Karnataka Politics: ರಾಜೀನಾಮೆ ನೀಡುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದ ವಲಸಿಗ ಸಚಿವರು

| Updated By: ಸುಷ್ಮಾ ಚಕ್ರೆ

Updated on: Jul 22, 2021 | 6:59 PM

ರಾಜೀನಾಮೆಯ ವದಂತಿಗೆ ತೆರೆ ಎಳೆದಿರುವ ವಲಸಿಗ ಸಚಿವರು ತಾವು ತಮ್ಮ ಇಲಾಖೆಗೆ ಸಂಬಂಧಿಸಿದ ಪತ್ರಗಳಿಗೆ ಮುಖ್ಯಮಂತ್ರಿಗಳ ಸಹಿ ಪಡೆಯಲು ಹೋಗಿದ್ದಾಗಿ ತಿಳಿಸಿದ್ದಾರೆ.

Karnataka Politics: ರಾಜೀನಾಮೆ ನೀಡುವ ಬಗ್ಗೆ ಇನ್ನೂ ಯೋಚನೆ ಮಾಡಿಲ್ಲ ಎಂದ ವಲಸಿಗ ಸಚಿವರು
ಬಿ.ಎಸ್​.ಯಡಿಯೂರಪ್ಪ
Follow us on

ಬೆಂಗಳೂರು: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತವಾಗುತ್ತಿದ್ದಂತೆ ರಾಜಕೀಯ ವಿದ್ಯಮಾನಗಳು ಕೂಡ ಗರಿಗೆದರಿವೆ. ನಾನು ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ. ಜುಲೈ 25ರಂದು ಹೈಕಮಾಂಡ್ ನೀಡುವ ಆದೇಶಕ್ಕಾಗಿ ಕಾಯುತ್ತಿದ್ದೇನೆ ಎನ್ನುವ ಮೂಲಕ ಬಿ.ಎಸ್. ಯಡಿಯೂರಪ್ಪ ತಾವು ರಾಜೀನಾಮೆ (BS Yediyurappa Resignation) ನೀಡುವ ಸುಳಿವು ನೀಡಿದ್ದಾರೆ. ಅದರ ಬೆನ್ನಲ್ಲೇ ಇಂದು ಸಂಜೆ ಸಚಿವ ಸಂಪುಟ ಸಭೆ ನಡೆಸಲಾಗಿದ್ದು, ಈ ಸಭೆ ನಡೆದ ಬಳಿಕ ವಲಸಿಗ ಸಚಿವರು ಒಟ್ಟಾಗಿ ಕುಳಿತು ಕೆಲ ಕಾಲ ಚರ್ಚೆ ಮಾಡಿದ್ದಾರೆ. ಬಳಿಕ ಎಲ್ಲರೂ ಕೈಯಲ್ಲೊಂದು ಪತ್ರ ಹಿಡಿದುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದಾರೆ. ಹೀಗಾಗಿ, ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ತಾವು ಕೂಡ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ವಲಸಿಗ ಸಚಿವರು ನಿರ್ಧರಿಸಿರಬಹುದು ಎಂಬ ಲೆಕ್ಕಾಚಾರಗಳು ರಾಜ್ಯ ರಾಜಕೀಯದಲ್ಲಿ (Karnataka Politics) ನಡೆದಿದ್ದವು. ಆದರೆ, ಅದೆಲ್ಲದಕ್ಕೂ ತೆರೆ ಎಳೆದಿರುವ ವಲಸಿಗ ಸಚಿವರು ತಮ್ಮ ಕೈಯಲ್ಲಿದ್ದುದು ರಾಜೀನಾಮೆ ಪತ್ರ (Resignation Letter) ಅಲ್ಲ ಎಂಬ ಮಾಹಿತಿಯನ್ನು ತಮ್ಮ ಆಪ್ತರ ಮೂಲಕ ಕಳುಹಿಸಿದ್ದಾರೆ.

