
ಬೆಂಗಳೂರು, ಏಪ್ರಿಲ್ 17: ಲಾರಿ ಮಾಲೀಕರ (Lorry Owner) ಸಂಘದೊಂದಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ನಡೆಸಿದ ಎರಡನೇ ಸಭೆ ಯಶಸ್ವಿಯಾಗಿದೆ. ಈ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಮುಷ್ಕರವನ್ನು (Karnataka Lorry Strike) ವಾಪಸ್ ತೆಗೆದುಕೊಳ್ಳುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ ಘೋಷಣೆ ಮಾಡಿದ್ದಾರೆ. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಷ್ಕರ ಈ ಸಮಯದಿಂದಲೇ ವಾಪಸ್ ಪಡೆಯುತ್ತೇನೆ. ಸಚಿವರು ಬಹುತೇಕ ಬೇಡಿಕೆ ಈಡೇರಿಸಿದ್ದಾರೆ. ಸಚಿವರಿಗೆ ಧನ್ಯವಾದ ತಿಳಿಸುತ್ತೇನೆ.
20 ವರ್ಷಗಳಲ್ಲಿ ಈಡೇರದ ಬೇಡಿಕೆ ಸಚಿವ ರಾಮಲಿಂಗಾ ರೆಡ್ಡಿ ಈಡೇರಿಸಿದ್ದಾರೆ ಎಂದು ಹೇಳಿದರು. ಲಾರಿ ಮುಷ್ಕರದಿಂದ ಆದ ತೊಂದರೆಗೆ ಜನರಲ್ಲಿ ವಿಷಾದ ವ್ಯಕ್ತಪಡಿಸಿದ್ದೇನೆ. ಸರ್ಕಾರಕ್ಕೆ ಧನ್ಯವಾದ ಹೇಳುತ್ತೇನೆ. ಒಂದು ದಿನದ ಲಾರಿ ಮುಷ್ಕರದಿಂದ 4500 ಕೋಟಿ ರುಪಾಯಿ ನಷ್ಟವಾಗಿದೆ. ಅಂದಾಜು ಒಂದು ದಿನಕ್ಕೆ 4500 ಕೋಟಿ ರುಪಾಯಿಯಷ್ಟು ನಷ್ಟ ಉಂಟಾಗಿರಬಹುದು ಎಂದ ರಾಜ್ಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಆರ್. ಷಣ್ಮುಗಪ್ಪ ಹೇಳಿದ್ದಾರೆ.
ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಜೊತೆ ಸಭೆ ಮಾಡಿದ್ದೇನೆ. ಲಾರಿ ಮಾಲೀಕರ ಸಂಘದವರು ಪ್ರಮುಖವಾಗಿ 6 ಬೇಡಿಕೆ ಇಟ್ಟಿದ್ದರು. ಗಡಿ ಭಾಗದಲ್ಲಿ ಟೋಲ್ ತೆಗೆಯಲು ಸಭೆಯಲ್ಲಿ ಮನವಿ ಮಾಡಿದರು. ಈ ಬಗ್ಗೆ ಮೂರು ದಿನಗಳ ಬಳಿಕ ವರದಿ ತರಸಿಕೊಳ್ಳುತ್ತೇನೆ. ನೋ ಎಂಟ್ರಿ ಬೋರ್ಡ್ ಬದಲಾವಣೆ ಕುರಿತು ಚರ್ಚೆ ಮಾಡುತ್ತೇನೆ. ಲಾರಿ ಮಾಲೀಕರಿಗೆ ವಿಧಿಸುವ ದಂಡ ಕಡಿತ ಮಾಡುವ ಬಗ್ಗೆ ಚರ್ಚೆ ಮಾಡುತ್ತೇನೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಇದನ್ನೂ ಓದಿ: ಲಾರಿ ಮುಷ್ಕರ; 2 ಲಕ್ಷ ಲಾರಿ ಸ್ಥಗಿತ, ಲಾರಿ ಸಂಘಟನೆಗಳ ಬೇಡಿಕೆಗಳೇನು?
ಡೀಸೆಲ್ ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಲಾರಿ ಮಾಲೀಕರು ಸೋಮವಾರ ಮಧ್ಯರಾತ್ರಿಯಿಂದಲೇ ಆರಂಭವಾಗಿರುವ ಲಾರಿ ಮುಷ್ಕರ ಆರಂಭಿಸಿದ್ದರು. ಈ ಸಂಬಂಧ ಲಾರಿ ಮಾಲೀಕರ ಸಂಘದ ಜೊತೆ ಸಚಿವ ರಾಮಲಿಂಗಾ ರೆಡ್ಡಿ ಮಂಗಳವಾರ ಮೊದಲನೇ ಸಭೆ ನಡೆಸಿದ್ದರು. ಆದರೆ, ಈ ಸಭೆ ಕೂಡ ವಿಫಲಾವಾಗಿತ್ತು. ನಂತರ, ಸಚಿವ ರಾಮಲಿಂಗಾ ರೆಡ್ಡಿ ಜೊತೆ ನಡೆದ ಎರಡನೇ ಸಭೆ ಫಲಕೊಟ್ಟಿದೆ.