Karnataka Rain: ಸುರಿದ ಧಾರಾಕಾರ ಮಳೆಗೆ ಅಲ್ಲಲ್ಲಿ ಅವಾಂತರಗಳು ಸೃಷ್ಟಿ, ಪರದಾಡಿದ ಜನರು

ರಾಜ್ಯದ ಹಲವೆಡೆ ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಅವಾಂತರಗಳು ಸೃಷ್ಟಿಯಾಗಿದ್ದು, ತುಂಬು ಗರ್ಭಿಣಿಯೊಬ್ಬರು ಆಸ್ಪತ್ರೆಗೆ ದಾಖಲಾಗಲು ಪರದಾಡುವಂತಾಯಿತು. ಕೆಲವೆಡೆ ಕರೆಗಳು ಭರ್ತಿಗೊಂಡು ನೀರು ಹೊರ ಹರಿಯುತ್ತಿರುವುದರಿಂದ ಸಂಚಾರಕ್ಕೂ ಅಡಚಣೆ ಉಂಟಾಗಿದೆ.

Karnataka Rain: ಸುರಿದ ಧಾರಾಕಾರ ಮಳೆಗೆ ಅಲ್ಲಲ್ಲಿ ಅವಾಂತರಗಳು ಸೃಷ್ಟಿ, ಪರದಾಡಿದ ಜನರು
ಮಳೆ ಅವಾಂತರ
Edited By: Rakesh Nayak Manchi

Updated on: Oct 14, 2022 | 11:51 AM

ಕರ್ನಾಟಕದಲ್ಲಿ ಇನ್ನೆರಡು ದಿನ ಭಾರೀ ಮಳೆ ಮುಂದುವರೆಯುವ ನಿರೀಕ್ಷೆಯಿದೆ. ಕರ್ನಾಟಕದ (Karnataka Rain) ಹಲವು ಜಿಲ್ಲೆಗಳಲ್ಲಿ ಅ. 15ರವರೆಗೆ ಭಾರೀ ಮಳೆಯಾಗಲಿದೆ. ಇಂದು ಕರ್ನಾಟಕದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳಭಾಗಕ್ಕೆ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಲಾಗಿದೆ. ನಿನ್ನೆ ಸುರಿದ ಧಾರಾಕಾರ ಮಳೆಗೆ ಚಿಕ್ಕಬಳ್ಳಾಪುರ, ಚಾಮರಾಜನಗರ ಸೇರಿದಂತೆ ಕೆಲವೊಂದು ಜಿಲ್ಲೆಗಳ ವಿವಿಧ ಪ್ರದೇಶಗಲ್ಲಿ ಅವಾಂತರಗಳು ಸೃಷ್ಟಿಯಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ಮನೆಗಳಿಗೆ ನೀರು ನುಗ್ಗಿ ಕುಟುಂಬಗಳು ಪರದಾಡುವಂತಾಗಿದ್ದು, ಮನೆಯೊಳಗೆ ಸಿಲುಕಿದವರನ್ನು ಅಗ್ನಿಶಾಮಕ ದಳದ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಭಾರಿ ಮಳೆಗೆ ರಸ್ತೆಗಳು ಮುಳುಗಿ ಸಂಪರ್ಕ ಕಟ್

