
ಹುಬ್ಬಳ್ಳಿ, ಜೂನ್ 28: ಹಣ ಕೊಟ್ಟವರಿಗೆ ಮಾತ್ರ ಸರ್ಕಾರದಿಂದ ಮನೆ ದೊರೆಯುತ್ತದೆ ಎಂಬ ಆರೋಪ ರಾಜ್ಯದಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ. ಶಾಸಕ ಬಿ.ಆರ್ ಪಾಟೀಲ್ (BR Patil) ಆಡಿರುವ ಹೇಳಿಕೆಯನ್ನಿಟ್ಟುಕೊಂಡು ಬಿಜೆಪಿ, ಜೆಡಿಎಸ್ ನಾಯಕರು ಕಾಂಗ್ರೆಸ್ ಸರ್ಕಾರದ ಮೇಲೆ ಮುಗಿಬೀಳುತ್ತಿದ್ದಾರೆ. ವಸತಿ ಇಲಾಖೆಯ ಸ್ಲಂ ಬೋರ್ಡ್ನಿಂದ (Slum Board) ರಾಜ್ಯದಲ್ಲಿ 42 ಸಾವಿರ ಮನೆಗಳು (Houses) ನಿರ್ಮಾಣವಾಗಿವೆ. ಆದರೆ, ಅವುಗಳನ್ನು ಫಲಾನುಭವಿಗಳಿಗೆ ಹಂಚಿಕೆ ಮಾಡುತ್ತಿಲ್ಲ. ಇದಕ್ಕೆ ಕಾರಣ ಮುಖ್ಯಮಂತ್ರಿಗಳು ಮತ್ತು ಎಐಸಿಸಿ ಅಧ್ಯಕ್ಷರು ಎಂಬ ಆರೋಪ ಕೇಳಿಬಂದಿದೆ.
ಹುಬ್ಬಳ್ಳಿ ನಗರದ ಹೊರವಲಯದಲ್ಲಿರುವ ಮಂಟೂರು ರಸ್ತೆಯಲ್ಲಿ 1500ಕ್ಕೂ ಹೆಚ್ಚು ಮನೆಗಳನ್ನು ಜಿ ಪ್ಲಸ್ 3 ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಸ್ಲಂ ಬೋರ್ಡ್ ವತಿಯಿಂದ ಈ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಸದ್ಯ, ಸ್ಲಂ ಬೋರ್ಡ್ ಅಧ್ಯಕ್ಷರಾಗಿರುವ ಹುಬ್ಬಳ್ಳಿ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅವರು ತಮ್ಮ ಸ್ವ ಕ್ಷೇತ್ರದಲ್ಲಿಯೇ ಬಡವರಿಗೆ ಅನಕೂಲವಾಗಲಿ ಅಂತ ಮುತುವರ್ಜಿ ವಹಿಸಿ ಮನೆಗಳನ್ನು ನಿರ್ಮಾಣ ಮಾಡಿಸಿದ್ದಾರೆ.
2013 ರಿಂದ 2018 ರ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರ ಕಾಲದಲ್ಲಿ ಈ ಮನೆಗಳು ಮಂಜೂರಾಗಿದ್ದವು. ಆದರೆ, ಆಮೆಗತಿಯಲ್ಲಿ ಕಾಮಗಾರಿ ನಡೆದಿದ್ದರಿಂದ ಮನೆಗಳ ನಿರ್ಮಾಣ ಕಾರ್ಯ ಮುಗಿದಿರಲಿಲ್ಲ. ಆದರೆ, ಇದೀಗ ಮನೆಗಳ ನಿರ್ಮಾಣ ಕಾರ್ಯ ಮುಗಿದರು ಕೂಡ, ಫಲಾನುಭವಿಗಳಿಗೆ ಹಂಚಿಕೆ ಆಗುತ್ತಿಲ್ಲ. ಇದಕ್ಕೆ ಕಾರಣ ಸಿಎಂ ಮತ್ತು ಎಐಸಿಸಿ ಅಧ್ಯಕ್ಷರಂತೆ.
ಕೇವಲ ಹುಬ್ಬಳ್ಳಿ ಮಾತ್ರವಲ್ಲ, ರಾಜ್ಯದಲ್ಲಿ ವಿವಿಧಡೆ ಸ್ಲಂ ಬೋರ್ಡ್ನಿಂದ 42,345 ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಅಂದುಕೊಂಡತೆ ಎಲ್ಲವೂ ನಡೆದಿದ್ದರೇ, ಕಳೆದ ಎಪ್ರಿಲ್ ತಿಂಗಳಲ್ಲಿಯೇ ಈ ಮನೆಗಳ ಉದ್ಘಾಟನೆಯಾಗಿ, ಇಷ್ಟೊತ್ತಿಗಾಗಲೇ ಫಲಾನುಭವಿಗಳು ಈ ಮನೆಯಲ್ಲಿ ಇರುತ್ತಿದ್ದರು. ಆದರೆ, ಇನ್ನೂವರೆಗೂ ಈ ಮನೆಗಳಿಗೆ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.
