ಡಿಕೆ ಶಿವಕುಮಾರ್ ಒಂದು ಕಾಲು ಬಿಜೆಪಿಯಲ್ಲಿಟ್ಟಿದ್ದಾರೆ ಎಂದ ಬಸನಗೌಡ ಪಾಟೀಲ್ ಯತ್ನಾಳ್: ಸೆಗಣಿಗೆ ಕಲ್ಲು ಹಾಕಲ್ಲವೆಂದು ಡಿಕೆಶಿ ತಿರುಗೇಟು
ಡಿಸಿಎಂ ಡಿಕೆ ಶಿವಕುಮಾರ್ ಬಿಜೆಪಿ ಸೇರಲು ಯತ್ನಿಸುತ್ತಿದ್ದಾರೆ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಈ ಕುರಿತು ದೆಹಲಿಯಲ್ಲಿ ಚರ್ಚೆ ನಡೆದಿತ್ತು. ಶಾಸಕರ ಬೆಂಬಲದ ಕೊರತೆಯಿಂದ ಡಿಕೆ ಶಿವಕುಮಾರ್ ಯತ್ನ ಸಫಲವಾಗಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಆದರೆ, ಡಿಕೆ ಶಿವಕುಮಾರ್ ಈ ಆರೋಪಗಳನ್ನು ತಳ್ಳಿಹಾಕಿದ್ದಾರೆ.

ಬೆಂಗಳೂರು, ಆಗಸ್ಟ್ 31: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಒಂದು ಕಾಲು ಬಿಜೆಪಿಯಲ್ಲಿ (BJP ಇಟ್ಟಿದ್ದಾರೆ ಎಂದು ಭಾರತೀಯ ಜನತಾ ಪಕ್ಷದ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Bsanagouda Patil Yatnal) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಡಿಕೆ ಶಿವಕುಮಾರ್ ಈಗಾಗಲೇ ದೆಹಲಿಯಲ್ಲಿ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ. ಆದರೆ ಅವರಿಗೆ ಶಾಸಕರ ಬೆಂಬಲ ಕಡಿಮೆ ಇದೆ ಎಂಬ ಕಾರಣಕ್ಕೆ ಅದು ಮುಂದುವರಿಯಲಿಲ್ಲ ಎಂದು ಯತ್ನಾಳ್ ಹೇಳಿದ್ದಾರೆ. ಆದರೆ ಇದಕ್ಕೆ ತಿರುಗೇಟು ನೀಡಿರುವ ಡಿಕೆ ಶಿವಕುಮಾರ್, ಆ ಸೆಗಣಿ ಮೇಲೆ ಕಲ್ಲು ಹಾಕಲು ನನಗೆ ಇಷ್ಟವಿಲ್ಲ ಎಂದು ಹೇಳಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದೇನು?
