ಬೆಂಗಳೂರು: ರವೀಂದ್ರ ಕಲಾಕ್ಷೇತ್ರದ ಮಾದರಿ 4 ಕಲಾಕ್ಷೇತ್ರ ನಿರ್ಮಾಣಕ್ಕೆ ಯೋಜನೆ; ಸಚಿವ ಸುನಿಲ್ ಕುಮಾರ್ ಮಾಹಿತಿ
ಬೆಂಗಳೂರಿನ ಹೊರ ವಲಯದಲ್ಲಿ ರವೀಂದ್ರ ಕಲಾಕ್ಷೇತ್ರದ ಮಾದರಿಯಲ್ಲಿ 4 ಕಲಾಕ್ಷೇತ್ರ ನಾಲ್ಕು ಕಲಾಕ್ಷೇತ್ರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ ಹೇಳಿದ್ದಾರೆ. ಇದೇ ವೇಳೆ ಅವರು ಹಲವು ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಪೂರ್ಣ ವರದಿ ಇಲ್ಲಿದೆ.
ಬೆಂಗಳೂರಿನ ಹೊರ ವಲಯದಲ್ಲಿ ರವೀಂದ್ರ ಕಲಾಕ್ಷೇತ್ರದ (Ravindra Kalakshetra) ಮಾದರಿಯಲ್ಲಿ 4 ಕಲಾಕ್ಷೇತ್ರ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಸುನಿಲ್ ಕುಮಾರ್ (Sunil Kumar) ಬೆಂಗಳೂರಿನಲ್ಲಿ ಹೇಳಿದ್ದಾರೆ. 4 ಕಲಾಕ್ಷೇತ್ರ ನಿರ್ಮಾಣಕ್ಕೆ ಜಾಗ ಗುರುತಿಸುವ ಪ್ರಕ್ರಿಯೆ ನಡೆದಿದೆ. ಇದಕ್ಕೆ ಸಂಬಂಧಪಟ್ಟಂತೆ ಬಿಬಿಎಂಪಿ ಹೌಸಿಂಗ್ ಬೋರ್ಡ್ ಜತೆ ಚರ್ಚೆ ನಡೆದಿದೆ. ಈ ಕುರಿತು ಬಜೆಟ್ನಲ್ಲಿ ಹಣ ಮೀಸಲಿಡುವ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ. ಇದೇ ವೇಳೆ ಸಚಿವರು ಕಲಾವಿದರ ಅನುಕೂಲಕ್ಕೋಸ್ಕರ ರವೀಂದ್ರ ಕಲಾಕ್ಷೇತ್ರವನ್ನು ನವೀಕರಣಕ್ಕೆ ತೀರ್ಮಾನ ಮಾಡಲಾಗಿದ್ದು, 1.2 ಕೋಟಿ ವೆಚ್ಚದಲ್ಲಿ ನವೀಕರಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ. ‘ಅಮೃತ ಭಾರತಿಗೆ ಕನ್ನಡದ ಆರತಿ’ ಹೆಸರಲ್ಲಿ ಒಂದು ವರ್ಷ ಕಾಲ ಆಜಾದಿ ಕಾ ಅಮೃತ ಮಹೋತ್ಸವ ಕಾರ್ಯಕ್ರಮ ನಡೆಸಲಾಗುವುದು. ಸ್ವಾತಂತ್ರ್ಯ ಹೋರಾಟದಲ್ಲಿ ಕನ್ನಡಿಗರ ಪಾತ್ರದ ಬಗ್ಗೆ ಕಾರ್ಯಕ್ರಮ ಮಾಡಲಾಗುತ್ತದೆ ಎಂದು ಸುನಿಲ್ ಕುಮಾರ್ ತಿಳಿಸಿದ್ದಾರೆ. ಕಲಾಕ್ಷೇತ್ರದ ಬಾಡಿಗೆ ದರ ಹೆಚ್ಚಿಸಲು ಸಲಹೆ ಬಂದಿದೆ ಎಂದೂ ಸುನಿಲ್ ಕುಮಾರ್ ಇದೇ ವೇಳೆ ನುಡಿದಿದ್ದಾರೆ.
