ಲಾರಿ ಮಾಲೀಕರ ಜೊತೆಗಿನ ಮುಖ್ಯಮಂತ್ರಿ ಸಂಧಾನ ಸಭೆ ವಿಫಲ
Karnataka Lorry Strike: ಡೀಸೆಲ್ ದರ ಏರಿಕೆ ಮತ್ತು ಇತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಲಾರಿ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಡೆಸಿದ ಸಂಧಾನ ಸಭೆ ವಿಫಲವಾಗಿದ್ದು, ಲಾರಿ ಮಾಲೀಕರು ತಮ್ಮ ನಿರ್ಧಾರದಲ್ಲಿ ಅಚಲರಾಗಿದ್ದಾರೆ. ಅನಿರ್ದಿಷ್ಟಾವಧಿ ಧರಣಿ ನಡೆಸುವುದಾಗಿ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಹೇಳಿದ್ದಾರೆ.

ಬೆಂಗಳೂರು, ಏಪ್ರಿಲ್ 15: ಡೀಸೆಲ್ (Diesel) ದರ ಇಳಿಕೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಲಾರಿ ಮಾಲೀಕರು (Lorry owner) ಮುಷ್ಕರ ಆರಂಭಿಸಿದ್ದಾರೆ. ಮುಷ್ಕರ ಕೈಬಿಡುವಂತೆ ಲಾರಿ ಮಾಲೀಕರ ಸಂಘದೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಮಂಗಳವಾರ (ಏ.15) ನಡೆಸಿದ ಸಭೆ ವಿಫಲವಾಗಿದೆ. ಮುಷ್ಕರ ನಿಲ್ಲಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರೂ ಲಾರಿ ಮಾಲೀಕರ ಸಂಘ ಒಪ್ಪದ ಹಿನ್ನೆಲೆಯಲ್ಲಿ ಸುದೀರ್ಘ ಒಂದೂವರೆ ಗಂಟೆ ನಡೆದ ಸಂಧಾನ ಸಭೆ ವಿಫಲವಾಗಿದೆ.
ಹೀಗಾಗಿ ಮತ್ತೊಮ್ಮೆ ಸಭೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಅವರು, ಮುಖ್ಯಮಂತ್ರಿಗಳ ಜೊತೆಗಿನ ಸಂಧಾನ ಸಭೆ ವಿಫಲವಾಗಿದೆ. ಯಾವುದೇ ಕಾರಣಕ್ಕೂ ಮುಷ್ಕರದಿಂದ ಹಿಂದೆ ಸರಿಯಲ್ಲ. ನಾವು ತೀರ್ಮಾನ ಮಾಡಿಯಾಗಿದೆ. ಮುಖ್ಯಮಂತ್ರಿಗಳು ಮುಷ್ಕರ ಹಿಂಪಡೆಯಲು ಹೇಳಿದರು, ಆದ್ರೆ, ಆಗಲ್ಲ ಅಂದ್ವಿ. ನಾಳೆಯಿಂದ ಅನಿರ್ದಿಷ್ಟಾವಧಿ ಉಗ್ರ ಹೋರಾಟ ಮಾಡ್ತೇವೆ ಎಂದು ಹೇಳಿದರು.
ಆಟೋ, ರಿಕ್ಷಾದಂತೆ ಲಾರಿ ಮಾಲೀಕರಿಗೆ ದರ ಫಿಕ್ಸ್ ಮಾಡಿ. ಲಾರಿ ಮಾಲೀಕರಿಗೆ ಬಾಡಿಗೆ ದರ ಫಿಕ್ಸ್ ಮಾಡಬೇಕು. ಡೀಸೆಲ್ ದರ ಎಷ್ಟಾದರೂ ಏರಿಕೆ ಮಾಡಲಿ, ಆದ್ರೆ, ಫಿಕ್ಸ್ ರೇಟ್ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೇರವಾಗಿ ಹೇಳಿದ್ದೇವೆ. ಯಾವುದೇ ಕಾರಣಕ್ಕೂ ಮುಷ್ಕರ ಹಿಂಪಡೆಯುವುದಿಲ್ಲ ಎಂದರು.
