Bus Strike: ಕೊರೊನಾ ನಡುವೆಯೂ ಮಠ, ಮಂದಿರಕ್ಕೆ ಹಣ ನೀಡಿಲ್ಲವೇ: ಸರ್ಕಾರಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನೆ
ವಿದ್ಯಾರ್ಥಿಗಳಿಗೆ ಸಮಸ್ಯೆ ವಿಚಾರವಾಗಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಇದನ್ನ ಸರ್ಕಾರ ಮೊದಲೇ ಯೋಚನೆ ಮಾಡಬೇಕಿತ್ತು. ಇದಕ್ಕೆಲ್ಲಾ ನೇರ ಕಾರಣ ಸರ್ಕಾರವೇ ಆಗಿದೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು: ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಯುತ್ತೆ. ಮುಷ್ಕರದ ವೇಳೆ ಕೊರೊನಾ ನಿಯಮ ಸಹ ಉಲ್ಲಂಘಿಸಿಲ್ಲ. ಇಂದಿನಂತೆ ನಾಳೆಯೂ ಕರ್ತವ್ಯಕ್ಕೆ ಹಾಜರಾಗದೇ ಮುಷ್ಕರ ನಡೆಸಲಾಗುತ್ತೆ. ಸಾರಿಗೆ ಸಿಬ್ಬಂದಿಯನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಬೇಕು. ಇದಕ್ಕೆಲ್ಲಾ ಕೊರೊನಾ ಆರ್ಥಿಕ ಸಂಕಷ್ಟ ಎಂದು ರಾಜ್ಯ ಸರ್ಕಾರ ಹೇಳುತ್ತೆ. ಆದರೆ, ಕೊರೊನಾ ನಡುವೆಯೂ ಮಠ, ಮಂದಿರಕ್ಕೆ ಹಣ ನೀಡಿಲ್ಲವೇ? ಅರ್ಧ ಸಂಬಳ ನೀಡಿ ಕೆಲಸ ಮಾಡಿಸಿಕೊಳ್ಳುವುದು ಸರಿಯೇ? ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನಮ್ಮ ಹೋರಾಟ ಶಾಂತಿಯುತವಾಗಿ ಮುಂದುವರಿಯುತ್ತೆ. ರಾಜ್ಯ ಸರ್ಕಾರ ಕೂಡಲೇ ಈ ತಾರತಮ್ಯವನ್ನು ಸರಿಪಡಿಸಲಿ. ನಮ್ಮ ಬೇಡಿಕೆ ಈಡೇರಿಸಿದ್ರೆ ಮುಖ್ಯಮಂತ್ರಿ ಜೊತೆ ಮಾತುಕತೆಗೆ ಸಿದ್ಧ. ಇಲ್ಲದಿದ್ರೆ ಅನಿರ್ದಿಷ್ಟಾವಧಿ ಮುಷ್ಕರ ಮುಂದುವರಿಯುತ್ತದೆ. 6ನೇ ವೇತನ ಆಯೋಗದ ವರದಿಯಂತೆ ಸರ್ಕಾರ ವೇತನ ನೀಡಲಿ. ಇದು ನಮ್ಮ ಅತಿ ಮುಖ್ಯ ಬೇಡಿಕೆಯಾಗಿದೆ. ಈ ಬೇಡಿಕೆ ಈಡೇರುವವರೆಗೂ ಮುಷ್ಕರ ಹಿಂಪಡೆಯಲ್ಲ ಎಂದು ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ನೋಟಿಸ್ ನೀಡಿ ಅನಿರ್ದಿಷ್ಟಾವಧಿ ಮುಷ್ಕರ ಮಾಡ್ತಿದ್ದೇವೆ. ಎಸ್ಮಾ ಜಾರಿ ಮಾಡುವ ಸನ್ನಿವೇಶ ಸೃಷ್ಟಿಯಾಗಿಲ್ಲ. ಸೂಕ್ತ ಕಾರಣ ನೀಡಿ ಎಸ್ಮಾ ಜಾರಿಗೊಳಿಸಲಿ ಎಂದು ಕೋಡಿಹಳ್ಳಿ ಹೇಳಿದ್ದಾರೆ. ನೌಕರರನ್ನು ಬಂಧಿಸುವ ಆಲೋಚನೆ ಇದ್ದರೆ ನಾಡಿನ ಜನರಿಗೆ ತಿಳಿಸಲಿ. ಆ ಬಳಿಕ, ಎಸ್ಮಾ ಜಾರಿಗೊಳಿಸಲಿ. ಸಿಎಂ ಆಗಲಿ ಸಾರಿಗೆ ಸಚಿವರು ಆಗಲಿ ನಮ್ಮನ್ನು ಕರೆದು ಮಾತುಕತೆ ನಡೆಸಿಲ್ಲ. ಮುಖ್ಯ ಕಾರ್ಯದರ್ಶಿಗಳು ಸರ್ಕಾರದ ವಕ್ತಾರನಂತೆ ಮಾತನಾಡಿದ್ದಾರೆ. ಆದರೆ ಇದನ್ನು ನಾವು ಗೌರವಿಸುತ್ತೇವೆ. ಕಾರಣ ಕೊಟ್ಟು ಎಸ್ಮಾ ಜಾರಿಗೊಳಿಸಿ ಎಂದು ಕೋಡಿಹಳ್ಳಿ ಹೇಳಿದ್ದಾರೆ.
ಮಾರ್ಚ್ ತಿಂಗಳ ವೇತನ ತಡೆಹಿಡಿಯುವುದು ತಪ್ಪು ಎಂಟರಿಂದ ಹತ್ತು ಪಟ್ಟು ಸಂಬಳ ಹೆಚ್ಚು ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಕೋಡಿಹಳ್ಳಿ ಚಂದ್ರಶೇಖರ್, ನಾವು ಈ ಬೇಡಿಕೆಯನ್ನು ಸರ್ಕಾರಕ್ಕೆ ಮುಂದಿಟ್ಟಿಲ್ಲ. ಅದು ನಮ್ಮ ಡಿಮ್ಯಾಂಡ್ ಕೂಡ ಅಲ್ಲ. ನಮಗೆ ಬೇಕಿರುವುದ ಆರನೇ ವೇತನ ಆಯೋಗ ಅಷ್ಟೇ. ಮಾರ್ಚ್ ತಿಂಗಳ ವೇತನ ತಡೆಹಿಡಿಯುವುದು ತಪ್ಪು. ಮಾರ್ಚ್ ತಿಂಗಳ ವೇತನ ತಡೆಹಿಡಿಯುವುದು ಸರಿಯಾದ ಕ್ರಮವಲ್ಲ. ಅಧಿಕಾರ ದುರ್ಬಳಕೆ ಸರಿಯಲ್ಲ. ಎಲ್ಲದರ ಮೇಲೆ ನ್ಯಾಯಾಲಯ ಅಂತ ಒಂದಿದೆ, ಅದು ನೆನಪಿರಲಿ ಎಂದು ಚಂದ್ರಶೇಖರ್ ಎಚ್ಚರಿಸಿದ್ದಾರೆ.
ಈ ನಡುವೆ, ರಾಜ್ಯದಲ್ಲಿ ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. ಸಾರಿಗೆ ನೌಕರರ 9 ಬೇಡಿಕೆ ಪೈಕಿ 8 ಬೇಡಿಕೆ ಈಡೇರಿಸಿದ್ದೇವೆ. ಮುಷ್ಕರ ಕೈ ಬಿಟ್ಟು ಮಾತುಕತೆಗೆ ಬನ್ನಿ, ಮಾತುಕತೆಗೆ ಸಿದ್ಧ ಎಂದು ಯರಗಟ್ಟಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಸಾರಿಗೆ ನೌಕರರಿಗೆ ಮುಷ್ಕರ ಕೈಬಿಡುವಂತೆ ಹೇಳಿದ್ದಾರೆ. ಮಾತುಕತೆಯ ಮೂಲಕ ಸಮಸ್ಯೆ ಇತ್ಯರ್ಥ ಮಾಡಿಕೊಳ್ಳುವ ಆಶಯವನ್ನು ಯಡಿಯೂರಪ್ಪ ತೋರಿದ್ದಾರೆ.