ಕಳೆದ ಎಪ್ರಿಲ್ ತಿಂಗಳಲ್ಲಿ ದೊಡ್ಡ ಕಾರ್ಯಕ್ರಮ ಮಾಡಲು ವಸತಿ ಸಚಿವ ಜಮೀರ್ ಅಹ್ಮದ್ ಮುಂದಾಗಿದ್ದರು. ಆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಅದ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕರೆಸಿ, ಅವರಿಂದ ಉದ್ಘಾಟನೆ ಮಾಡಿಸುವುದು ಸಚಿವ ಜಮೀರ್ ಅಹ್ಮದ್ ಅವರ ಆಶಯವಾಗಿತ್ತು. ಎಪ್ರಿಲ್ 27 ರಂದು ಸಿಎಂ ಸಮಯವನ್ನು ಕೂಡ ನೀಡಿದ್ದರಂತೆ. ಆದರೆ, ಎಐಸಿಸಿ ಅಧ್ಯಕ್ಷರ ಸಮಯ ಸಿಗದೇ ಇದ್ದಿದ್ದರಿಂದ ಅದು ಮುಂದಕ್ಕೆ ಹೋಗಿತ್ತು.
ಮೇ ಮೊದಲ ವಾರದಲ್ಲಿಯಾದರೂ ಕೂಡಾ ಕಾರ್ಯಕ್ರಮ ಮಾಡಲು ಜಮೀರ್ ಅಹ್ಮದ್ ಸಿದ್ದತೆ ಮಾಡಿಕೊಂಡಿದ್ದರು. ಆದರೆ, ಆಗ ಕೂಡಾ ಇಬ್ಬರ ನಾಯಕರ ಸಮಯ ಹೊಂದಾಣಿಕೆಯಾಗದೇ ಇದ್ದಿದ್ದರಿಂದ ಅದು ಮತ್ತೆ ಮುಂದಕ್ಕೆ ಹೋಗಿತ್ತು. ಇದೀಗ ಮಳೆಗಾಲ ಆರಂಭವಾಗಿದೆ. ಮಳೆಗಾಲದಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಮಾಡಲು ಕಷ್ಟವಾಗುವುದರಿಂದ, ಮತ್ತೆ ಮನೆಗಳಿಗೆ ಉದ್ಘಾಟನೆ ಭಾಗ್ಯ ಸಿಗುತ್ತಿಲ್ಲ.
ಇದನ್ನೂ ಓದಿ: ಈವರೆಗೆ ಯಾರೂ ಮಾಡದ ದಾಖಲೆ ಬರೆಯಲು ಸಿಎಂ ಸಿದ್ದರಾಮಯ್ಯ ಸಿದ್ಧ!
ಈ ಬಗ್ಗೆ ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಪ್ರತಿಕ್ರಿಯೆ ನೀಡಿದ್ದು, ದೊಡ್ಡ ಕಾರ್ಯಕ್ರಮ ಮಾಡಿ, ಮನೆ ಹಂಚಿಕೆ ಮಾಡಲು ಚಿಂತಿಸಲಾಗಿತ್ತು. ಮಳೆಗಾಲ ಆರಂಭವಾಗಿದ್ದರಿಂದ ಸ್ವಲ್ಪ ತಡವಾಗಿದೆ. ಆದಷ್ಟು ಬೇಗನೆ ಮನೆಗಳನ್ನು ಉದ್ಘಾಟನೆ ಮಾಡಿ, ಫಲಾನುಭವಿಗಳಿಗೆ ಹಂಚಿಕೆ ಮಾಡುವುದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ಬಡವರಿಗಾಗಿಯೇ ಮನೆಗಳು ನಿರ್ಮಾಣವಾದರೂ, ವಾಸಿಸದಂತಾಗಿದೆ. ಆದಷ್ಟು ಬೇಗನೆ ಸಿಎಂ ಮತ್ತು ಎಐಸಿಸಿ ಅಧ್ಯಕ್ಷರು ಸಮಯವನ್ನು ನೀಡಿದರೇ, ಮನೆಗಳ ಉದ್ಘಾಟನೆಯಾಗುತ್ತವೆ. ಬಡವರಿಗೆ ಸೂರು ಸಿಗುತ್ತದೆ.
Published On - 7:03 pm, Sat, 28 June 25