

ನಾಗರಿಕರೊಂದಿಗೆ ಇಂಥ ವರ್ತನೆ ಸರಿಯಲ್ಲ

ವಾದ ಆಲಿಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಪೀಠ,  ಜಡ್ಜ್ ಆದ ಮಾತ್ರಕ್ಕೆ ನಾಗರಿಕರೊಂದಿಗೆ ಇಂಥ ವರ್ತನೆ ಸರಿಯಲ್ಲ. ಜಡ್ಜ್ ಹುದ್ದೆಗೆ ಥರವಲ್ಲದ ರೀತಿಯಲ್ಲಿ ಗಾಯತ್ರಿ ವರ್ತಿಸಿದ್ದಾರೆ. ಜಡ್ಜ್ ನಡವಳಿಕೆ ಕೋರ್ಟ್ ನೊಳಗೂ ಹೊರಗೂ ವಿಶ್ವಾಸ ಮೂಡಿಸುವಂತಿರಬೇಕು. ಜಡ್ಜ್ ತಮ್ಮ ಹುದ್ದೆಯನ್ನು ದುರುಪಯೋಗಡಿಸಿಕೊಂಡಿದ್ದಾರೆ ಎಂದು ಹೇಳಿ   ಜಡ್ಜ್ ದಾಖಲಿಸಿದ ಎಫ್ಐಆರ್ ಗೆ ಮಧ್ಯಂತರ ತಡೆ ನೀಡಿದೆ.

ಘಟನೆ ಹಿನ್ನೆಲೆ

ಮಾಲೂರು ಘಟನೆ ಹಿನ್ನೆಲೆ‌ ನೋಡುವುದಾದರೆ, ನ್ಯಾಯಾಧೀಶರ ಕಾರಿಗೆ ಅಡ್ಡಿ ಬಂದ ದ್ವಿಚಕ್ರ ವಾಹನ ಸವಾರನೊಂದಿಗೆ ನ್ಯಾಯಾಧೀಶೆ ಜಗಳ ಮಾಡಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು, ಈ ಸಂಬಂಧ ಮಾಲೂರು ಪೊಲೀಸರಿಗೆ ದೂರು ಸಲ್ಲಿಸಿದ್ದ ನ್ಯಾಯಾಧೀಶೆ ಗಾಯತ್ರಿ ದೂರಿನ ಆಧಾರದ ಮೇಲೆ ಮಾಲೂರು ಪೊಲೀಸರು ಮೂವರನ್ನು ಬಂಧಿಸಿದ್ದರು. ಕೋಲಾರ ಜಿಲ್ಲೆಯ ಮಾಲೂರು ನಗರದ ಕೆ.ಎಂ.ವಿನಯ್ (24), ಅವರ ತಾಯಿ ಕವಿತಾ (47) ಹಾಗೂ ತಾತ ವೆಂಕಟೇಶ್ (69) ಎಂಬುವವರನ್ನು ಬಂಧಿಸಿ ಬಿಡುಗಡೆ ಮಾಡಲಾಗಿತ್ತು. ಅದು ಸಹ ತಮ್ಮ ಕಾರಿಗೆ ದ್ವಿಚಕ್ರ ವಾಹನ ಚಾಲಕ ವಿನಯ್ ಉದ್ದೇಶ ಪೂರ್ವಕವಾಗಿ ಅಡ್ಡಿ ಪಡಿಸಿದ್ದಾನೆ ಎಂದು ದೂರು ನೀಡಿದ್ರು. ಸದ್ಯ ಈ ಪ್ರಕರಣಕ್ಕೆ ಮಧ್ಯಂತರ ತಡೆ ನೀಡುವ‌ ಮೂಲಕ ನ್ಯಾಯಾಧೀಶೆಗೆ ಹಿನ್ನಡೆಯಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿಕ್ಲಿಕ್ ಮಾಡಿ 

Loading...
Unable to load recommendations.
Follow Us