
ಬೆಂಗಳೂರು, ಫೆಬ್ರವರಿ 22: ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಗೆ (Karnataka SSLC Preparatory Exam) ಉತ್ತರ ಪತ್ರಿಕೆಯನ್ನು ಮನೆಯಿಂದಲೇ ತರುವಂತೆ ವಿದ್ಯಾರ್ಥಿಗಳಿಗೆ ಶಿಕ್ಷಣ ಇಲಾಖೆ (Education Department) ಸೂಚಿಸಿದ ವಿಚಾರವಾಗಿ ಪ್ರತಿಪಕ್ಷ ನಾಯಕ ಆರ್ ಅಶೋಕ್ (R Ashoka) ತೀವ್ರ ವಾಗ್ದಾಳಿ ನಡೆಸಿದ್ದಾರೆ. ಉತ್ತರ ಪತ್ರಿಕೆಗಳನ್ನೂ ಕೊಡಲಾಗದ ಬರಗೆಟ್ಟ ದರಿದ್ರ ಸರ್ಕಾರ ವಿದ್ಯಾರ್ಥಿಗಳಿಂದ 50 ರೂ. ವಸೂಲಿ ಮಾಡಿದ್ದೇಕೆ ಎಂದು ಅವರು ಪ್ರಶ್ನಿಸಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಸಂದೇಶ ಪ್ರಕಟಿಸಿ, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
‘ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಪೂರ್ವಸಿದ್ಧತಾ ಪರೀಕ್ಷೆಗೆ ಉತ್ತರ ಪತ್ರಿಕೆಗಳನ್ನೂ ಕೂಡ ಸರಬರಾಜು ಮಾಡಲಾಗದಷ್ಟು ಬರಗೆಟ್ಟು ಹೋಗಿದೆ ಈ ದರಿದ್ರ ಕಾಂಗ್ರೆಸ್ ಸರ್ಕಾರ. ಉತ್ತರ ಪತ್ರಿಕೆಗಳನ್ನ ಕೊಡಲಾಗದ ಮೇಲೆ ವಿದ್ಯಾರ್ಥಿಗಳಿಂದ 50 ರೂಪಾಯಿ ಪರೀಕ್ಷಾ ಶುಲ್ಕವನ್ನ ವಸೂಲಿ ಮಾಡಿದ್ದು ಯಾವ ಪುರುಷಾರ್ಥಕ್ಕಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರೇ? ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಶಿಕ್ಷಣ ಸಚಿವರಿಗೆ ಇಲಾಖೆ ನಡೆಸಲು ಕೈಲಾಗದಿದ್ದರೆ, ಅವರಿಂದ ರಾಜೀನಾಮೆ ಪಡೆದುಕೊಂಡು ಯಾರಾದರೂ ಸಮರ್ಥರಿಗೆ ಶಿಕ್ಷಣ ಇಲಾಖೆ ನೀಡಿ. ಅದು ಬಿಟ್ಟು ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟವಾಡಬೇಡಿ’ ಎಂದು ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಫೆಬ್ರವರಿ 26ರಿಂದ ಮಾರ್ಚ್ 2ರ ತನಕ ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಗಳು ನಡೆಯಲಿವೆ. ಈ ಪರೀಕ್ಷೆಗಳಿಗೆ ಉತ್ತರ ಪತ್ರಿಕೆ ತರುವ ಜವಾಬ್ದಾರಿ ವಿದ್ಯಾರ್ಥಿಗಳದ್ದು ಅಥವಾ ಆಯಾ ಶಾಲೆಗಳದ್ದು ಎಂದು ಶಿಕ್ಷಣ ಇಲಾಖೆ ಹೇಳಿರುವ ಬಗ್ಗೆ ಪತ್ರಿಕೆಯೊಂದು ವರದಿ ಮಾಡಿತ್ತು.
ಪ್ರಶ್ನೆ ಪತ್ರಿಕೆಗೆಂದು ಸರ್ಕಾರ ಈಗಾಗಲೇ 50 ರೂ. ವಸೂಲಿ ಮಾಡಿದೆ. ಇದೀಗ ಉತ್ತರ ಪತ್ರಿಕೆಯನ್ನು ವಿದ್ಯಾರ್ಥಿಗಳೇ ತರಲು ಹೇಳಿರುವುದು ವಿದ್ಯಾರ್ಥಿಗಳ ಹಾಗೂ ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.
ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳೇ ತರಬೇಕೆಂದು ಸೂಚಿಸುವ ಮೂಲಕ ಶಿಕ್ಷಣ ಇಲಾಖೆ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಇದರೊಂದಿಗೆ, ಈಗಾಗಲೇ ಕೆಲವು ಪ್ರಮಾದಗಳನ್ನು ಎಸಗಿರುವ ಇಲಾಖೆ ಪ್ರತಿಪಕ್ಷಗಳ, ವಿದ್ಯಾರ್ಥಿಗಳ ಹಾಗೂ ಪೋಷಕರ ಕೆಂಗಣ್ಣಿಗೆ ಗುರಿಯಾಗಿದೆ.
ಇದನ್ನೂ ಓದಿ: ದ್ವಿತೀಯ ಪಿಯುಸಿ, ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ಪ್ರಕಟ
ಸರ್ಕಾರಿ ವಸತಿ ಶಾಲೆಗಳಲ್ಲಿ ಧಾರ್ಮಿಕ ಹಬ್ಬಗಳನ್ನು ಆಚರಿಸಬಾರದು ಎಂದು ಸುತ್ತೋಲೆ ಹೊರಡಿಸಿ ವಿವಾದಕ್ಕೆ ಈಡಾಗುತ್ತಿದ್ದಂತೆಯೇ ಅದನ್ನು ಹಿಂಪಡೆಯಲಾಗಿತ್ತು. ಆನಂತರ ವಸತಿ ಶಾಲೆಗಳ ಪ್ರವೇಶ ದ್ವಾರದಲ್ಲಿ ಕುವೆಂಪು ಕವನದ ಬರಹವನ್ನು ಬದಲಾಯಿಸುವ ಮೂಲಕ ವಿವಾದಕ್ಕೆ ಗುರಿಯಾಗಿತ್ತು. ನಂತರ ಸುತ್ತೋಲೆಯನ್ನು ವಾಪಸ್ ಪಡೆಯಲಾಗಿತ್ತು. ಇದೀಗ ಉತ್ತರ ಪತ್ರಿಕೆಗಳನ್ನು ವಿದ್ಯಾರ್ಥಿಗಳೇ ತರಬೇಕೆನ್ನುವ ಮೂಲಕ ಮತ್ತೆ ಆಕ್ರೋಶಕ್ಕೆ ಗುರಿಯಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