Karnataka Rains: ರಾಜ್ಯದಲ್ಲಿ ಇನ್ನೂ 5 ದಿನಗಳ ಕಾಲ ಭಾರಿ ಮಳೆ; ಕರಾವಳಿ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್

ಮುಂದಿನ ವಾರಗಳಲ್ಲಿ ‌ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Follow us
Ganapathi Sharma
|

Updated on:Jun 20, 2023 | 7:13 PM

ಬೆಂಗಳೂರು: ಕರ್ನಾಟಕದ ಹಲವೆಡೆ ಇನ್ನೂ ಐದು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (IMD) ಮಂಗಳವಾರ ಮುನ್ಸೂಚನೆ ನೀಡಿದ್ದು, ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ (Yellow Alert) ಘೋಷಿಸಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದು, ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಎಚ್ಚರಿಕೆ ನೀಡಿದೆ. ಬೆಂಗಳೂರು ನಗರದಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ವರ್ಷಧಾರೆ ಸುರಿದಿದ್ದು, 1 ಸೆಂಟಿಮೀಟರ್​​ನಷ್ಟು ಮಳೆಯಾಗಿದೆ.

ಬೆಂಗಳೂರು ಮಾತ್ರವಲ್ಲದೆ ಹಾಸನ, ಶಿವಮೊಗ್ಗ, ಚಿಕ್ಕಮಗಳೂರು, ಚಾಮರಾಜನಗರಗಳಲ್ಲಿಯೂ ಮಂಗಳವಾರ ಮಳೆಯಾಗಿದೆ. ಹಾಸನದಲ್ಲಿ ಧಾರಾಕಾರ ಮಳೆಯಿಂದ 25ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿದೆ.ಮಳೆ ನೀರು ನುಗ್ಗಿದ್ದರಿಂದ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಲಕ್ಷಾಂತರ ರೂಪಾಯಿ ಮೌಲ್ಯದ ಅನೇಕ ವಸ್ತುಗಳು ನಾಶವಾಗಿವೆ. ಮನೆಗೆ ನುಗ್ಗಿದ ನೀರು ಹೊರ ಹಾಕಲು ಜನ ಹರಸಾಹಸಪಡುತ್ತಿದ್ದು, ಅಗ್ನಿಶಾಮಕ ಸಿಬ್ಬಂದಿ ಕೂಡ ನೆರವಿಗೆ ಧಾವಿಸಿದ್ದಾರೆ.

ಚಿಕ್ಕಮಗಳೂರು ನಗರ, ಸಖರಾಯಪಟ್ಟಣ, ಉದ್ದೇಬೋರಹಳ್ಳಿಯಲ್ಲಿ ಭಾರೀ ಮಳೆಯಾಗಿದೆ. ಚಾಮರಾಜನಗರದಲ್ಲಿ ಸುಮಾರು ಒಂದು ತಾಸು ಮಳೆ ಸುರಿದಿದೆ.