ಸಭೆ ಬಳಿಕ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ
ಡೀಸೆಲ್ ದರ ಇಳಿಸುವಂತೆ, ಟೋಲ್ ದರ ತೆಗೆಯುವಂತೆ ಲಾರಿ ಮಾಲೀಕರು ಮುಖ್ಯಮಂತ್ರಿಗಳಿಗೆ ತಿಳಿಸಿದ್ದು, ಅವರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಹಳೆಯ ವೆಹಿಕಲ್ ಫಿಟ್ನೆಸ್ ಸರ್ಟಿಫಿಕೆಟ್ ಡ್ರಾಫ್ಟ್‌ನಲ್ಲಿದ್ದು, ಇನ್ನೂ ಅಂತಿಮವಾಗಿಲ್ಲ. ದರ ನಿಗದಿ ವೇಳೆ ಸಭೆ ಕರೆಯುವುದಾಗಿ ಹೇಳಿದ್ದೇನೆ. ಕೆಲ ರಾಜ್ಯಗಳಲ್ಲಿ ಚೆಕ್‌ಪೋಸ್ಟ್ ತೆಗೆದಿದ್ದಾರೆ. ಆ ರಾಜ್ಯಗಳಲ್ಲಿ ಅಧ್ಯಯನ ನಡೆಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಮೂರು ತಿಂಗಳ ಸಮಯ ಕೇಳಿದ್ದೇವೆ.
ಪೀಕ್ ಅವರ್ನಲ್ಲಿ ನಗರದೊಳಗೆ ಪ್ರವೇಶಕ್ಕೆ ಅವಕಾಶ ಕೊಡಿ ಎಂದು ಲಾರಿ ಮಾಲೀಕರು ಕೇಳಿದರು. ಗೃಹ ಸಚಿವರು ಕೂಡ ಸಭೆಯಲ್ಲಿ ಭಾಗಿಯಾಗಿದ್ದರು, ಅವರು ಉತ್ತರ ನೀಡಿದ್ದಾರೆ. ಮುಷ್ಕರ ಮಾಡಬೇಡಿ ಅಂತ ಮುಖ್ಯಮಂತ್ರಿಗಳು ಒತ್ತಾಯ ಪೂರ್ವಕವಾಗಿ ಹೇಳಿದ್ದಾರೆ ಎಂದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಹೇಳಿದರು.
ಇದನ್ನೂ ಓದಿ: ಲಾರಿ ಮುಷ್ಕರ; 2 ಲಕ್ಷ ಲಾರಿ ಸ್ಥಗಿತ, ಲಾರಿ ಸಂಘಟನೆಗಳ ಬೇಡಿಕೆಗಳೇನು?
ರಾಮಲಿಂಗಾ ರೆಡ್ಡಿ ಜೊತೆ ಸಭೆ
ಏಪ್ರಿಲ್ 14 ಮಧ್ಯರಾತ್ರಿಯಿಂದ ಲಾರಿ ಮಾಲೀಕರು ಮುಷ್ಕರ ಆರಂಭಿಸಿದ್ದಾರೆ. ಇಂದು ಮೊದಲಿಗೆ ಲಾರಿ ಮಾಲೀಕರ ಸಂಘದೊಂದಿಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಸಭೆ ನಡೆಸಿದರು. ಆದರೆ, ಮೊದಲ ಸಭೆ ವಿಫಲವಾಯಿತು. ನಂತರ, ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಾರಿ ಮಾಲೀಕರ ಸಂಘದ ಜೊತೆ ಸಭೆ ನಡೆಸಿದರು. ಈ ಸಭೆಯೂ ಕೂಡ ವಿಫಲವಾಯಿತು.
ವರದಿ: ಈರಣ್ಣ ಬಸವ