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಭಾರೀ ಮಳೆಯಾಗಿದ್ದು, ಗುಡಿಬಂಡೆ ಪಟ್ಟಣದಲ್ಲಿ ಹಾಗೂ ಸುತ್ತಮುತ್ತಲಿನಲ್ಲಿ ಮಳೆ ಅಬ್ಬರ ಜೋರಾಗಿದೆ. ಪರಿಣಾಮವಾಗಿ ಅಮಾನಿ ಭೈರಸಾಗರ ಕೆರೆ ತುಂಬಿ ಹರಿಯುತ್ತಿದ್ದು, ರಸ್ತೆಗಳು ನೀರಿನಿಂದ ಆವೃತವಾಗಿವೆ. ಪೇರೇಸಂದ್ರ-ಗುಡಿಬಂಡೆ ಮಾರ್ಗದ ರಸ್ತೆ ಸಂಚಾರ ಬಂದ್ ಆಗಿದ್ದು, ಗುಡಿಬಂಡೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳೆಲ್ಲ ಮತ್ತು ಗುಡಿಬಂಡೆ- ಹಂಪಸಂದ್ರ-ಬಾಗೇಪಲ್ಲಿ ಮಾರ್ಗ, ಗುಡಿಬಂಡೆ-ಲಕ್ಕೇನಹಳ್ಳಿ ಗ್ರಾಮದ ರಸ್ತೆಗಳೂ ಬಂದ್ ಆಗಿವೆ. ಸದ್ಯ ಮುಂಜಾಗ್ರತಾ ಕ್ರಮವಾಗಿ ಬಸ್​ಗಳ ಸಂಚಾರಗಳನ್ನು ಸ್ಥಗಿತಗೊಳಿಸಲಾಗಿದೆ.

ಸಂಕಷ್ಟದಲ್ಲಿಯೂ ಹಾಸ್ಯ ಮಾಡಿದ ರೈತರ ವಿಡಿಯೋ ವೈರಲ್

ಗದಗ: ಸುರಿಯುತ್ತಿರುವ ಮಳೆಯಿಂದಾಗಿ ರೈತರು ತಾವು ಬೆಳೆದ ಬೆಳೆಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದಾರೆ. ಇಂತಹ ಸಂಕಷ್ಟದ ನಡುವೆಯೂ ಹಾಸ್ಯದ ಮೂಲಕ ರೈತರು ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಸಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ನಿರಂತರ ಮಳೆಯಿಂದ ಬೆಣ್ಣೆಹಳ್ಳ ಉಕ್ಕಿ ಹರಿಯುತ್ತಿದ್ದು, ಜಿಲ್ಲೆಯ ರೋಣ ಹಾಗೂ ನರಗುಂದ ತಾಲೂಕಿನ 16 ಗ್ರಾಮಗಳಿಗೆ ಕಂಟಕ ಎದುರಾಗಿದೆ. ಜಲಾವೃತದಿಂದಾಗಿ ರೈತರು ಬೆಳೆದ ಬೆಳೆಗಳು ನಾಶಗೊಂಡಿವೆ. ಇದರಿಂದ ಬೇಸತ್ತ ಅಸೂಟಿ ಗ್ರಾಮದ ರೈತರು ಹಾಸ್ಯದ ವಿಡಿಯೋ ಮಾಡಿ ಹರಿಬಿಟ್ಟಿದ್ದು, ಬುಡ್ಡಾ ಅತ್ತಾರ ಎನ್ನುವ ರೈತ ಆತ್ಮಹತ್ಯೆಗೆ ಯತ್ನಿಸುತ್ತೇನೆ ಎಂದು ಬಿಂಬಿಸಲಾಗಿದೆ. ಅಸೂಟಿ ಗ್ರಾಮದ ವೀರುಪಾಕ್ಷಪ್ಪ ತಳವಾರ, ನೀರಿನಲ್ಲಿ ಮುಳಗಿದ ರೈತನಾಗಿದ್ದಾನೆ. ಇದರೊಂದಿಗೆ ಎಲ್ಲ ಬೆಳೆ ನಾಶವಾಗಿದೆ ಅಂತ ಆಕ್ರೋಶವೂ ಹೊರಹಾಕಿದ್ದಾರೆ. ಜನಪ್ರತಿನಿಧಿಗಳು, ಅಧಿಕಾರಿಗಳ ಬೇಜವಾಬ್ದಾರಿತನದ ಬಗ್ಗೆ ಗೋಳು ತೋಡಿಕೊಂಡಿದ್ದಾರೆ.

