14 ವರ್ಷದಲ್ಲೇ ಅತಿಹೆಚ್ಚು ಆಗಸ್ಟ್ ಮಳೆ; ಸೆಪ್ಟೆಂಬರ್ನಲ್ಲಿ ಪ್ರವಾಹ, ಭೂಕುಸಿತಗಳ ಸಾಧ್ಯತೆ: ಹವಾಮಾನ ಮುನ್ನೆಚ್ಚರಿಕೆ
Heavy rainfall, floods, landslides in September: ಈ ಬಾರಿಯ ಮುಂಗಾರು ಸೀಸನ್ನಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುತ್ತಿದೆ. ಆಗಸ್ಟ್ನಲ್ಲಿ ಹಲವೆಡೆ ಭೀಕರ ಮಳೆಯಾಗಿದೆ. ಸೆಪ್ಟೆಂಬರ್ನಲ್ಲೂ ಭಾರೀ ಮಳೆಯಾಗಲಿದ್ದು, ಹಲವೆಡೆ ಪ್ರವಾಹ, ಭೂಕುಸಿತ ದುರಂತ ಸಂಭವಿಸಬಹುದು. ವಾಯವ್ಯ ಭಾರತದಲ್ಲಿ ಕಳೆದ 14 ವರ್ಷದಲ್ಲೇ ಆಗಸ್ಟ್ನಲ್ಲಿ ಅತಿಹೆಚ್ಚು ಮಳೆಯಾಗಿದೆ ಎಂದು ಹೇಳಲಾಗುತ್ತಿದೆ.

ನವದೆಹಲಿ, ಆಗಸ್ಟ್ 31: ಈ ಬಾರಿ ಭಾರತದಾದ್ಯಂತ ಭಾರೀ ಮಳೆ ಆಗುತ್ತಿದೆ. ಹವಾಮಾನ ಇಲಾಖೆ (IMD) ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ದೇಶದ ಹಲವೆಡೆ ವಾಡಿಕೆಗಿಂತ ಹೆಚ್ಚಿನ ಮಳೆಯಾಗಲಿದೆ. ಭಾರೀ ಮಳೆಯಿಂದಾಗಿ ಪ್ರವಾಹ, ಭೂಕುಸಿತ (floods and landslides) ಇತ್ಯಾದಿ ಅವಘಡಗಳು ಹಲವೆಡೆ ಅನಾಹುತ ಸೃಷ್ಟಿಸಲಿವೆ ಎಂದೂ ಎಚ್ಚರಿಸಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಸರಾಸರಿಯಾಗಿ 167.9 ಎಂಎಂ ಮಳೆಯಾಗುತ್ತದೆ. ಆದರೆ, ಈ ಬಾರಿ ಶೇ. 109ರಷ್ಟು ಹೆಚ್ಚು ಮಳೆಯಾಗಬಹುದು ಎಂದು ಐಎಂಡಿ ಅಭಿಪ್ರಾಯಪಟ್ಟಿದೆ.
