ಬೆಂಗಳೂರು: ಕರ್ನಾಟಕದಲ್ಲಿ ಕೊಂಚ ಕಡಿಮೆಯಾಗಿದ್ದ ಮಳೆ (Rainfall) ಮತ್ತೆ ಚುರುಕುಗೊಂಡಿದೆ. ಉತ್ತರ ಒಳನಾಡಿನಲ್ಲಿ ವರುಣನ ಆರ್ಭಟ ಹೆಚ್ಚಾಗಿದೆ. ಬೀದರ್ (Bidar Rain) ಜಿಲ್ಲೆಯಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಬೆಂಗಳೂರಿನಲ್ಲಿ (Bangalore Rains) ಮುಂದಿನ 2 ದಿನಗಳ ಕಾಲ ಗುಡುಗು, ಸಿಡಿಲು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ತಿಳಿಸಿದ್ದು, ಹಳದಿ ಅಲರ್ಟ್ (Yellow Alert) ಮುನ್ಸೂಚನೆ ನೀಡಿದೆ.
ಬೀದರ್ ಜಿಲ್ಲೆಯಲ್ಲಿ ನಿರಂತರ ಮಳೆ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಇಂದು ಅಂಗನವಾಡಿ, 1ರಿಂದ 5ನೇ ತರಗತಿವರೆಗಿನ ಶಾಲೆಗೆ ರಜೆ ನೀಡಲಾಗಿದೆ. ಬೀದರ್ ಜಿಲ್ಲೆಯಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಅವಾಂತರ ಸೃಷ್ಟಿಯಾಗಿದೆ. ಬೀದರ್ನ ಓಂನಗರ ಬಡಾವಣೆಯ ರಸ್ತೆಯಲ್ಲಿ ನೀರು ನಿಂತಿದೆ. ಬಡಾವಣೆಯ ಜನರು ಮನೆಯಿಂದ ಹೊರಬಾರದ ಸ್ಥಿತಿ ಎದುರಾಗಿದೆ. 10ಕ್ಕೂ ಹೆಚ್ಚು ಜನ ಮನೆಯಲ್ಲಿಯೇ ಲಾಕ್ ಆಗಿದ್ದಾರೆ. ಬಡಾವಣೆಯ ತಗ್ಗು ಪ್ರದೇಶದ ನಾಲ್ಕೈದು ಮನೆಗಳಿಗೆ ನೀರು ನುಗ್ಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಅಬ್ಬರಿಸಿದ ಮಳೆಗೆ ನದಿಗಳು ಉಕ್ಕಿ ಹರಿದು ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಸದ್ಯ ಮಳೆಯ ಪ್ರಮಾಣ ಕಡಿಮೆ ಆಗಿದ್ದರಿಂದ ನೆರೆಯೂ ಇಳಿದಿದೆ. ಆದರೆ, ಮಳೆಗಾಲದಲ್ಲಿ ಪ್ರತಿ ಬಾರಿಯೂ ನೆರೆಹಾನಿ ಅನುಭವಿಸುತ್ತಿರುವುದಕ್ಕೆ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊನ್ನಾವರ, ಯಲ್ಲಾಪುರ, ಕಾರವಾರ, ಕುಮಟಾ ತಾಲೂಕುಗಳಲ್ಲಿ ಹೆಚ್ಚು ಹಾನಿ ಉಂಟಾಗಿದೆ. ಕರಾವಳಿ ಹಾಗೂ ಘಟ್ಟದ ಮೇಲೆ ಸುರಿದ ಧಾರಾಕಾರ ಮಳೆಗೆ ಕುಮಟಾ ತಾಲೂಕಿನ ಅಘನಾಶಿನಿ, ಹೊನ್ನಾವರ ತಾಲೂಕಿನ ಬಡಗಣಿ ನದಿ, ಗುಂಡಬಾಳ ಹೊಳೆ ಹಾಗೂ ಶರಾವತಿ ನದಿ ಮೈದುಂಬಿ ಹರಿಯುತ್ತಿವೆ.
ಉತ್ತರ ಕನ್ನಡದಲ್ಲಿ ಕಳೆದ ಜೂನ್ 1ರಿಂದ ಇದುವರೆಗೆ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯಾದ್ಯಂತ ಸುಮಾರು 24 ಮನೆಗಳು ಸಂಪೂರ್ಣ ಹಾನಿಯಾಗಿದ್ದು, 94 ಮನೆಗಳಿಗೆ ಗಂಭೀರ ಹಾನಿ ಉಂಟಾಗಿದೆ. ಉಳಿದಂತೆ ಸುಮಾರು 508 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ. ಅಲ್ಲದೆ, ಮಳೆ ಕಾರಣದಿಂದ ಹಳಿಯಾಳದಲ್ಲಿ 3, ಹೊನ್ನಾವರ ಹಾಗೂ ಸಿದ್ದಾಪುರ ತಾಲೂಕಿನಲ್ಲಿ ತಲಾ ಒಬ್ಬರು ಸೇರಿ ಜಿಲ್ಲೆಯಲ್ಲಿ 5 ಮಂದಿ ಸಾವನ್ನಪ್ಪಿದ್ದಾರೆ.
ಕರ್ನಾಟಕ ಮಾತ್ರವಲ್ಲದೆ ಮಧ್ಯಪ್ರದೇಶ, ಮಹಾರಾಷ್ಟ್ರ, ಅಸ್ಸಾಂ, ಮೇಘಾಲಯ, ಪಶ್ಚಿಮ ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ. ಛತ್ತೀಸ್‌ಗಢ, ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಗುಜರಾತ್, ಬಿಹಾರ, ಜಾರ್ಖಂಡ್, ಸಿಕ್ಕಿಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ, ಅಂಡಮಾನ್ ಮತ್ತು ನಿಕೋಬಾರ್, ತೆಲಂಗಾಣ, ಗೋವಾ, ಕೇರಳದಲ್ಲಿ ಸಾಕಷ್ಟು ವ್ಯಾಪಕ ಮಳೆಯಾಗುವ ಸಾಧ್ಯತೆ ಇದೆ. ಆಂಧ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ತುಂತುರು ಮಳೆಯಾಗುವ ಸಾಧ್ಯತೆ ಇದೆ. ಲಡಾಖ್ ಮತ್ತು ಲಕ್ಷದ್ವೀಪದಲ್ಲಿ ಕೂಡ ಮಳೆಯಾಗುವ ಸಾಧ್ಯತೆಯಿದೆ.