ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ವೇ ಅವೈಜ್ಞಾನಿಕ ಕಾಮಗಾರಿ ಪತ್ತೆಗೆ ತಂಡ ರಚನೆ; ಸಚಿವ ಚಲುವರಾಯಸ್ವಾಮಿ
ಹೆದ್ದಾರಿಯಲ್ಲಿ ಆಂಬುಲೆನ್ಸ್ ಇಲ್ಲ, ಕ್ರೇನ್ ಇಲ್ಲ, ಟ್ರಾಮಾ ಸೆಂಟರ್ ಇಲ್ಲ, ಒಟ್ಟಾರೆಯಾಗಿ ದೋಷವಿದೆ. ಹೆದ್ದಾರಿ ಲೋಪ ಸರಿಪಡಿಸುವ ತನಕ ಟೋಲ್ ಕಲೆಕ್ಟ್ ಮಾಡಬಾರದು. ಶ್ರೀರಂಗಪಟ್ಟಣದಲ್ಲಿ ಟೋಲ್ ಕಲೆಕ್ಟ್ ಮಾಡಬಾರದೆಂದು ಸೂಚಿಸಿದ್ದೇವೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಬೆಂಗಳೂರು: ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇನಲ್ಲಿ (Bengaluru-Mysore Expressway) ಅವೈಜ್ಞಾನಿಕ ಕಾಮಗಾರಿ ನಡೆದಿದೆ. ಈ ಬಗ್ಗೆ ಪರಿಶೀಲನೆ ನಡೆಸಲು ತಾಂತ್ರಿಕ ತಂಡ ರಚನೆ ಮಾಡುತ್ತೇವೆ. ಆ ತಂಡ ನೀಡಿದ ವರದಿಯ ಆಧಾರದಲ್ಲಿ ಸಮಸ್ಯೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರುತ್ತೇನೆ ಎಂದು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ (N Chaluvaraya Swamy) ವಿಧಾನಸೌಧದಲ್ಲಿ ಹೇಳಿದ್ದಾರೆ. ಎಕ್ಸ್ಪ್ರೆಸ್ ವೇಯನ್ನು ಯಾವುದೋ ಹಳ್ಳಿ ರಸ್ತೆಯಂತೆ ಮಾಡಿ ಬಿಟ್ಟಿದ್ದಾರೆ. ಇದಕ್ಕಿಂತ ಬೆಂಗಳೂರು-ಮಂಗಳೂರು ಹೆದ್ದಾರಿಯೇ ಉತ್ತಮವಾಗಿದೆ. ಪಾಪ, ಸಂಸದ ಪ್ರತಾಪ್ ಸಿಂಹಗೆ ಇದೆಲ್ಲ ಗೊತ್ತಿಲ್ಲ ಎಂದು ಅವರು ಹೇಳಿದ್ದಾರೆ.
ಗುತ್ತಿಗೆದಾರರು ಯಾರೋ ಸಂಸದರಿಗೆ ಬೇಕಾದವರು ಎಂಬ ಮಾತುಗಳಿವೆ. ಅವೆಲ್ಲವೂ ನಮಗೆ ಸದ್ಯಕ್ಕೆ ಬೇಡ. ಎಕ್ಸ್ಪ್ರೆಸ್ ವೇಯಲ್ಲಿ ಲೋಪದೋಷಗಳಿವೆ. ಚುನಾವಣೆಗೂ ಮುನ್ನ ಪಕ್ಷದ ಸಲುವಾಗಿ ಹೈವೇ ಉದ್ಘಾಟನೆ ಮಾಡಿದ್ದಾರೆ. ಈಗ ಹೆದ್ದಾರಿಯಲ್ಲಿ 46 ಅಪಘಾತ ಸಂಭವಿಸಿ 45 ಜನರು ಮೃತಪಟ್ಟಿದ್ದಾರೆ. ಎಕ್ಸ್ಪ್ರೆಸ್ ವೇ ಆದ ಮೇಲೆ ಅಪಘಾತಗಳು ಕಡಿಮೆಯಾಗಬೇಕಿತ್ತು. ಆದರೆ ಮೈಸೂರು-ಬೆಂಗಳೂರು ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಾಗಿವೆ ಎಂದು ಚಲುವರಾಯಸ್ವಾಮಿ ಆರೋಪಿಸಿದ್ದಾರೆ.
ಭೂಸ್ವಾಧೀನ ಪ್ರಕ್ರಿಯೆಯೇ ದೊಡ್ಡ ಸಮಸ್ಯೆ ಆಗಿದೆ. ಹೆದ್ದಾರಿಯಲ್ಲಿ ಆಂಬುಲೆನ್ಸ್ ಇಲ್ಲ, ಕ್ರೇನ್ ಇಲ್ಲ, ಟ್ರಾಮಾ ಸೆಂಟರ್ ಇಲ್ಲ, ಒಟ್ಟಾರೆಯಾಗಿ ದೋಷವಿದೆ. ಹೆದ್ದಾರಿ ಲೋಪ ಸರಿಪಡಿಸುವ ತನಕ ಟೋಲ್ ಕಲೆಕ್ಟ್ ಮಾಡಬಾರದು. ಶ್ರೀರಂಗಪಟ್ಟಣದಲ್ಲಿ ಟೋಲ್ ಕಲೆಕ್ಟ್ ಮಾಡಬಾರದೆಂದು ಸೂಚಿಸಿದ್ದೇವೆ ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Bengaluru-Mysore Expressway: ಅಪಘಾತಕ್ಕೆ ಕಾರಣಗಳ ಕುರಿತು ಎನ್ಹೆಚ್ಎಐಗೆ ವರದಿ ಸಲ್ಲಿಸಿದ 2 ಜಿಲ್ಲಾಡಳಿತ
ಎಕ್ಸ್ಪ್ರೆಸ್ ವೇಯಲ್ಲಿ ಕಳೆದ ಮೂರು ತಿಂಗಳುಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಈ ಪೈಕಿ ಹೆಚ್ಚಿನ ಅಪಘಾತಗಳು ರಾಮನಗರ ಮತ್ತು ಮಂಡ್ಯ ಜಿಲ್ಲಾಡಳಿತ ವ್ಯಾಪ್ತಿಯಲ್ಲಿ ಸಂಭವಿಸಿವೆ. ಈ ವಿಚಾರವಾಗಿ ಉಭಯ ಜಿಲ್ಲಾಡಳಿತಗಳು ಈಗಾಗಲೇ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ವರದಿಯನ್ನೂ ಸಲ್ಲಿಸಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