ಹಾಸನದಲ್ಲಿ ಚರಂಡಿಗೆ ಬಿದ್ದಿದ್ದ ವ್ಯಕ್ತಿಯ ರಕ್ಷಣೆ

ಹಾಸನದಲ್ಲಿ ಮಳೆ ನೀರಿನಲ್ಲಿ ಸಿಲುಕಿದ್ದ ವ್ಯಕ್ತಿಯ ರಕ್ಷಣೆ ಮಾಡಲಾಗಿದೆ. ಹಾಸನದ ಕುವೆಂಪುನಗರ ಬಡಾವಣೆಯಲ್ಲಿ ಧಾರಾಕಾರ ಮಳೆಯಿಂದಾಗಿ ಜಲಾವೃತಗೊಂಡಿದ್ದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ವ್ಯಕ್ತಿಯೊಬ್ಬರು ಚರಂಡಿಗೆ ಬಿದ್ದಿದ್ದರು. ಮಳೆ ನೀರಲ್ಲಿ ಮುಳುಗ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಶಿವಮೊಗ್ಗ ನಗರದಲ್ಲಿ ಧಾರಾಕಾರ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಹೊಸ ಬೈಪಾಸ್ ರಸ್ತೆ ಬಳಿ ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ. ರಾಜಕಾಲುವೆ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದೆ. ಸಮುದ್ರ ಮಟ್ಟದಿಂದ 900 ಮೀಟರ್ ಎತ್ತರದಲ್ಲಿ ತಮಿಳುನಾಡಿನ ಭಾಗದಲ್ಲಿ ಸುಳಿಗಾಳಿ ಸೃಷ್ಟಿಯಾಗಿದ್ದರಿಂದ ಹಾಗೂ ಬಿಪೋರ್​​ಜಾಯ್ ಪರಿಣಾಮದಿಂದ ಮಳೆಯಾಗಿದೆ. ಕೇರಳ ಹಾಗೂ ಕರಾವಳಿ ಭಾಗದಲ್ಲಿ ಸುಳಿಗಾಳಿ ಇದ್ದು ಹೀಗಾಗಿ ಮಳೆಯಾಗಲಿದೆ. ಬುಧವಾರದಿಂದ ರಾಜ್ಯದ ಹಲವು‌ ಕಡೆ ಹಗುರ ಮಳೆಯಾಗುವ ಸಾಧ್ಯತೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಜೂನ್ 24ರಂದು ಕರಾವಳಿಯಲ್ಲಿ ಬಾರಿ‌ ಮಳೆಯಾಗುವ ಸಾಧ್ಯತೆ ಇದೆ. ಹೀಗಾಗಿ ಯೆಲ್ಲೋ ಆಲರ್ಟ್ ಘೋಷಿಸಿದ್ದೇವೆ. ವಾಡಿಕೆ ಮಳೆ ಶುರುವಾಗಿತ್ತು. ಅಷ್ಟರಲ್ಲಿ ಬಿಪೋರ್​​ಜಾಯ್ ಚಂಡಮಾರುತದಿಂದಾಗಿ ಸ್ವಲ್ಪ ವಿಳಂಬವಾಯಿತು. ಚಂಡಮಾರುತ ಕರಾವಳಿಯನ್ನು ದಾಟಿದೆ ಹಾಗೂ ದುರ್ಬಲವಾಗಿದೆ. ಮುಂದಿನ ವಾರಗಳಲ್ಲಿ ‌ರಾಜ್ಯದಲ್ಲಿ ಹಲವು ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ: Karnataka Rain: ರಾಜ್ಯದಲ್ಲಿ ಮುಂಗಾರು ಚುರುಕು; ಬೆಂಗಳೂರಲ್ಲಿ ರಾತ್ರಿಯಿಂದಲೇ ವರಣನ ಆರ್ಭಟ ಜೋರು

ಬೆಂಗಳೂರಿನಲ್ಲಿ ಮಂಗಳವಾರ ಬೆಳಗ್ಗೆಯಿಂದಲೇ ಮೋಡಕವಿದ ವಾತಾವರಣವಿದ್ದು, ಆರಂಭದಲ್ಲಿ ತುಂತುರು ಮಳೆಯಾಗಿತ್ತು. ನಂರತರ ಜೋರಾದ ಮಳೆ ಮಧ್ಯಾಹ್ನದ ವೇಳೆಗೆ ತುಸು ಕಡಿಮೆಯಾಗಿತ್ತು. ಸಂಜೆಯ ವೇಳೆಗೆ ಬಿಡುವು ದೊರೆತಿದ್ದರೂ ಮತ್ತೆ ರಾತ್ರಿ ಹಾಗೂ ನಾಳೆ ಮಳೆಯಾಗುವ ನಿರೀಕ್ಷೆ ಇದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 5:21 pm, Tue, 20 June 23