ಸಿಎಂ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಮತ್ತು ಸಚಿವ ಆರ್. ಅಶೋಕ್ ಅವರು ವಲಸಿಗ ಸಚಿವರ ಜೊತೆ ಚರ್ಚೆ ನಡೆಸುತ್ತಿದ್ದಾರೆ. ಈ ವೇಳೆ ತಾವು ರಾಜೀನಾಮೆ ನೀಡುತ್ತಿದ್ದೇವೆ ಎಂಬ ಸುದ್ದಿ ಎಲ್ಲೆಡೆ ಹರಡಿ, ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ಸಿಎಂ ಕ್ಯಾಬಿನ್​ನಿಂದಲೇ ಸಂದೇಶ ಕಳುಹಿಸಿರುವ ವಲಸಿಗ ಸಚಿವರು ತಮ್ಮ ಇಲಾಖೆಗಳಿಗೆ ಸಂಬಂಧಪಟ್ಟ ಪತ್ರ ಹಿಡಿದಿದ್ದಾಗಿ ತಿಳಿಸಿದ್ದಾರೆ. ಆ ಪತ್ರಕ್ಕೆ ಸಿಎಂ ಸಹಿ ಹಾಕಿಸಿಕೊಳ್ಳಲು ಹೋಗಿದ್ದಾಗಿ 6 ಮಂದಿ ಸಚಿವರು ತಿಳಿಸಿದ್ದಾರೆ.

ರಾಜೀನಾಮೆ ನೀಡಲು ಮುಖ್ಯಮಂತ್ರಿಗಳ ಬಳಿ ಹೋಗದಿದ್ದರೂ ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದ ಮೇಲೆ ತಮ್ಮ ಭವಿಷ್ಯವೇನೆಂಬ ಚಿಂತೆ ಅವರನ್ನು ಕಾಡುತ್ತಿದೆ. ಹೀಗಾಗಿ, ಈ ಬಗ್ಗೆ ಸಿಎಂ ಯಡಿಯೂರಪ್ಪನವರ ಬಳಿ ಅವರು ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ವಲಸಿಗ ಸಚಿವರು ಈಗಲೇ ರಾಜೀನಾಮೆ ನೀಡಿದರೆ ಯಾವ ಸಮಸ್ಯೆಯೂ ಆಗುವುದಿಲ್ಲ. ಯಡಿಯೂರಪ್ಪ ಸಿಎಂ ಸ್ಥಾನದಿಂದ ಕೆಳಗಿಳಿದು ಬೇರೆಯವರು ಆ ಪಟ್ಟಕ್ಕೇರಿದ ನಂತರ ಹೇಗಿದ್ದರೂ ಆ ಸಚಿವರು ರಾಜೀನಾಮೆ ನೀಡಲೇಬೇಕಾಗುತ್ತದೆ. ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ವಲಸಿಗರು ಮೂಲೆಗುಂಪಾಗುತ್ತಾರೆ. ಹಾಗಾಗಿ, ಈಗಲೇ ರಾಜೀನಾಮೆ ನೀಡಿದರೂ ಸರ್ಕಾರಕ್ಕೆ ಏನೂ ಸಮಸ್ಯೆಯಾಗುವುದಿಲ್ಲ ಎಂದು ಟಿವಿ9ಗೆ ಬಿಜೆಪಿ ಎಂಎಲ್‌ಸಿ ಹೆಚ್‌. ವಿಶ್ವನಾಥ್ ಹೇಳಿದ್ದಾರೆ.

ಬಿ.ಎಸ್. ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಲೇಬೇಕೆಂದು ಒಂದು ಬಣದವರು ಹಠ ತೊಟ್ಟಿದ್ದರು. ಆದರೆ, ಯಡಿಯೂರಪ್ಪ ಮಾತ್ರ ನಾನು ಸಿಎಂ ಸ್ಥಾನದಿಂದ ಕೆಳಗಿಳಿಯುವ ಮಾತೇ ಇಲ್ಲ ಎಂದು ಹೇಳುತ್ತಲೇ ಬಂದಿದ್ದರು. ಆದರೆ, ಕೆಲವು ದಿನಗಳ ಹಿಂದೆ ತಮ್ಮ ಬಣದವರೊಂದಿಗೆ ದೆಹಲಿಗೆ ತೆರಳಿ ಪ್ರಧಾನಿ ಮೋದಿ, ಅಮಿತ್ ಶಾ ಮುಂತಾದ ನಾಯಕರನ್ನು ಭೇಟಿಯಾಗಿ ಬಂದಿದ್ದ ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಸುಳಿವು ನೀಡಿದ್ದಾರೆ. ಜುಲೈ 25ರಂದು ಹೈಕಮಾಂಡ್​ನಿಂದ ಬರುವ ಸಂದೇಶಕ್ಕಾಗಿ ಕಾಯುತ್ತಿದ್ದೇನೆ ಎನ್ನುವ ಮೂಲಕ ಸಿಎಂ ಪಟ್ಟದಿಂದ ಕೆಳಗಿಳಿಯುವ ಸೂಚನೆ ನೀಡಿದ್ದಾರೆ.