ದೇಶದ ಪೂರ್ವ, ಈಶಾನ್ಯದ ಕೆಲ ಪ್ರದೇಶಗಳು, ಹಾಗೂ ದಕ್ಷಿಣದ ಹಲವು ಪ್ರದೇಶಗಳು, ವಾಯವ್ಯ ಭಾಗದ (North west) ಕೆಲ ಪ್ರದೇಶಗಳಲ್ಲಿ ವಾಡಿಕೆಗಿಂತ ಸ್ವಲ್ಪ ಕಡಿಮೆ ಮಳೆಯಾಗಬಹುದು. ಇವನ್ನು ಬಿಟ್ಟರೆ ಉಳಿದ ಕಡೆ ತೀವ್ರತರವಾದ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಇದನ್ನೂ ಓದಿ: ಚೆನ್ನೈನಲ್ಲಿ ಮೇಘಸ್ಫೋಟ; ಹಲವೆಡೆ ಭಾರೀ ಮಳೆ; ಬೆಂಗಳೂರಿಗೆ ಬಂದ 3 ವಿಮಾನಗಳು
ಉತ್ತರಾಖಂಡ್ನಲ್ಲಿ ಭೂಕುಸಿತದ ಸಂಭವ
ಭಾರೀ ಮಳೆಯಿಂದ ಸೆಪ್ಟೆಂಬರ್ನಲ್ಲಿ ಉತ್ತರಾಖಂಡ್ನಲ್ಲಿ ಭೀಕರ ಪ್ರವಾಹ ಮತ್ತು ಭೂಕುಸಿತಗಳು ಸಂಭವಿಸಬಹುದು. ಇಲ್ಲಿಯೇ ಹಲವು ನದಿಗಳು ಉಗಮಗೊಳ್ಳುವುದರಿಂದ ಭಾರೀ ಮಳೆಯಿಂದಾಗಿ ನದಿಗಳು ಉಕ್ಕಿ ಹರಿದು, ಹಲವು ಪ್ರದೇಶಗಳಲ್ಲಿ ಪ್ರವಾಹಕ್ಕೆ ಕಾರಣವಾಗಬಹುದು. ದಕ್ಷಿಣ ಹರ್ಯಾಣ, ದೆಹಲಿ, ಮತ್ತು ಉತ್ತರ ರಾಜಸ್ಥಾನದಲ್ಲಿ ಜನಜೀವನ ಅಸ್ತವ್ಯಸ್ತಗೊಳ್ಳಬಹುದು ಎಂದು ಹವಾಮಾನ ಇಲಾಖೆ ಹೇಳಿದೆ.
ವಾಯವ್ಯ ಭಾರತದಲ್ಲಿ ಆಗಸ್ಟ್ನಲ್ಲಿ ದಾಖಲೆಯ ಮಳೆ
ಆಗಸ್ಟ್ ತಿಂಗಳಲ್ಲಿ ವಾಯವ್ಯ ಭಾಗಗಳಲ್ಲಿ (Northwest India) ಸರಾಸರಿಯಾಗಿ 265 ಎಂಎಂ ಮಳೆಯಾಗಿದೆ. 2001ರ ನಂತರ ಈ ಭಾಗಗಳಲ್ಲಿ ಆಗಸ್ಟ್ ತಿಂಗಳಲ್ಲಿ ಕಂಡ ಅತಿಹೆಚ್ಚು ಮಳೆ ಇದು. 124 ವರ್ಷಗಳ ಬಳಿಕ, ಅಂದರೆ 1901ರ ನಂತರ ಆಗಸ್ಟ್ ತಿಂಗಳಲ್ಲಿ ದಾಖಲಾದ ಅತಿಹೆಚ್ಚು ಮಳೆಯಲ್ಲಿ ಇದು 13ನೇ ಸ್ಥಾನ ಪಡೆಯುತ್ತದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: 5,000 ಮೀಟರ್ ಸಮುದ್ರದಾಳದಲ್ಲಿ ಭಾರತೀಯರು; ವಿಶ್ವದ ಕೆಲವೇ ದೇಶಗಳ ಸಾಲಿಗೆ ಭಾರತ
ಈ ಬಾರಿಯ ಮುಂಗಾರು ಸೀಸನ್ನ ಎಲ್ಲಾ ಮೂರು ತಿಂಗಳಲ್ಲೂ ಈ ವಾಯವ್ಯ ಪ್ರದೇಶಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯೇ ಆಗಿದೆ. ಜೂನ್ನಲ್ಲಿ 111 ಎಂಎಂ, ಜುಲೈನಲ್ಲಿ 237.4 ಎಂಎಂ ಮತ್ತು ಆಗಸ್ಟ್ನಲ್ಲಿ 265 ಎಂಎಂ ಮಳೆಯಾಗಿದೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಸೆಪ್ಟೆಂಬರ್ ತಿಂಗಳಲ್ಲಿ ಈ ಭಾಗಗಳಲ್ಲಿ ಮಳೆ ಶಾಂತಗೊಳ್ಳಬಹುದು. ವಾಡಿಕೆಗಿಂತ ತುಸು ಕಡಿಮೆ ಮಳೆಯಾಗಬಹುದು.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




