Karnataka Rain Alert: ಕರಾವಳಿ ಕರ್ನಾಟಕ, ಬೆಂಗಳೂರಿನಲ್ಲಿ ಮುಂದಿನ 5 ದಿನ ಭಾರಿ ಮಳೆ – ಐಎಂಡಿ ಮುನ್ಸೂಚನೆ

Karnataka Weather Forecast; ಬೆಂಗಳೂರು ನಗರ ಸೇರಿದಂತೆ ಕರ್ನಾಟಕದ ದಕ್ಷಿಣ ಒಳನಾಡಿನ ಕೆಲವು ಪ್ರದೇಶಗಳಲ್ಲಿ, ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 6 ರವರೆಗೆ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನಲ್ಲಿ ಕೂಡ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ.

Karnataka Rain Alert: ಕರಾವಳಿ ಕರ್ನಾಟಕ, ಬೆಂಗಳೂರಿನಲ್ಲಿ ಮುಂದಿನ 5 ದಿನ ಭಾರಿ ಮಳೆ - ಐಎಂಡಿ ಮುನ್ಸೂಚನೆ
ಬೆಂಗಳೂರಿನ ಪುರಭವನ ಬಳಿ ಭಾನುವಾರ ಸಂಜೆ ಸುರಿದ ಭಾರಿ ಮಳೆ

Updated on: Aug 31, 2025 | 6:27 PM

ಬೆಂಗಳೂರು, ಆಗಸ್ಟ್ 31: ಬೆಂಗಳೂರು (Bengaluru) ನಗರದಲ್ಲಿ ಮುಂದಿನ ಐದು ದಿನಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಾಧಾರಣ ಮಳೆಯಾಗುವ (Rain) ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕೂಡ ಮುಂದಿನ ಐದು ದಿನಗಳ ಕಾಲ ಮಳೆ ಮುನ್ಸೂಚನೆ (weather-forecast) ನೀಡಲಾಗಿದೆ. ಉಭಯ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉಳಿದಂತೆ, ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 1 ರಂದು ಸಾಧಾರಣ ಮಳೆ ಆಗಲಿದ್ದು, ಸೆಪ್ಟೆಂಬರ್ 2 ಮತ್ತು 3 ರಂದು ಭಾರಿ ಮಳೆ ಆಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಜತೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಸೆಪ್ಟೆಂಬರ್ ಆರರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಲಾಗಿದೆ.

ಬೆಂಗಳೂರು ನಗರದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್‌ ಇರುವ ನಿರೀಕ್ಷೆಯಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 2 ಹಾಗೂ 3 ರಂದು ಭಾರಿ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ.

ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಹಲವಡೆ ವ್ಯಾಪಕ ಮತ್ತು ಇನ್ನು ಕೆಲವೆಡೆ ಸಾಧಾರಣಯಾಗುವ ನಿರೀಕ್ಷೆ ಇದೆ. ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಎಕ್ಸ್ ಸಂದೇಶದಲ್ಲಿ ತಿಳಿಸಿದೆ.

ಕರ್ನಾಟಕ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ಎಕ್ಸ್ ಸಂದೇಶ


ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಸಾಧಾರಣ ಮಳೆ ಆಗುವ ನಿರೀಕ್ಷೆ ಇದೆ. ಉತ್ತರ ಒಳನಾಡಿನಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಮಿಂಚಿನಿಂದ ಕೂಡಿದ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.

ಇದನ್ನೂ ಓದಿ: 14 ವರ್ಷದಲ್ಲೇ ಅತಿಹೆಚ್ಚು ಆಗಸ್ಟ್ ಮಳೆ; ಸೆಪ್ಟೆಂಬರ್​ನಲ್ಲಿ ಪ್ರವಾಹ, ಭೂಕುಸಿತಗಳ ಸಾಧ್ಯತೆ: ಹವಾಮಾನ ಮುನ್ನೆಚ್ಚರಿಕೆ

ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ದೇಶದ ಹಲವೆಡೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದ್ದು, ಕರ್ನಾಟಕದಲ್ಲಿ ಕೂಡ ಭಾರಿ ಮಳೆ ನಿರೀಕ್ಷಿಸಲಾಗಿದೆ.

ಬೆಂಗಳೂರಿನಲ್ಲಿ ಭಾರಿ ಮಳೆ

ಶಾಂತಿನಗರ, ರಿಚ್ಮಂಡ್​ ಸರ್ಕಲ್, ಕೋರಮಂಗಲ, ಕಾರ್ಪೊರೇಷನ್​ ಸರ್ಕಲ್​, ಮೆಜೆಸ್ಟಿಕ್​, ಕೆ.ಆರ್‌.ಮಾರ್ಕೆಟ್, ಗಿರಿನಗರ, ವಿಜಯನಗರ ಸೇರಿದಂತೆ ಬೆಂಗಳೂರು ನಗರದ ವಿವಿಧೆಡೆ ಇಂದು (ಆಗಸ್ಟ್ 31) ಸಂಜೆ ಭಾರಿ ಮಳೆ ಸುರಿದಿದೆ. ಪರಿಣಾಮವಾಗಿ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