ಬೆಂಗಳೂರು, ಮಾರ್ಚ್ 21: ಸಚಿವರು, ಶಾಸಕರ ಹನಿಟ್ರ್ಯಾಪ್ (Honey trapping) ಯತ್ನ ಆರೋಪಕ್ಕೆ ಸಂಬಂಧಿಸಿದಂತೆ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಭರವಸೆ ನೀಡಿದರು. ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಆರಗ ಜ್ಞಾನೇಂದ್ರ, ಶಾಸಕ ಸುನೀಲ್ ಕುಮಾರ್, ಸಚಿವರಾದ ಕೆಎನ್ ರಾಜಣ್ಣ (KN Rajanna) ಅವರು ಹನಿಟ್ರ್ಯಾಪ್ ಬಗ್ಗೆ ಸದನದಲ್ಲಿ ಪ್ರಸ್ತಾಪ ಮಾಡಿ ಈ ಬಗ್ಗೆ ಉತ್ತರಿಸುವಂತೆ ಆಗ್ರಹಿಸಿದ್ದರು. ಅಲ್ಲದೆ, ಹನಿಟ್ರ್ಯಾಪ್ನಂಥ ಕೃತ್ಯಕ್ಕೆ ಕುಮ್ಮಕ್ಕು ಕೊಟ್ಟವರನ್ನು ಸಂಪುಟದಿಂದ ವಜಾ ಮಾಡಬೇಕು ಹಾಗೂ ಸದನದಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳು ಉತ್ತರಿಸಿ ಸದನದ ಮೌಲ್ಯವನ್ನು ಎತ್ತಿಹಿಡಿಯಬೇಕೆಂದು ಪ್ರತಿಪಕ್ಷ ಹಾಗೂ ಆಡಳಿತ ಪಕ್ಷ ಕೆಲವು ಮಂದಿ ನಾಯಕರು ಆಗ್ರಹಿಸಿದ್ದರು. ಇದಕ್ಕೆ ಉತ್ತರಿಸಿದ ಸಿಎಂ, ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದರು.
ಸಚಿವರು ಹಾಗೂ ಪರಿಶಿಷ್ಟ ವರ್ಗದ ನಾಯಕರೂ ಆಗಿರುವ ಕೆ.ಎನ್ ರಾಜಣ್ಣ ಅವರು ಮಾಡಿರುವ ಆರೋಪಕ್ಕೆ ಈಗಾಗಲೇ ಗೃಹ ಸಚಿವ ಜಿಪರಮೇಶ್ವರ ಉತ್ತರಿಸಿದ್ದಾರೆ. ಅಲ್ಲದೆ ತನಿಖೆಗೆ ಆದೇಶಿಸುವುದಾಗಿಯೂ ಭರವಸೆ ನೀಡಿದ್ದರು.
ಪ್ರಕರಣದಲ್ಲಿ ಯಾರೇ ಆಗಿದ್ದರೂ ತೊಂದರೆಗೆ ಒಳಗಾಗಿದ್ದರೆ ರಕ್ಷಣೆ ಕೊಡಬೇಕಾಗಿರುವುದು ಸರ್ಕಾರದ ಜವಾಬ್ದಾರಿ. ಕಾನೂನಿನ ಪ್ರಕಾರ ತಪ್ಪಿತಸ್ಥರಿಗೆ ಶಿಕ್ಷೆಯಾಗಲೇಬೇಕು. ರಾಜಣ್ಣ ಅವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ಮಾಡಿಸಲಾಗುತ್ತದೆ ಎಂದು ಗೃಹ ಸಚಿವರು ಉತ್ತರಿಸಿದ ಮೇಲೆ ಪುನ: ಪ್ರಸ್ತಾಪಿಸುವುದು ತರವಲ್ಲ. ಹನಿಟ್ರ್ಯಾಪ್ ಯಾರೇ ಮಾಡಿಸಿದ್ದರೂ ಅದು ತಪ್ಪೇ ಎಂದು ಸಿಎಂ ಹೇಳಿದರು. ‘‘ಎತ್ತು ಈಯಿತು ಎಂದ ಮಾತ್ರಕ್ಕೆ ಕೊಟ್ಟಿಗೆಗೆ ಕಟ್ಟು’’ ಎಂದು ಹೇಳಲಾಗುವುದಿಲ್ಲ. ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ. ಹೇಳಿದ್ದರೆ ಕ್ರಮ ತೆಗೆದುಕೊಳ್ಳಬಹುದಾಗಿತ್ತು. ಪ್ರಕರಣದಲ್ಲಿ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿಗಳು ಪುನರುಚ್ಚರಿಸಿದರು.
ಇದನ್ನೂ ಓದಿ: ರಾಜಣ್ಣ ಮಾತ್ರವಲ್ಲಇನ್ನೂ ಮೂರು ಮಂತ್ರಿಗಳಿಗೂ ಹನಿಟ್ರ್ಯಾಪ್: ಗ್ಯಾಂಗ್ನ ಹಿಡಿದು ಬಾಯ್ಬಿಡಿಸಿದ ಸಚಿವ!
ಸಚಿವರ, ಶಾಸಕರ ಹನಿಟ್ರ್ಯಾಪ್ ಯತ್ನ ಆರೋಪ ಸದ್ಯ ಕರ್ನಾಟಕ ವಿಧಾನಸಭೆಯಲ್ಲಿ ಹಾಗೂ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ. ಸಚಿವ ಕೆಎನ್ ರಾಜಣ್ಣ ಸೇರಿದಂತೆ ಅನೇಕ ಸಚಿವರ, ಶಾಸಕರ ಹನಿಟ್ರ್ಯಾಪ್ಗೆ ಯತ್ನಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಈ ವಿಚಾರವಾಗಿ ಸದನದಲ್ಲಿ ಪ್ರತಿಪಕ್ಷ ನಾಯಕರೂ ಸಹ ರಾಜಣ್ಣ ಬೆಂಬಲಕ್ಕೆ ನಿಂತಿದ್ದಲ್ಲದೆ ತನಿಖೆಗೆ ಆಗ್ರಹಿಸಿದ್ದಾರೆ. ಈ ಮಧ್ಯೆ, ಒಟ್ಟು 48 ಮಂದಿ ರಾಜಕಾರಣಿಗಳ ಹನಿಟ್ರ್ಯಾಪ್ಗೆ ಯತ್ನಿಸಲಾಗಿದೆ. ಇದರಲ್ಲಿ ರಾಷ್ಟ್ರಮಟ್ಟದ ನಾಯಕರೂ ಇದ್ದಾರೆ ಎಂದು ರಾಜಣ್ಣ ಹೇಳಿದ್ದರು. ಇದು ಸಂಚಲನ ಸೃಷ್ಟಿಸಿತ್ತು.