ಮಳೆ ಹಾನಿ: ಮೂಲಸೌಕರ್ಯಗಳಿಗೆ 600 ಕೋಟಿ ಹಣ ಬಿಡುಗಡೆ ಮಾಡಲು ಸಿಎಂ ಬೊಮ್ಮಾಯಿ ನಿರ್ಧಾರ
ರಾಜ್ಯದ ಮೂಲಸೌಕರ್ಯಗಳಿಗೆ 600 ಕೋಟಿ ಹಣ ಬಿಡುಗಡೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬೆಂಗಳೂರು: ರಾಜ್ಯದ ಮೂಲಸೌಕರ್ಯಗಳಿಗೆ 600 ಕೋಟಿ ಹಣ ಬಿಡುಗಡೆ ಮಾಡಲು ತೀರ್ಮಾನ ಮಾಡಿದ್ದೇನೆ ಎಂದು ಬೆಂಗಳೂರಿನಲ್ಲಿ (Bengaluru) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ಬರೀ ಬೆಂಗಳೂರಿನ ಮೂಲಭೂತ ಸೌಕರ್ಯಗಳಿಗೆ 300 ಕೋಟಿ ಬಿಡುಗಡೆ ಮಾಡುತ್ತೇನೆ. ರಾಜ್ಯದಲ್ಲಿ ಈ ಹಿಂದೆ ಸುರಿದ ಮಳೆಯಿಂದ 11 ಕೋಟಿಗೂ ಹೆಚ್ಚು ಹಾನಿಯಾಗಿದ್ದು, ಮಳೆ ಹಾನಿ ಪರಿಹಾರ ಕೋರಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ಹೇಳಿದರು.
ರಾಜ್ಯದಲ್ಲಿ ಭಾರಿ ಮಳೆಯಿಂದ ಹಲವೆಡೆ ಅನಾಹುತಗಳಾಗಿರುವ ಹಿನ್ನೆಲೆ ಸಿಎಂ ಬೊಮ್ಮಾಯಿ ಗೃಹಕಚೇರಿ ಕೃಷ್ಣಾದಲ್ಲಿ ಹಾನಿಗೊಳಗಾದ 15 ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಿದರು. ಸಭೆಯಲ್ಲಿ ಬೆಂಗಳೂರಿನ 8 ವಲಯಗಳಲ್ಲಿ ಉಂಟಾದ ಮಳೆಯ ಹಾನಿಗಳ ಬಗ್ಗೆ ಚರ್ಚೆ ಮಾಡಲಾಯಿತು.
ಸಭೆ ಬಳಿಕ ಮಾತನಾಡಿದ ಅವರು ಸೆ.1ರಿಂದ 5ರವರೆಗೆ ಆಗಿರುವ ಮಳೆ ಹಾನಿ ಬಗ್ಗೆ ವರದಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ. ನಾಳೆ ರಾತ್ರಿಯೊಳಗೆ ಎಲ್ಲಾ ಜಿಲ್ಲಾಧಿಕಾರಿಗಳು ವರದಿ ಸಲ್ಲಿಸಲಿದ್ದಾರೆ. ಜಿಲ್ಲಾಧಿಕಾರಿಗಳು ನೀಡುವ ವರದಿ ಆಧರಿಸಿ ಕೇಂದ್ರದ ನೆರವು ಕೋರುತ್ತೇವೆ. ಸೆಪ್ಟೆಂಬರ್ 1ರಿಂದ 5ರವರೆಗೆ ಶೇ.51ಕ್ಕಿಂತ ಹೆಚ್ಚು ಮಳೆಯಾಗಿದೆ. ಮುಂದಿನ ತಿಂಗಳಲ್ಲಿ ಮತ್ತೆ ಮಳೆಯಾಗುವ ಸೂಚನೆ ಇದೆ. ಮಳೆಯಿಂದ 32 ಸಾವಿರ ಎಕರೆ ಕೃಷಿ ಭೂಮಿ ಹಾನಿಯಾಗಿದೆ. ಮಳೆಯಿಂದ 1,374 ತೋಟಗಾರಿಕೆ ಪ್ರದೇಶ ಹಾನಿಯಾಗಿದೆ. 