ಬೆಂಗಳೂರು ಕಾಲ್ತುಳಿತ: ಪೊಲೀಸರನ್ನ ಸಸ್ಪೆಂಡ್ ಮಾಡಿದ್ದಕ್ಕೆ​ ಸಿಎಂ ಬೇಸರ…ಸಭೆ ಇನ್​ಸೈಡ್​ ಡಿಟೇಲ್ಸ್

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಪೊಲೀಸ್​ ಇಲಾಖೆಯ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದ ಕರಾಳ ಘಟನೆಯನ್ನು ಪ್ರಸ್ತಾಪಿಸಿ, ಪೊಲೀಸರ ನಡೆ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಹಾಗಿದ್ದರೆ ಸಭೆಯಲ್ಲಿ ಏನೆಲ್ಲ ಚರ್ಚೆಯಾಯಿತು? ಇಲ್ಲಿದೆ ಇನ್​ಸೈಡ್​ ಡೀಟೈಲ್ಸ್

ಬೆಂಗಳೂರು ಕಾಲ್ತುಳಿತ: ಪೊಲೀಸರನ್ನ ಸಸ್ಪೆಂಡ್ ಮಾಡಿದ್ದಕ್ಕೆ​ ಸಿಎಂ ಬೇಸರ...ಸಭೆ ಇನ್​ಸೈಡ್​ ಡಿಟೇಲ್ಸ್
ಪೊಲೀಸ್​ ಇಲಾಖೆಯೊಂದಿಗೆ ಸಿಎಂ ಸಿದ್ದಾರಾಮಯ್ಯ ಸಭೆ
Edited By:

Updated on: Jun 27, 2025 | 9:32 PM

ಬೆಂಗಳೂರು, ಜೂನ್​ 27: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ (ಜೂ.27) ಪೊಲೀಸ್ ಇಲಾಖೆಯ​ ಪ್ರಗತಿ ಪರಿಶೀಲನಾ ಸಭೆ (Police Department) ನಡೆಸಿದರು. ಸಭೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗಡೆ ಸಂಭವಿಸಿದ ಕಾಲ್ತುಳಿತವನ್ನು ಪ್ರಸ್ತಾಪಿಸಿ, ಅಂದು ಪೊಲೀಸರು ನಡೆದುಕೊಂಡ ಕ್ರಮದ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕಾಲ್ತುಳಿತ ದಿನ‌ ಮಧ್ಯಾಹ್ನ 3.50ಕ್ಕೆ ಸಾವುಗಳು ಸಂಭವಿಸಿದವು. ಆದರೂ ಸರಿಯಾದ ಮಾಹಿತಿ ನನಗೆ (ಸಿದ್ದರಾಮಯ್ಯ) ಕೊಟ್ಟಿರಲಿಲ್ಲ, ಇದು ತಪ್ಪಲ್ವಾ? ಸಂಜೆ 5:45ಕ್ಕೆ ನಾನಾಗೇ ಕೇಳಿದಾಗ ಒಂದೇ ಸಾವು ಅಂದಿರಿ. ಅಷ್ಟೊತ್ತಿಗೆ 11 ಸಾವುಗಳಾಗಿದ್ದವು ಎಂದರು.

ಸರಿಯಾದ ಮಾಹಿತಿಯನ್ನ ತಕ್ಷಣ ನಮಗೆ ನೀಡಬಹುದಿತ್ತು. ಮಾಹಿತಿ ನೀಡಿದ್ದರೇ ಕಾರ್ಯಕ್ರಮ ನಿಲ್ಲಿಸಲು ಸೂಚಿಸುತ್ತಿದ್ದೆವು. ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಬೇಕಾಗಿ ಬಂತು. ಅಮಾನತು ಮಾಡಿದ್ದಕ್ಕೆ ನನಗೂ ಬೇಸರ ಇದೆ. ಆದರೆ, ಅಧಿಕಾರಿಗಳಿಂದ ತಪ್ಪಾಗಿದ್ದು ನಿಜ ತಾನೆ ಎಂದು ಪ್ರಶ್ನಿಸಿದರು.