ಜಿಲ್ಲಾಮಟ್ಟದ ರಂಗಮಂದಿರಗಳಲ್ಲೂ ಆನ್ಲೈನ್ ಬುಕಿಂಗ್ ವ್ಯವಸ್ಥೆ: ರವೀಂದ್ರ ಕಲಾಕ್ಷೇತ್ರದ ಬುಕಿಂಗ್ ಬಗ್ಗೆ ಹಲವು ಅನುಮಾನ ಮೂಡಿಬಂದ ಹಿನ್ನೆಲೆಯಲ್ಲಿ ಅಲ್ಲಿ ಇನ್ನುಮುಂದೆ ಆನ್ಲೈನ್ ಬುಕಿಂಗ್ ನಡೆಯುತ್ತದೆ ಎಂದು ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ. ಜಿಲ್ಲಾಮಟ್ಟದ ರಂಗಮಂದಿರಗಳಲ್ಲೂ ಆನ್ಲೈನ್ ಬುಕಿಂಗ್ ವ್ಯವಸ್ಥೆ ಮಾಡುವುದಕ್ಕೆ ಚಿಂತನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಮುಂದಿನ ಬಜೆಟ್ನಲ್ಲಿ ಕನ್ನಡಕ್ಕೆ ಹೆಚ್ಚಿನ ಹಣ: ಸಂಸ್ಕೃತ ವಿಶ್ವ ವಿದ್ಯಾಲಯಕ್ಕೆ ವಿರೋಧ ವ್ಯಕ್ತವಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವ ಸುನಿಲ್ ಕುಮಾರ್, ‘‘ಕನ್ನಡಕ್ಕೆ, ಕನ್ನಡ ವಿವಿಗೆ ಹೆಚ್ಚಿನ ಅನುದಾನವನ್ನ ನೀಡಬೇಕು. ಆದರೆ, ಸಂಸ್ಕೃತಕ್ಕೆ ವಿರೋಧ ಮಾಡುವುದು ಸರಿಯಲ್ಲ’’ ಎಂದು ಹೇಳಿದ್ದಾರೆ. ಸಂಸ್ಕೃತ ಎಲ್ಲ ಭಾಷೆಗಳ ತಾಯಿ. ಇದು ದಾಖಲೆ ವಿಚಾರ ಅಲ್ಲ. ಅದಕ್ಕೆ ಆರ್ಟಿಸಿ ಕೊಡಿ ಪಹಣಿ ಕೊಡಿ ಅಂದರೆ ಆಗುವುದಿಲ್ಲ. ಕನ್ನಡಕ್ಕೆ ಆದ್ಯತೆ ಕೊಡಬೇಕು, ಕೊಡಲೇಬೇಕು. ಆದರೆ ಸಂಸ್ಕೃತಕ್ಕೆ ವಿರೋಧ ಮಾಡುವುದು ಸರಿಯಲ್ಲ. ಬಜೆಟ್ನಲ್ಲಿ ಕನ್ನಡಕ್ಕೆ ಹೆಚ್ಚಿನ ಹಣ ನೀಡಲಾಗುತ್ತದೆ ಎಂದು ಸಚಿವರು ಹೇಳಿದ್ದಾರೆ.
ವಿದ್ಯುತ್ ದರ ಏರಿಕೆ ಅನಿವಾರ್ಯ: ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಸಚಿವ ಸುನಿಲ್ ಕುಮಾರ್ ಹೇಳಿಕೆ ನೀಡಿದ್ದಾರೆ. ಕೆಲವೊಂದಿಷ್ಟು ಯೋಜನೆ ಕೈಗೆತ್ತಿಕೊಳ್ಳುತ್ತಿದ್ದೇವೆ. 12 ಸಾವಿರ ಕೋಟಿಯಷ್ಟು ಬೇರೆ ಬೇರೆ ಇಲಾಕೆಯಿಂದ ಹಣ ಬರಬೇಕಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆ, ನೀರಾವರಿ ಇಲಾಖೆ, ಬಿಡಬ್ಲ್ಯೂಎಸ್ಎಸ್ಬಿ ಸೇರಿ ಹಲವು ಇಲಾಖೆಗಳಿಂದ ಹಣ ಬಾಕಿ ಬರುವುದು ಬಾಕಿ ಇದೆ. ಕೆಇಆರ್ಸಿ- ಕರ್ನಾಟಕ ವಿದ್ಯುತ್ ಶಕ್ತಿ ನಿಯಂತ್ರಣ ಆಯೋಗ ಶಿಫಾರಸು ಮಾಡಿದರೆ ದರ ಏರಿಕೆ ಮಾಡುವುದು ಅನಿವಾರ್ಯ. ಅವರು ಮೊದಲು ವರದಿ ಕೊಡಲಿ. ವರದಿ ಕೊಟ್ಟ ಬಳಿಕ ವಿದ್ಯುತ್ ದರ ಏರಿಕೆಗೆ ನಿರ್ಧರಿಸುತ್ತೇವೆ. ಆದರೆ ಇವತ್ತಿನ ಸಂದರ್ಭದಲ್ಲಿ ವಿದ್ಯುತ್ ದರ ಏರಿಕೆ ಅನಿವಾರ್ಯ ಎಂದು ಸುನಿಲ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ:
Statue of Equality: ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಲಿರುವ ಸಮಾನತೆಯ ಮೂರ್ತಿ ಬಗ್ಗೆ ನಿಮಗೆಷ್ಟು ತಿಳಿದಿದೆ?
ಜ್ವರ ಮತ್ತು ಸ್ನಾಯು ದೌರ್ಬಲ್ಯ ಕೊವಿಡ್ ಮೂರನೇ ಅಲೆಯಲ್ಲಿ ಕಂಡು ಬರುವ ಸಾಮಾನ್ಯ ರೋಗ ಲಕ್ಷಣಗಳು: ಕೇಂದ್ರ