ನಾಳೆಯ ಹವಾಮಾನ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ, ಕರ್ನಾಟಕದಲ್ಲಿ ಮಳೆ ಹೊಡೆತ

ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದಿಂದ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ನೀಡಿದೆ. ಉತ್ತರ ಒಳನಾಡಿನಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಬೆಂಗಳೂರಿನಲ್ಲಿಯೂ ಮಳೆಯಾಗುತ್ತಿದೆ. ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಾಳೆಯ ಹವಾಮಾನ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ, ಕರ್ನಾಟಕದಲ್ಲಿ ಮಳೆ ಹೊಡೆತ
ಸಾಂದರ್ಭಿಕ ಚಿತ್ರ

Updated on: Aug 13, 2025 | 7:17 PM

ಬೆಂಗಳೂರು, ಆಗಸ್ಟ್​ 13: ಬಂಗಾಳಕೊಲ್ಲಿಯಲ್ಲಿ ಚಂಡಮಾರುತ (Bay of Bengal Cyclone) ಬೀಸುತ್ತಿರುವುದರಿಂದ ವಾತಾವರಣ ವೈಪರೀತ್ಯವಾಗಿದೆ. ಚಂಡಮಾರುತದ ಎಫೆಕ್ಟ್​ ಕರ್ನಾಟಕಕ್ಕೆ ತಟ್ಟಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಕರಾವಳಿ ಮತ್ತು ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಸೇರಿದಂತೆ ರಾಜ್ಯದ ಹಲವಡೆ ಗುರುವಾರ (ಆ.14) ಭಾರಿ ಮಳೆಯಾಗುವ (Rain) ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಆಗಸ್ಟ್ 15 ರಿಂದ 19 ರವರೆಗೆ ರಾಜ್ಯದ ಉತ್ತರ ಒಳನಾಡಿನಲ್ಲಿ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ.

ಬೀದರ್, ಕಲಬುರಗಿ, ಶಿವಮೊಗ್ಗ, ಹಾಸನ, ಕೊಡಗು ಸೇರಿದಂತೆ ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಕರಾವಳಿ, ಚಿತ್ರದುರ್ಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಈ ಬಾರಿ ಮಳೆ ಹೆಚ್ಚಾಗಿದೆ. ರಾಮನಗರ, ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಮಳೆ ವಾಡಿಕೆಗಿಂತ ಕಡಿಮೆಯಾಗಿದೆ ಎಂದು ಹವಾಮಾನ ವಿಜ್ಞಾನಿ ಸಿ.ಎಸ್.ಪಾಟೀಲ್ ಹೇಳಿದ್ದಾರೆ.

ಈ ಬಾರಿ ರಾಜ್ಯದಲ್ಲಿ ವಾಡಿಕೆಗಿಂತ ಶೇ.9 ರಷ್ಟು ಹೆಚ್ಚು ಮಳೆಯಾಗಿದೆ. ಉತ್ತರ ಒಳನಾಡಿನಲ್ಲಿ ಮಳೆಯ ಪ್ರಮಾಣ ಶೇ. 37 ರಷ್ಟು ಹೆಚ್ಚಾಗಿದೆ. ದಕ್ಷಿಣ ಒಳನಾಡಿನಲ್ಲಿ ಶೇ.3 ರಷ್ಟು ಹೆಚ್ಚು ಮಳೆಯಾಗಿದೆ. ರಾಜ್ಯದ ಕರಾವಳಿಯಲ್ಲಿ ವಾಡಿಕೆಗಿಂತ ಶೇ.2 ರಷ್ಟು  ಹೆಚ್ಚು ಮಳೆಯಾಗಿದೆ.

ಯೆಲ್ಲೋ ಅಲರ್ಟ್: ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೊಡಗು, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು ಮತ್ತು ವಿಜಯನಗರ ಜಿಲ್ಲೆಗಳಿಗೆ ಆ.15 ರಿಂದ 19ರವರೆಗೆ ಯೆಲ್ಲೋ ಅಲರ್ಟ್​ ಘೋಷಿಸಲಾಗಿದೆ.