ಖಾಸಗಿ ಬಸ್ ಸಿಬ್ಬಂದಿಗಳಿಗೆ ಸಾರಿಗೆ ಸಿಬ್ಬಂದಿ ಮುಷ್ಕರಕ್ಕೆ ಸಹಕರಿಸುವಂತೆ ವಿನಂತಿಸಿದ್ದೇವೆ. ಖಾಸಗಿ ಬಸ್ ಮಾಲೀಕರು ಸ್ಪಂದಿಸದಿದ್ರೆ ಏನು ಮಾಡಲಾಗಲ್ಲ. ಖಾಸಗಿ ವಾಹನಗಳು ರಸ್ತೆಗಿಳಿದರೆ ನಾವು ತಡೆಯುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳ ಸಮಸ್ಯೆಗೂ ಸರ್ಕಾರ ನೇರ ಹೊಣೆ ವಿದ್ಯಾರ್ಥಿಗಳಿಗೆ ಸಮಸ್ಯೆ ವಿಚಾರವಾಗಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್, ಇದನ್ನ ಸರ್ಕಾರ ಮೊದಲೇ ಯೋಚನೆ ಮಾಡಬೇಕಿತ್ತು. ಇದಕ್ಕೆಲ್ಲಾ ನೇರ ಕಾರಣ ಸರ್ಕಾರವೇ ಆಗಿದೆ ಎಂದು ಆರೋಪಿಸಿದ್ದಾರೆ.
ಈ ಮುಷ್ಕರದ ಕುರಿತಾಗಿ ಸರ್ಕಾರದ ಕಡೆಯಿಂದ ಚರ್ಚೆಗೆ ಆಹ್ವಾನ ನೀಡಿದರೆ ಅದಕ್ಕೆ ಸಿದ್ಧರಿದ್ದೇವೆ. ಆದರೆ, ಸರ್ಕಾರದ ವತಿಯಿಂದ ಈವರೆಗೆ ಯಾವುದೇ ಕರೆ ಬಂದಿಲ್ಲ. ಒಂದು ವೇಳೆ ಮಾತುಕತೆಗೆ ಆಹ್ವಾನಿಸಿದರೆ ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದ್ದಾರೆ.
ನಮ್ಮ ಹೋರಾಟಕ್ಕೆ ಬೆಂಬಲಿಸಿದ ಎಲ್ಲರಿಗೂ ಅಭಿನಂದನೆ. ಸಾರಿಗೆ ನೌಕರರು ಮುಷ್ಕರ ಮಾಡ್ತಿದ್ದರೂ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ನಾಳೆಯೂ ನಮ್ಮ ಹೋರಾಟ ಮುಂದುವರಿಯುತ್ತೆ ಏನೇ ಆದರೂ ನಾವು ಹೋರಾಟ ಕೈಬಿಡಲ್ಲ ಎಂದು ಚಂದ್ರಶೇಖರ್ ತಿಳಿಸಿದ್ದಾರೆ.
ಇದನ್ನೂ ಓದಿ: KSRTC BMTC Strike: ಮುಷ್ಕರಕ್ಕೆ ಬೆಂಬಲ ನೀಡದೆ ಬಸ್ ಚಲಾಯಿಸಿದ ಚಾಲಕನ ವಿರುದ್ಧ ಸಹೋದ್ಯೋಗಿಗಳಿಂದ ಗಂಭೀರ ಆರೋಪ
Published On - 5:52 pm, Wed, 7 April 21