5092 ಜನರು ಆಶ್ರಯ ಶಿಬಿರಗಳಲ್ಲಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ 255 ಕಿಲೋ ಮೀಟರ್ ರಸ್ತೆಗಳು ಡ್ಯಾಮೇಜ್ ಆಗಿವೆ. ಮಳೆಯಿಂದ 430 ಮನೆಗಳು ಸಂಪೂರ್ಣ ಹಾನಿಯಾಗಿವೆ. ಕಡಿಮೆ ಹಾನಿಯಾದ ಮನೆಗಳಿಗೆ 50 ಸಾವಿರ ರೂ. ಪರಿಹಾರ ನೀಡಲಾಗುವುದು. ಮನೆ ಹೆಚ್ಚು ಹಾನಿಯಾಗಿದ್ದರೆ 90 ಸಾವಿರ ನೀಡಬೇಕು ಎಂದು ಸೂಚಿಸಿದ್ದೇನೆ.
ಬೆಂಗಳೂರಿನಲ್ಲಿ ಶೇ.100ರಿಂದ 150ರಷ್ಟು ಮಳೆಯಾಗಿದೆ. ಮಹದೇವಪುರ, ಬೊಮ್ಮನಹಳ್ಳಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ಬೆಂಗಳೂರು ನಗರದ ದಕ್ಷಿಣ ವಲಯದಲ್ಲಿ ಹೆಚ್ಚು ಮಳೆಯಾಗಿದೆ. ಎಲ್ಲಾ ದೊಡ್ಡ ಕೆರೆಗಳಿಗೆ ಸ್ಲೀವ್ಸ್ ಗೇಟ್ ನಿರ್ಮಾಣ ಮಾಡಲು ನಿರ್ಧರಿಸಲಾಗಿದೆ. ಮಳೆ ಸಂದರ್ಭದಲ್ಲಿ ಬೆಂಗಳೂರಿನ ಜನತೆ ಸಹಕರಿಸಬೇಕು. ಮಳೆಯಿಂದ ಆಗುತ್ತಿರುವ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸ್ತೇವೆ. ಮಳೆ ನಿಂತ ಕೂಡಲೇ ಮೂಲಸೌಕರ್ಯ ಸರಿಪಡಿಸುತ್ತೇವೆ. ಹೀಗಾಗಿ ಈ ದೊಡ್ಡ ಸವಾಲನ್ನು ಎಲ್ಲರೂ ಒಟ್ಟಾಗಿ ಎದುರಿಸೋಣ ನಮ್ಮ ಅಧಿಕಾರಿಗಳು ಯುದ್ದೋಪಾಧಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದರು.
ನಾಳೆ ರಾತ್ರಿ ಕೇಂದ್ರ ಅಧ್ಯಯನ ತಂಡ ಬೆಂಗಳೂರಿಗೆ ಆಗಮಿಸಲಿದೆ. ನಾಳೆ ಕೇಂದ್ರ ಅಧ್ಯಯನ ತಂಡವನ್ನು ಭೇಟಿಯಾಗುತ್ತಿದ್ದೇನೆ. ರಾಜ್ಯಾದ್ಯಂತ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುತ್ತೇನೆ. ಬಳಿಕ ಕೇಂದ್ರ ಅಧ್ಯಯನ ತಂಡದ ಜೊತೆ ಸಭೆ ನಡೆಸುತ್ತೇನೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಸಚಿವರಾದ ವಿ.ಸೋಮಣ್ಣ, ಆರ್.ಅಶೋಕ್, ಭೈರತಿ ಬಸವರಾಜ್ ಮತ್ತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಭಾಗಿಯಾಗಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 9:55 pm, Mon, 5 September 22