ಸಭೆ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶ್ರೀಮಂತ, ಬಲಾಢ್ಯ ಯಾರೇ ಕಾನೂನು ಕೈಗೆ ತೆಗೆದುಕೊಂಡರು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ. ಪ್ರಚೋದನೆ, ದ್ವೇಷ ಭಾಷಣ ಮಾಡಿದರೆ ಸ್ವಯಂಪ್ರೇರಿತ ಕೇಸ್​ ದಾಖಲು ಮಾಡುವಂತೆ ಹೇಳಿದ್ದೇನೆ. ದೂರು ಬಂದರೂ ತೆಗೆದುಕೊಂಡು ಕೇಸ್ ದಾಖಲಿಸಬೇಕು. ಮಹಿಳೆಯರು, ಮಕ್ಕಳು ಹಾಗೂ ದಲಿತರು ಮತ್ತು ರೈತರ ಮೇಲೆ ಯಾವ ಕಾರಣಕ್ಕೂ ದೌರ್ಜನ್ಯ ಆಗದಂತೆ ನೋಡಿಕೊಳ್ಳಿ. ರಾಜ್ಯದಲ್ಲಿ ಬಾಲ್ಯ ವಿವಾಹ ಸಂಪೂರ್ಣವಾಗಿ ತಡೆಯಬೇಕು. ಭ್ರೂಣ ಹತ್ಯೆ ನಿಲ್ಲಿಸುವ ಕೆಲಸ ಮಾಡಬೇಕೆಂದು ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಇದನ್ನೂ ಓದಿ
ಬೆಂಗಳೂರು ಕಾಲ್ತುಳಿತ ಪ್ರಕರಣ: ಆರ್​ಸಿಬಿಗೆ ಹೈಕೋರ್ಟ್​ ನೋಟಿಸ್
Stampede: ಕಾಲ್ತುಳಿತದಲ್ಲಿ ಗಾಯಗೊಂಡವರು 65 ಮಂದಿ ಆರ್​ಸಿಬಿ ಅಭಿಮಾನಿಗಳು
ತನಿಖೆಗಿಳಿದ ಸಿಐಡಿ: ಸ್ಟೇಡಿಯಂಗೆ ಭೇಟಿ, ಇಂಚಿಂಚೂ ಮಾಹಿತಿ ಸಂಗ್ರಹ
ಬೆಂಗಳೂರು ಕಾಲ್ತುಳಿತ ದುರಂತದ ವರದಿ ನೀಡುವಂತೆ ಕುನ್ಹಾ ಆಯೋಗಕ್ಕೆ ಸೂಚನೆ

ನಾವು ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆದಿದೆ. ಪೊಲೀಸರು ನೀಡಿದ ಅಂಕಿ ಅಂಶಗಳ ಪ್ರಕಾರ, ಕೊಲೆ ಡಕಾಯಿತಿ, ಕಳ್ಳತನ ಕಡಿಮೆಯಾಗುವೆ. 2023 ರಲ್ಲಿ 314, 2024 ರಲ್ಲಿ 170 ಕೊಲೆಗಳಾಗಿವೆ. ಹೀಗೆ ಹಲವಾರು ಮಾದರಿಯ ಅಪರಾಧಗಳು ಕಡಿಮೆಯಾಗುವೆ. ಅಂಕಿಗಳ ಪ್ರಕಾರ ನಂಬರ್ ಕಡಿಮೆ ಆಗಿದೆ, ಆದರೆ ಗುಣಮಟ್ಟ ಹೆಚ್ಚಿಗೆ ಅಗಬೇಕು ಎಂದು ಸೂಚಿಸಿದ್ದೇನೆ ಎಂದು ತಿಳಿಸಿದರು.

ಚಾರ್ಜ್ ಶೀಟ್ ಕಾಲ ಕಾಲಕ್ಕೆ ಆಗಬೇಕು. ತನಿಖೆ ಗುಣಮಟ್ಟ ಸುಧಾರಿಸಬೇಕು ಮತ್ತು ವೇಗವಾಗಿ ಮಾಡಬೇಕು. ಅಪರಾಧಗಳು ನಡೆದಾಗ ಕೂಡಲೆ ಅದನ್ನು ಪತ್ತೆ ಮಾಡಿ ಕೂಡಲೆ ಕ್ರಮ ತೆಗೆದುಕೊಳ್ಳಬೇಕು. ಸೈಬರ್ ಅಪರಾಧಗಳು ಪ್ರತಿ ವರ್ಷ ಹೆಚ್ಚಾಗುತ್ತಿವೆ. ಆದರೆ, ಪತ್ತೆಯಾಗುವುದು ಕಡಿಮೆ ಇದೆ. ಕಳೆದ ವರ್ಷ ಶೇ 24 ರಷ್ಟು ಸೈಬರ್ ಅಪರಾಧಗಳು ಪತ್ತೆ ಆಗಿದ್ದವು. ಈ ವರ್ಷ ಶೇ 9 ರಷ್ಟು ಸೈಬರ್ ಅಪರಾಧಗಳು ಪತ್ತೆಯಾಗಿವೆ ಎಂದು ಹೇಳಿದರು.

