AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ: ಖಾಸಗಿ ಬಸ್​ನವರಿಗೆ ಶುರುವಾಯ್ತು ಹೊಸ ಟೆನ್ಶನ್

ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಖಾಸಗಿ ಬಸ್​ಗಳಿಗೆ ಬಿಸಿ ತಟ್ಟಲಿದೆಯೆ? ಈ ಬಗ್ಗೆ ಕರ್ನಾಟಕ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ಮಾತನಾಡಿದ್ದು, ಏನೆಲ್ಲ ಹೇಳಿದ್ದಾರೆ ಎನ್ನುವ ವಿವರ ಇಲ್ಲಿದೆ.

ಮಹಿಳೆಯರಿಗೆ ಸರ್ಕಾರಿ ಬಸ್​ನಲ್ಲಿ ಉಚಿತ ಪ್ರಯಾಣ: ಖಾಸಗಿ ಬಸ್​ನವರಿಗೆ ಶುರುವಾಯ್ತು ಹೊಸ ಟೆನ್ಶನ್
ಸಾಂದರ್ಭಿಕ ಚಿತ್ರ
ರಮೇಶ್ ಬಿ. ಜವಳಗೇರಾ
|

Updated on: Jun 02, 2023 | 9:28 AM

Share

ಬೆಂಗಳೂರು: ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ (KSRTC Bus) ಮಹಿಳೆಯರಿಗೆ ಉಚಿತ ಪ್ರಯಾಣದಿಂದ ಖಾಸಗಿ ಬಸ್​ಗಳಿಗೆ ಬಿಸಿ ತಟ್ಟಲಿದೆಯೆ? ಕಾಂಗ್ರೆಸ್​ ಗ್ಯಾರಂಟಿ (Congress guarantees) ಖಾಸಗಿ ಬಸ್ ಮಾಲೀಕರಿಗೆ(Karnataka private Bus Owners) ಸಂಕಷ್ಟ ತರಲಿದೆಯೇ? ಹೀಗೊಂದು ಪ್ರಶ್ನೆ ಹಾಗೂ ಲೆಕ್ಕಾಚಾರ ಶುರುವಾಗಿದೆ.ಉಚಿತ ಪ್ರಯಾಣದ ಅನುಕೂಲಕ್ಕಾಗಿ ಮಹಿಳೆಯರು ಖಾಸಗಿ ಬಸ್ ತೊರೆವ ಆತಂಕ ಎದುರಾಗಿದೆ. ಇನ್ನು ಈ ಬಗ್ಗೆ ರಾಜ್ಯ ಖಾಸಗಿ ಬಸ್ ಮಾಲೀಕರ ಸಂಘದ ಅಧ್ಯಕ್ಷ ನಟರಾಜ್ ಶರ್ಮ ಪ್ರತಿಕ್ರಿಯಿಸಿದ್ದು, ಮಹಿಳಾ ಪ್ರಯಾಣಿಕರಿಗೆ ಫ್ರೀ ಅಂತ ಘೋಷಣೆ ಮಾಡುವುದರಿಂದ ಈಗಾಗಲೇ ನೆಲಕಚ್ಚಿರುವ ನಮ್ಮ ಉದ್ದಿಮೆಗೆ ಕೊನೆ ಮೊಳೆ ಹೊಡೆಯಲು ಸರ್ಕಾರ ಮುಂದಾಗಿದ್ಯಾ ಎನ್ನುವ ಪ್ರಶ್ನೆ ಉದ್ಭವಿಸುತ್ತದೆ. ಈಗಾಗಲೇ ಬಸ್ ಮಾಲೀಕರು ರೋಡ್ ಟ್ಯಾಕ್ಸ್ ಕಟ್ಟಲು, ಇನ್ಸೂರೆನ್ಸ್ ಕಟ್ಟಲು ಆಗುತ್ತಿಲ್ಲ. ಕಂಡಕ್ಟರ್, ಡ್ರೈವರ್ ಗಳಿಗೆ ಸಂಬಳ ಕೊಡಲು ಆಗುತ್ತಿಲ್ಲ. ಈಗಾಗಲೇ ಬಸ್ ಮಾಲೀಕರು ಮನೆ-ಮಠ ಮಾರಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಫ್ರೀ ಅಂತ ಘೋಷಣೆ ಮಾಡಿದ್ರೆ ಮಹಿಳೆಯರು ಉಚಿತವಾಗಿ ಕರೆದುಕೊಂಡು ಹೋಗುವ ಕಡೆ ಹೋಗುತ್ತಾರೆ. ಇದರಿಂದ ನಮ್ಮ ಖಾಸಗಿ ಬಸ್ ಉದ್ದಿಮೆಗೆ ದೊಡ್ಡ ಮಟ್ಟದಲ್ಲಿ ಹೊಡೆತ ಬೀಳುತ್ತದೆ ಎಂದು ಹೇಳಿದರು.

