AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆ: ಸಿಎಂ ರಾಜಕೀಯ ಸಲಹೆಗಾರ ಬಿಆರ್ ಪಾಟೀಲ್ ರಾಜೀನಾಮೆ

ಕರ್ನಾಟಕ ಕಾಂಗ್ರೆಸ್‌ ಸರ್ಕಾರದಲ್ಲಿ ಸಚಿವ ಸ್ಥಾನಮಾನ ಸಿಗಲಿಲ್ಲ ಎಂಬ ಕಾರಣಕ್ಕೆ ಬೇಸರಗೊಂಡಿದ್ದ ಆಳಂದ ಶಾಸಕ ಬಿಆರ್ ಪಾಟೀಲ್ ಅವರಿಗೆ ಸಿಎಂ ರಾಜಕೀಯ ಸಲಹೆಗಾರ ಹುದ್ದೆ ನೀಡಲಾಗಿತ್ತು. ಆದರೂ ಸಹ ಕೆಲ ವಿಚಾರಗಳಿಗೆ ಬಿಆರ್ ಪಾಟೀಲ್​ ಅಸಮಾಧಾನಗೊಂಡಿದ್ದರು. ಇದೀಗ ಬಿಆರ್ ಪಾಟೀಲ್ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕಾಂಗ್ರೆಸ್​​ನಲ್ಲಿ ಮಹತ್ವದ ಬೆಳವಣಿಗೆ: ಸಿಎಂ ರಾಜಕೀಯ ಸಲಹೆಗಾರ ಬಿಆರ್ ಪಾಟೀಲ್ ರಾಜೀನಾಮೆ
ಬಿಆರ್ ಪಾಟೀಲ್
ಪ್ರಸನ್ನ ಗಾಂವ್ಕರ್​
| Updated By: ರಮೇಶ್ ಬಿ. ಜವಳಗೇರಾ|

Updated on:Feb 01, 2025 | 3:19 PM

Share

ಬೆಂಗಳೂರು, (ಫೆಬ್ರವರಿ 01): ಸಿದ್ದರಾಮಯ್ಯ ಸರ್ಕಾರದಲ್ಲಿ ಯಾವುದೇ ಸ್ಥಾನಮಾನ ಸಿಕ್ಕಿಲ್ಲವೆಂದು ಅಸಮಾಧಾನಗೊಂಡಿದ್ದ ಹಿರಿಯ ಶಾಸಕರಿಗೆ ಸಚಿವ ಸ್ಥಾನಮಾನದ ಕೆಲ ಹುದ್ದೆಗಳನ್ನು ನೀಡಲಾಗಿತ್ತು. ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಅವರಿಗೆ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು, ಇದರ ಜತೆಗೆ ಶಾಸಕ ಬಿಆರ್ ಪಾಟೀಲ್​ ಅವರನ್ನು ಸಿಎಂ ರಾಜಕೀಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಆದ್ರೆ, ಇದೀಗ ಏಕಾಏಕಿ ಬಿಆರ್ ಪಾಟೀಲ್ ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದೆ.

ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು ಪಾಟೀಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ರವಾನಿಸಿದ್ದಾರೆ. ಆದ್ರೆ, ಬಿಆರ್ ಪಾಟೀಲ್ ಅವರ ದಿಧೀರ್ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ. ಏಕಾಏಕಿ ರಾಜೀನಾಮೆ ಏಕೆ ನೀಡಿದ್ದಾರೆ ಎನ್ನುವ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ಯತ್ನಾಳ್ ಬಣ ಶಕ್ತಿ ಹೆಚ್ಚಿಸಿಕೊಳ್ಳೋ ಪ್ರಯತ್ನ ಯಶಸ್ವಿ: ರಾಜ್ಯಾಧ್ಯಕ್ಷ ಚುನಾವಣೆ ಲೆಕ್ಕಾಚಾರ

ಪಾಟೀಲ್ ರಾಜೀನಾಮೆಗೆ ಕಾರಣ ಏನು..?

  • ಆಳಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ಬಯಸಿದ್ದರು. ಸಚಿವ ಸ್ಥಾನ ಸಿಗದೇ ಇರುವ ಕಾರಣಕ್ಕಾಗಿ ಹೆಚ್ಚಿನ ಅನುದಾನ ಸಿಗಬಹುದು ಎಂದು ನಿರೀಕ್ಷೆ ಮಾಡಿದ್ದರು. ಆದ್ರೆ, ಕಳೆದ ಬಜೆಟ್‌ನಲ್ಲೇ ಆಳಂದ ಕ್ಷೇತ್ರಕ್ಕೆ ವಿಶೇಷ ಪ್ಯಾಕೇಜ್ ನೀಡದೆ ಇರೋದಕ್ಕೆ ಬೇಸರಗೊಂಡಿದ್ದು, ಈ ಬಾರಿ ರಾಜೀನಾಮೆ ಮೂಲಕ ತಮ್ಮ ಆಕ್ರೋಶ ಹೊರಹಾಕಿದ್ದಾರೆ ಎನ್ನಲಾಗಿದೆ.
  • ಈಗ ರಾಜೀನಾಮೆ ಮೂಲಕ ಒತ್ತಡ ಹಾಕಿ ಮುಂದಿನ ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ನಿರೀಕ್ಷಿಸುತ್ತಿರುವ ಸಾಧ್ಯತೆ.
  • ಇದರ ಜೊತೆಗೆ ಸಿಎಂ ಸಲಹೆಗಾರರಾಗಿ ಆ ಹುದ್ದೆಗೆ ಯಾವುದೇ ಮಹತ್ವ ಕೂಡ ಇಲ್ಲ . ಸಲಹೆಗಾರ ಹುದ್ದೆಯಲ್ಲಿ ಕೇವಲ ನಾಮಕಾವಸ್ಥೆಗಷ್ಟೇ .
  • ಸಾಕಷ್ಟು ಅನುಭವ ಇರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಆರ್ ಪಾಟೀಲ್ ಸಲಹೆಗಳನ್ನ ತೆಗೆದುಕೊಳ್ಳುವ ವ್ಯಕ್ತಿತ್ವವು ಅಲ್ಲ. ರಾಜಿನಾಮೆ ಹಿಂದೆ ಈ ಮುನಿಸು ಕೂಡ ಕಾರಣ ಇರಬಹುದು.

ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ತಮಗೆ ಯಾವುದೇ ಸ್ಥಾನಮಾನವಿಲ್ಲ ಎಂದು ಕೆಲ ಹಿರಿಯ ಶಾಸಕರು ಅಸಮಾಧಾನಗೊಂಡಿದ್ದರು. ಆರ್​​ವಿ ದೇಶಪಾಂಡೆ, ಬಸವರಾಜ್ ರಾಯರೆಡ್ಡಿ ಹಾಗೂ ಬಿಆರ್ ಪಾಟೀಲ್​ ಸಹ ಬೇಸರಗೊಂಡಿದ್ದರು. ಹೀಗಾಗಿ ಬಂಡಾಯ ಎದ್ದಿದ್ದ ಶಾಸಕರಿಗೆ ವಿಶೇಷ ಹುದ್ದೆಗಳ ಸ್ಥಾನ ಮಾನ ನೀಡಲಾಗಿತ್ತು. ಬಸವರಾಜ ರಾಯರೆಡ್ಡಿ ಅವರಿಗೆ ಸಿಎಂ ಆರ್ಥಿಕ ಹುದ್ದೆ, ಬಿಆರ್‌ ಪಾಟೀಲ್‌ ಅವರನ್ನು ಸಿಎಂ ರಾಜಕೀಯ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿತ್ತು. ಹಾಗೇ ಆರ್‌ವಿ ದೇಶಪಾಂಡೆ ಅವರನ್ನು ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು, ಆದ್ರೆ, ಇದೀಗ ಬಿಆರ್ ಪಾಟೀಲ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಈ ಹಿಂದೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದ ಆಳಂದ ಕಾಂಗ್ರೆಸ್‌ ಶಾಸಕ ಮತ್ತೆ ಸ್ವಪಕ್ಷ ಮತ್ತು ಸರ್ಕಾರ ಆಡಳಿತ ವಿರುದ್ಧ ಸಿಡಿದೆದ್ದಿದ್ದರು. ಮುಖ್ಯಮಂತ್ರಿಗಳಿಗೆ ಪತ್ರ ಬರೆದು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರು. ಶಾಸಕ ಬಿ.ಆರ್. ಪಾಟೀಲ್ ಅವರು ಬಹಿರಂಗವಾಗಿಯೇ ಸಚಿವ ಐಟಿ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರ ವಿರುದ್ಧ ಸಿಡಿದೆದ್ದಿದ್ದರು. ಅಲ್ಲದೇ ಈ ಸಂಬಂಧ ನೇರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಅದರಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾಗಿ ತಿಳಿಸಿದ್ದರು.

ಬಿ.ಆರ್‌.ಪಾಟೀಲ್‌ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹಳೆಯ ಸ್ನೇಹಿತ ಹಾಗೂ ಪರಮಾಪ್ತರಲ್ಲಿ ಒಬ್ಬರು. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಅವರಿಗೆ ಪ್ರಿಯಾಂಕ ಖರ್ಗೆ ಹಾಗೂ ಶರಣಪ್ರಕಾಶ್‌ ಪಾಟೀಲ್‌ ಕಲಬುರಗಿ ಜಿಲ್ಲೆಯಿಂದ ಅಡ್ಡಲಾಗಿದ್ದರು. ಹೀಗಾಗಿ ಬಿ.ಆರ್‌.ಪಾಟೀಲ್‌ ಹಲವು ಬಾರಿ ಬಹಿರಂಗವಾಗಿ ಹೇಳಿಕೆಗಳನ್ನು ನೀಡುವ ಮೂಲಕ ಸರ್ಕಾರ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡಿದರು. ಇದೇ ರೀತಿ ಕಾಂಗ್ರೆಸ್‌‍ನಲ್ಲಿ ಬಸವರಾಜರಾಯ ರೆಡ್ಡಿ ಕೂಡ ಹಲವು ಬಾರಿ ಹೇಳಿಕೆಗಳನ್ನು ನೀಡಿ ಗೊಂದಲ ಸೃಷ್ಟಿಸಿದ್ದರು. ಇದೀಗ ಸಿಎಂ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮತ್ತೆ ಸುದ್ದಿಯಾಗಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:31 pm, Sat, 1 February 25