‘‘ಡಿಕೆ ಶಿವಕುಮಾರ್ ಈಗಾಗಲೇ ಬಿಜೆಪಿಯಲ್ಲಿ ಒಂದು ಕಾಲು ಇಟ್ಟಾಗಿದೆ. ನಮ್ಮ ಮಹಾಮಹಿಮ ರಾಜ್ಯಾಧ್ಯಕ್ಷರ ಜೊತೆ ದೆಹಲಿಯಲ್ಲಿ ಒಂದು ಸುತ್ತಿನ ಚರ್ಚೆ ನಡೆದಿದೆ. ಸುಮಾರು 60 ರಿಂದ 70 ಕಾಂಗ್ರೆಸ್ ಶಾಸಕರನ್ನು ಕರೆದುಕೊಂಡು ಬಿಜೆಪಿಗೆ ಬಂದು ‘‘ನಮಸ್ತೇ ಸದಾ ವತ್ಸಲೇ’’ ಎಂದು ಹೇಳುವ ಯೋಜನೆಯನ್ನೂ ಅವರು ಹಾಕಿಕೊಂಡಿದ್ದರು. ಆದರೆ 12 ರಿಂದ 13 ಮಂದಿ ಶಾಸಕರ ಬೆಂಬಲವುಯವೂ ಅವರಿಗಿಲ್ಲ, ಎಲ್ಲರೂ ಸಿಎಂ ಸಿದ್ದರಾಮಯ್ಯ ಕಡೆ ಇದ್ದಾರೆ ಎಂಬುದು ಇಂಟಲಿಜೆನ್ಸ್ ಮಾಹಿತಿಯಿಂದ ತಿಳಿದು ಬಂದಿತ್ತು. ಈ ಬಗ್ಗೆ ನಮ್ಮ ಹೈಕಮಾಂಡ್ ನಾಯಕರೇ ಒಬ್ಬರು ನನ್ನ ಬಳಿ ಕೇಳಿದ್ದರು. ಡಿಕೆ ಶಿವಕುಮಾರ್ ಬಳಿ ಎಷ್ಟು ಕಾಂಗ್ರೆಸ್ ಶಾಸಕರಿದ್ದಾರೆ ಎಂದು ಕೇಳಿದ್ದರು. ಒಂದು ಹತ್ತು ಮಂದಿ ಇರಬಹುದು. ಬಿಜೆಪಿಗೆ ಬರುತ್ತಾರೆಂದು ಗೊತ್ತಾದರೆ ಅವರು ಕೂಡ ಇರಲಿಕ್ಕಿಲ್ಲ ಎಂದು ಹೇಳಿದ್ದೆ’’ ಎಂದು ಯತ್ನಾಳ್ ಹೇಳಿದ್ದಾರೆ.
ಯತ್ನಾಳ್ ಹೇಳಿಕೆಯ ವಿಡಿಯೋ
ಸಿದ್ದರಾಮಯ್ಯ ಮುಸ್ಲಿಂ ಓಲೈಕೆ ಮಾಡುತ್ತಾರೆ. ಆದರೂ ಒಂದೆರಡು ವರ್ಷ ಅವರೇ ಸರ್ಕಾರ ಮುನ್ನಡೆಸಲಿ. ಇವರಿಬ್ಬರು (ಡಿಕೆ ಶಿವಕುಮಾರ್ ಮತ್ತು ವಿಜಯೇಂದ್ರ) ಭ್ರಷ್ಟರು ಸೇರಿದರೆ ಕರ್ನಾಟಕವನ್ನೇ ಮಾರಾಟ ಮಾಡಿಬಿಟ್ಟಾರು ಎಂದು ಯತ್ನಾಳ್ ವ್ಯಂಗ್ಯವಾಡಿದ್ದಾರೆ.
ಸಗಣಿ ಮೇಲೆ ಕಲ್ಲು ಹಾಕಲು ಇಷ್ಟ ಇಲ್ಲ: ಡಿಕೆ ಶಿವಕುಮಾರ್ ತಿರುಗೇಟು
ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ತಿರುಗೇಟು ನೀಡಿರುವ ಡಿಕೆ ಶಿವಕುಮಾರ್, ಸಗಣಿ ಮೇಲೆ ಕಲ್ಲು ಹಾಕಲು ಇಷ್ಟ ಇಲ್ಲ ಎಂದು ಹೇಳಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮದವರು ಹೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ನೋಡಿ ಆ ಕಸ, ಸಗಣಿ ಮೇಲೆ ಕಲ್ಲು ಹಾಕಲು ನನಗೆ ಇಷ್ಟವಿಲ್ಲ ಎಂದರು.
ಇದನ್ನೂ ಓದಿ: ವಿಧಾನಸಭೆಯಲ್ಲಿ ಆರ್ಎಸ್ಎಸ್ ಗೀತೆ ಹಾಡಿದ್ದಕ್ಕೆ ಕ್ಷಮೆಯಾಚಿಸಿದ ಡಿಕೆ ಶಿವಕುಮಾರ್