ಇದನ್ನೂ ಓದಿ: 5 ಗ್ಯಾರಂಟಿ ಜಾರಿಯಾಗುವ ಟೈಂ ಬಂದೇ ಬಿಡ್ತು, ಶುಭ ಶುಕ್ರವಾರದಂದೇ ಜನರಿಗೆ ಫ್ರೀ ಗಿಫ್ಟ್‌ ಕೊಡಲು ತೀರ್ಮಾನ

ಕಳೆದ ಮೂರ್ನಾಲ್ಕು ವರ್ಷಗಳಿಂದ ಕೊರೊನಾ ‌ಕಾಲದಿಂದಲೂ ನಮ್ಮ ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದೇವೆ. ಹಿಂದಿನ ಸರ್ಕಾರ ನಮಗೆ ಯಾವುದೇ ರೀತಿಯ ಬೆಂಬಲ ವ್ಯಕ್ತಪಡಿಸಿರಲಿಲ್ಲ, ಕೊಡುಗೆಯನ್ನು ನೀಡಿಲ್ಲ. ಇದರ ವಿರುದ್ಧವಾಗಿ ಇವತ್ತು ಫಲಿತಾಂಶ ಕೂಡ ಬಂದಿದೆ. ಪ್ರಸಕ್ತ ಸರ್ಕಾರಕ್ಕೆ ಬೆಂಬಲ ಇತ್ತು ಅನ್ನುವುದನ್ನು ಮನಗಾಣಬೇಕು. ಕೆಎಸ್​ಆರ್​ಟಿಸಿ, ಬಿಎಂಟಿಸಿಗೆ ನೀಡಲು ಪ್ಲಾನ್ ಮಾಡಿರುವಂತೆ ನಮಗೂ ಪ್ಯಾಕೇಜ್ ಘೋಷಣೆ ಮಾಡಿ. ನಮ್ಮ ಬಸ್ ಗಳಲ್ಲಿ ಪ್ರಯಾಣ ಮಾಡುವ ಮಹಿಳೆಯರ ಡೇಟಾವನ್ನು ಸರ್ಕಾರಕ್ಕೆ ಕೊಡುತ್ತೇವೆ. ನಾವು ಮಹಿಳೆಯರಿಗೆ ಉಚಿತವಾಗಿ ಕರೆದುಕೊಂಡು ಹೋಗುತ್ತೇವೆ ಎಂದು ಸರ್ಕಾರಕ್ಕೆ ಮನವಿ ಮಾಡಿದರು.

ಸ್ಟೇಜ್ ಕ್ಯಾರೇಜ್ ಬಸ್ ಸೆಕ್ರೆಟರಿ ಜಿ. ಗೋವಿಂದರಾಜ್ ಮಾತನಾಡಿ, ಮಹಿಳೆಯರಿಗೆ ಉಚಿತ ಘೋಷಣೆಯಿಂದ ಪುರುಷರು ಕೂಡ ಅವರ ಜೊತೆಗೆ ಸರ್ಕಾರಿ ಬಸ್ ನಲ್ಲಿ ಪ್ರಯಾಣ ಮಾಡುತ್ತಾರೆ. ಇದರಿಂದ ಸ್ಟೇಜ್ ಕ್ಯಾರಿಯರ್ ಬಸ್ ಮಾಲೀಕರು ಸಂಪೂರ್ಣವಾಗಿ ಬಸ್ ಗಳನ್ನು ನಿಲ್ಲಿಸಬೇಕಾಗುತ್ತದೆ. ನಮಗೂ ಪ್ಯಾಕೇಜ್ ಕೊಡಿ ನಾವು ಮಹಿಳೆಯರನ್ನು ಉಚಿತವಾಗಿ ಕರೆದುಕೊಂಡು ಹೋಗುತ್ತೇವೆ. ದಯವಿಟ್ಟು ಮೊದಲು ನಮಗೆ ಟ್ಯಾಕ್ಸ್ ಮನ್ನಾ ಮಾಡಬೇಕು. ಒಂದು ಬಸ್​ನಿಂದ ಮೂರು ತಿಂಗಳಿಗೆ 50 ಸಾವಿರ ರುಪಾಯಿ ರೋಡ್ ಟ್ಯಾಕ್ಸ್ ಕಟ್ಟುತ್ತಿದ್ದೇವೆ. ನಮ್ಮದು ಒಟ್ಟು 3500 ಸ್ಟೇಜ್ ಕ್ಯಾರಿಯರ್ ಬಸ್ಸುಗಳಿವೆ. ಇದನ್ನು ನಂಬಿಕೊಂಡು 3 ಲಕ್ಷ ಕಾರ್ಮಿಕರಿದ್ದಾರೆ. ಬಸ್ ಫ್ರೀ ಘೋಷಣೆಯಿಂದ ಖಾಸಗಿ ಬಸ್ ಓಡಿಸಲು ಆಗುವುದಿಲ್ಲ. ಹಾಗಾಗಿ ನಮ್ಮ ಎಲ್ಲಾ ಖಾಸಗಿ ಬಸ್ಸುಗಳನ್ನು ವಿಧಾನಸೌಧದ ಮುಂದೆ ತಂದು ನಿಲ್ಲಿಸಬೇಕಾಗುತ್ತದೆ. ಕೊರೊನಾ ಸಂದರ್ಭದಲ್ಲೂ ಸರ್ಕಾರ ನಮಗೆ ತೆರಿಗೆ ವಿನಾಯಿತಿ ನೀಡಿಲ್ಲ ಎಂದರು.