ಮಳೆಗೆ ತುಂಬಿ ಹರಿಯುತ್ತಿರೊ ಹಳ್ಳ ಕೊಳ್ಳಗಳು, ಗರ್ಭಿಣಿ ಪರದಾಟ

ರಾಯಚೂರು: ಜಿಲ್ಲೆಯಲ್ಲಿ ನಿರಂತರ ಮಳೆಗೆ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದು, ರಸ್ತೆ ತುಂಬೆಲ್ಲಾ ನೀರು ಹರಿದು ಹೋಗುತ್ತಿದೆ. ಪರಿಣಾಮವಾಗಿ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿ ತುಂಬು ಗರ್ಭಿಣಿ ಆಸ್ಪತ್ರೆಗೆ ಹೋಗಲು ಪರದಾಡುವಂತಾಯಿತು. ಕೆ ತುಪ್ಪದೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಸ್ತೆ ತುಂಬ ನೀರು ಸಂಗ್ರಹವಾಗಿದ್ದರಿಂದ ಆ್ಯಂಬುಲೆನ್ಸ್ ಗರ್ಭಿಣಿ​ ಯಲ್ಲಮ್ಮನ ಮನೆಗೆ ಬರಲು ಸಾಧ್ಯವಾಗಿಲ್ಲ. ಪರಿಣಾಮವಾಗಿ ಸುಮಾರು 4 ಕಿಮೀ ದೂರದವರೆಗೆ ಎತ್ತಿನ ಬಂಡಿಯಲ್ಲಿ ಸಾಗಿಸಿ ಬಳಿಕ ಆ್ಯಂಬುಲೆನ್ಸ್​ನಲ್ಲಿ ಗರ್ಭಿಣಿ ಯಲ್ಲಮ್ಮ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಇದಾದ ಕೆಲವೇ ಕ್ಷಣಗಳಲ್ಲಿ ಯಲ್ಲಮ್ಮ ಹೆಣ್ಣು ಮಗುವಿಗೆ ಜನ್ಮ ನೀಡಿದರು.

ನೀರಲ್ಲಿ ಕೊಚ್ಚಿ ಹೋದ ಕಾರು

ತುಮಕೂರು: ಜಿಲ್ಲೆಯಾದ್ಯಂತ ಭಾರಿ ಮಳೆ ಹಿನ್ನೆಲೆ ಕೊರಟಗೆರೆ ತಾಲೂಕಿನ ದಾಸಲಕುಂಟೆ ಕೆರೆ ಕೋಡಿ ಹೊಡೆದಿದ್ದು, ಈ ನೀರಲ್ಲಿ ಕಾರು ಕೊಚ್ಚಿ ಹೋಗಿದೆ. ಭಾರಿ ಮಳೆಯಿಂದ ಕರೆ ನೀರು ಉಕ್ಕಿ ಹರಿಯುತ್ತಿರುವ ಪರಿಣಾಮ ತುಮಕೂರು-ತೋವಿನಕೆರೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಅದಾಗ್ಯೂ ನೀರಿನ ರಭಸಕ್ಕೆ ಟ್ರೈಬರ್ ಕಾರು ಕೊಚ್ಚಿ ಹೋಗಿದ್ದು, ಕಾರು ಚಾಲಕನನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಮನೆಗಳಿಗೆ ನೀರು ನುಗ್ಗಿ ಜನರ ಪರದಾಟ

ಚಾಮರಾಜನಗರ: ಕಳೆದ ರಾತ್ರಿ ಸುರಿದ ಮಳೆಯಿಂದ ನಗರದ ಸೋಮಣ್ಣ ಲೇಔಟ್​ ಜಲಾವೃತಗೊಂಡು ಅವಾಂತರ ಸೃಷ್ಟಿಯಾಗಿದ್ದು, ಮನೆಗಳಿಗೆ ನೀರು ನುಗ್ಗಿ ರಾತ್ರಿಯಿಡೀ ಜನರ ಪರದಾಡುವಂತಾಯಿತು. ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯಿಂದ ಹೊರಬರಲು ಸಾಧ್ಯವಾಗಿಲ್ಲ. ಹೀಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಗಳು ಜನರನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

TV9 Web

TV9 Kannada

Read More
Loading...
Unable to load recommendations.
Follow Us