ಯಡಿಯೂರಪ್ಪನವರ ಮಾತನ್ನು ನಂಬಿ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಿ, ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷವನ್ನು ತೊರೆದು ಬಂದಿರುವ ವಲಸಿಗ ಸಚಿವರಿಗೆ ಈಗ ಭವಿಷ್ಯದ ಭೀತಿ ಎದುರಾಗಿದೆ. ವಲಸಿಗ ಸಚಿವರಾದ ಬಿ.ಸಿ. ಪಾಟೀಲ್, ಡಾ.ಕೆ. ಸುಧಾಕರ್, ಎಸ್.ಟಿ. ಸೋಮಶೇಖರ್, ಗೋಪಾಲಯ್ಯ, ಭೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್ ಇಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಪ್ರತ್ಯೇಕವಾಗಿ ಭೇಟಿಯಾಗಿದ್ದಾರೆ.

ತಮ್ಮನ್ನು ಬಿಜೆಪಿ ಪಕ್ಷಕ್ಕೆ ಕರೆಸಿಕೊಂಡು, ಚುನಾವಣೆಯಲ್ಲಿ ಟಿಕೆಟ್ ನೀಡಿ, ಸ್ವಪಕ್ಷೀಯರ ವಿರೋಧಧ ನಡುವೆಯೂ ಸಚಿವ ಸ್ಥಾನ ನೀಡಿರುವ ಬಿ.ಎಸ್. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ವಲಸಿಗ ಸಚಿವರ ಸ್ಥಿತಿ ಅತಂತ್ರವಾಗುವ ಆತಂಕ ಅವರನ್ನು ಕಾಡುತ್ತಿದೆ ಎನ್ನಲಾಗಿದೆ. ಇಂದು ಸಚಿವ ಸಂಪುಟ ಸಭೆ ಮುಗಿದ ಬೆನ್ನಲ್ಲೇ ಸಿಎಂ ಕಚೇರಿಗೆ ದೌಡಾಯಿಸಿದ ಸಚಿವರು ಸಿಎಂ ಜೊತೆ ಚರ್ಚೆ ನಡೆಸಿದ್ದಾರೆ. ಮೊದಲು ಹತ್ತು ನಿಮಿಷ ಭೈರತಿ ಬಸವರಾಜ್ ಕೊಠಡಿಯಲ್ಲಿ ಚರ್ಚೆ ನಡೆಸಿದ ವಲಸಿಗರು ನಂತರ ಒಟ್ಟಾಗಿ ಪತ್ರ ಹಿಡಿದು ಸಿಎಂ ಯಡಿಯೂರಪ್ಪನವರನ್ನು ಭೇಟಿಯಾಗಿ, ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: Karnataka Politics: ಸಿಎಂ ಸ್ಥಾನ ಉಳಿಸಿಕೊಳ್ಳಲು ವಲಸಿಗ ಸಚಿವರ ಮೂಲಕ ಒತ್ತಡ ಹಾಕಿದರಾ ಯಡಿಯೂರಪ್ಪ?

ಸಿಎಂ ಯಡಿಯೂರಪ್ಪ ಸಚಿವ ಸಂಪುಟ ಸಭೆ ಮುಕ್ತಾಯ: 8 ಸಾವಿರ ಕೋಟಿ ವೆಚ್ಚದಲ್ಲಿ 2 ವರ್ಷದಲ್ಲಿ ಒಟ್ಟು 5 ಲಕ್ಷ ಮನೆ ನಿರ್ಮಾಣಕ್ಕೆ ತೀರ್ಮಾನ

Published On - 6:57 pm, Thu, 22 July 21