ಇದನ್ನೂ ಓದಿ: ಬೆಂಗಳೂರು ಕಾಲ್ತುಳಿತ: ಅಧಿಕಾರಿಗಳನ್ನ ಸಸ್ಪೆಂಡ್ ಮಾಡಿದ ಸರ್ಕಾರಕ್ಕೆ ನ್ಯಾಯಮಂಡಳಿ ಚಾಟಿ

ಹಿರಿಯ ಅಧಿಕಾರಿಗಳು ಪೊಲೀಸ್ ಠಾಣೆಗೆ ಭೇಟಿ ನೀಡುತ್ತಿರಬೇಕು. ಯಾವಾಗ ಪ್ರಕರಣ ದಾಖಲಾಗಿದೆ, ಯಾವಾಗ ಚಾರ್ಜ್​ ಶೀಟ್​ ಹಾಕಿದರು. ಅದರಲ್ಲಿ ಕೊಲೆ, ಕಳ್ಳತನ, ಮಹಿಳೆಯರ ಮೇಲೆ ದೌರ್ಜನ್ಯ, ಮಕ್ಕಳ ಮೇಲೆ ದೌರ್ಜನ್ಯ ಎಷ್ಟು ಎಂದು ನೋಡಬೇಕು. ಹಿರಿಯ ಅಧಿಕಾರಿಗಳು ಕಚೇರಿಯಲ್ಲೇ ಕುಳಿತಿರಬಾರದು, ಅವರೂ ಫೀಲ್ಡ್​ಗೆ ಹೋಗಬೇಕು ಅಂತ ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಶೀಘ್ರದಲ್ಲೇ ಪೊಲೀಸ್​ ಇಲಾಖೆಗೆ ನೇಮಕಾತಿ

ಡ್ರಗ್ಸ್​ ಮತ್ತು ಗಾಂಜಾ ಮಾರಾಟ ಮಾಡಿದ ಪೆಡ್ಲರ್ಸ್​ಗಳ ಮೇಲೆ ಕ್ರಮ ಅಗಬೇಕು. ಮಾರಾಟ ಮಾಡುವಂತಹ ಅಂಗಡಿಗಳ ಲೈಸೆನ್ಸ್​ಗಳನ್ನು ರದ್ದು ಮಾಡಬೇಕು. ಡ್ರಗ್ಸ್ ಮುಕ್ತ ರಾಜ್ಯ ಮಾಡಲು ಸರ್ಕಾರ ಎಲ್ಲ ಸಹಕಾರ ಕೊಡತ್ತದೆ. ರಾಜ್ಯದಲ್ಲಿ 1.11ಲಕ್ಷ ಪೊಲೀಸರು ಇದ್ದಾರೆ. ಶೇ 15.64 ರಷ್ಟು ನೇಮಕಾತಿಯಾಗಬೇಕು. ಎರಡ್ಮೂರು ತಿಂಗಳಲ್ಲಿ ಒಳಮೀಸಲಾತಿ ಮುಗಿಯತ್ತೆ. ಆದಾದ ಬಳಿಕ ನೇಮಕಾತಿ ಮಾಡಲಾಗುತ್ತದೆ. ಈಗ 4, 411ನೇಮಕಾತಿಗೆ ಅನುಮತಿ ನೀಡಲಾಗಿದೆ. ಅದನ್ನು ಈ ವರ್ಷದಲ್ಲೆ ಭರ್ತಿ ಮಾಡಲಾಗುತ್ತದೆ.

ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ, ಗೃಹ ಸಚಿವ ಜಿ ಪರಮೇಶ್ವರ್, ಸಿಎಂ ರಾಜಕೀಯ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಾಹಾನಿರ್ದೇಶಕರು, ಬೆಂಗಳೂರಿನ ಪೊಲೀಸ್ ಆಯುಕ್ತ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:28 pm, Fri, 27 June 25