ಬೆಳ್ಳಂಬೆಳಗ್ಗೆ ತುಂತುರು ಮಳೆ:

ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ತುಂತುರು ಮಳೆಯಾಗುತ್ತಿದ್ದು, ಕೆಲಸಕಾರ್ಯಗಳಿಗೆ ಹೋಗುವ ಉದ್ಯೋಗಿಗಳು, ಶಾಲಾಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಪರದಾಡುವಂತಾಗಿತ್ತು. ಮಳೆಯಿಂದಾಗಿ ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿ ಹೆಚ್ಚು ಜನರು ಮೆಟ್ರೊದಲ್ಲಿ ಪ್ರಯಾಣಿಸಿದ್ದಾರೆ.

ಬುಧವಾರ ಸಂಜೆ ಬೆಂಗಳೂರಿನಲ್ಲಿ ಜೋರು ಮಳೆಯಾಗಿದೆ. ಮೆಜೆಸ್ಟಿಕ್ , ಶಾಂತಿನಗರ, ಓಕಳಿಪುರಂ ಸರ್ಕಲ್ ಸೇರಿದ್ದಂತೆ ಹಲವಡೆ ಮಳೆಯಾಗಿದೆ. ಮಳೆಯಿಂದ ಬೈಕ್ ಸವಾರರು ಪರದಾಡಿದರು. ಉದ್ಯೋಗಿಗಳು ಡ್ಯೂಟಿ ಮುಗಸಿ ಮಳೆಯಲ್ಲೇ ಮನೆಗೆ ತೆರಳಿದರು. ಬೆಂಗಳೂರಿನಲ್ಲಿ ಇನ್ನೂ ಒಂದು ವಾರಗಳ ಕಾಲ ವಾತಾವರಣ ತಂಪಾಗಿರಲಿದೆ. ನಗರದಲ್ಲಿ ಮುಂದಿನ ಎರಡು ದಿನಗಳ ಕಾಲ ನಿರಂತರವಾಗಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಗಾಳಿಯ ವೇಗ

ಆಗಸ್ಟ್​ 14 ರಿಂದ ಆಗಸ್ಟ್​ 17ರವರೆಗೆ ಕರಾವಳಿ, ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗಾಳಿಯ ವೇಗವು ಗಂಟೆಗೆ 40-50 ಕಿಮೀ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಆಗಸ್ಟ್​ 14 ರಿಂದ ಆಗಸ್ಟ್​ 17ರ ವರೆಗೂ ಮಳೆಯಾಗಲಿದೆ. ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್​ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿಯಷ್ಟು ಇರುವ ಸಾಧ್ಯತೆ ಇದೆ. ಗಾಳಿ ಗಂಟೆಗೆ 30-40 ಕಿಮೀ ವೇಗದಲ್ಲಿ ಬೀಸಲಿದೆ ಎಂದು ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ.

ಮತ್ತಷ್ಟು ಓದಿ: Karnataka Rains: ಬೆಂಗಳೂರು ಸೇರಿ ಕರ್ನಾಟಕದ 17 ಜಿಲ್ಲೆಗಳಲ್ಲಿ ಆಗಸ್ಟ್ 17ರವರೆಗೂ ಭಾರಿ ಮಳೆ

ಬೆಂಗಳೂರು ಗ್ರಾಮಾಂತರದಲ್ಲಿ ಆಗಸ್ಟ್​ 14 ರಿಂದ ಆಗಸ್ಟ್​ 17ರ ವರೆಗೂ ಮಳೆಯಾಗಲಿದೆ.ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್​ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್​ನಷ್ಟು ದಾಖಲಾಗಲಿದೆ. ಗಾಳಿಯ 30-40 ಕಿಮೀ ವೇಗದಲ್ಲಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:13 pm, Wed, 13 August 25