
ಬೆಂಗಳೂರು, ಜುಲೈ 02: ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದಲ್ಲಿ (Maharshi Valmiki Scheduled Tribes Development Corporation Limited) ನಡೆದ ಅವ್ಯವಹಾರದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ (CBI) ಹೊಸದಾಗಿ ಎರಡು ಅಕ್ರಮ ಪತ್ತೆಹಚ್ಚಿದೆ. ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯಿಂದ 95 ಲಕ್ಷ ರೂ. ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯಿಂದ (Scheduled Tribes Welfare Department) 2.17 ಕೋಟಿ ರೂ. ಹಣ ಅಕ್ರಮವಾಗಿ ಆರೋಪಿ ನೆಕ್ಕಂಟಿ ನಾಗರಾಜ್‌ಗೆ ವರ್ಗಾವಣೆಯಾಗಿದೆ ಎಂದು ಕೋರ್ಟ್‌ಗೆ ಸಲ್ಲಿಸಲಾಗಿರುವ ಸಿಬಿಐ ತನಿಖಾ ವರದಿಯಲ್ಲಿದೆ.
ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ ಬೆಂಗಳೂರಿನ ಕೆನರಾ ಬ್ಯಾಂಕ್ ಖಾತೆಯಿಂದ 95 ಲಕ್ಷ ರೂ. ಆರೋಪಿ ನೆಕ್ಕಂಟಿ ನಾಗರಾಜ್ ಖಾತೆಗೆ ಅಕ್ರಮವಾಗಿ ವರ್ಗಾವಣೆಯಾಗಿದೆ. ಇದಲ್ಲದೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ 2.17 ಕೋಟಿ ರೂ. ಹಣ ವಾಲ್ಮೀಕಿ ಅಭಿವೃದ್ಧಿ ನಿಗಮದ ಬ್ಯಾಂಕ್ ಆಫ್ ಬರೋಡಾ ಖಾತೆಗೆ ವರ್ಗಾವಣೆಯಾಗಿದೆ. ಇದೇ ಹಣ ನಿಗಮದ ಬ್ಯಾಂಕ್ ಆಫ್ ಬರೋಡಾ ಖಾತೆಯಿಂದ ಆರೋಪಿ ನೆಕ್ಕಂಟಿ ನಾಗರಾಜ್ನ ಖಾತೆಗೆ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ವರದಿಯಲ್ಲಿ ಅಡಕವಾಗಿದೆ.
ಸಿಬಿಐನ ತನಿಖಾ ವರದಿಯನ್ನು ಎಸ್‌ಪಿಪಿ ಪ್ರಸನ್ನಕುಮಾರ್ ಅವರು ಯಥಾಸ್ಥಿತಿ ಹೈಕೋರ್ಟ್ಗೆ ಸಲ್ಲಿಸಿದ್ದಾರೆ. ವರದಿ ಸಲ್ಲಿಕೆ ಬಳಿಕ ಹೈಕೋರ್ಟ್ ಪ್ರಕರಣದ ತನಿಖೆ ನಡೆಸುವಂತೆ ಸಿಐಡಿ, ಇಡಿ, ಸಿಎಫ್‌ಎಸ್‌ಎಲ್, ಎಸ್ಎಫ್ಎಸ್ಎಲ್ಗೂ ಸೂಚನೆ ನೀಡಿದೆ. ಈ ಪ್ರಕರಣದಲ್ಲಿ ಭಾಗಿಯಾದ ಸರ್ಕಾರಿ ನೌಕರರು, ಖಾಸಗಿ ವ್ಯಕ್ತಿಗಳನ್ನು ತನಿಖೆ ಒಳಪಡಿಸಿ ಆರೋಪ ಪಟ್ಟಿ ಸಲ್ಲಿಸುವಂತೆ ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಆದೇಶ ಹೊರಡಿಸಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ 187 ಕೋಟಿ ರೂ. ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎಂದು ಬಹಿರಂಗವಾಗಿತ್ತು. 187 ಕೋಟಿ ರೂಪಾಯಿಯಲ್ಲಿ 94 ಕೋಟಿ ಹೈದರಾಬಾದ್ ಬ್ಯಾಂಕ್ಗೆ ಅಂದರೆ, ಹೈದರಾಬಾದ್ನ ಫಸ್ಟ್ ಬ್ಯಾಂಕ್ಗೆ ವರ್ಗಾಯಿಸಲಾಗಿತ್ತು. ಫಸ್ಟ್ ಬ್ಯಾಂಕ್ನ ಭರ್ತಿ 18 ನಕಲಿ ಖಾತೆಗಳಿಗೆ 94 ಕೋಟಿ ರೂಪಾಯಿ ವರ್ಗಾವಣೆ ಆಗಿತ್ತು. ಇದೆಲ್ಲವೂ ಮಾಜಿ ಸಚಿವ ನಾಗೇಂದ್ರ ಆಪ್ತ ನೆಕ್ಕಂಟಿ ನಾಗರಾಜ್ ಹಾಗೂ ಆಂಧ್ರದ ನಾಗೇಶ್ವರ್ ರಾವ್ ಸೂಚನೆಯಂತೆ ವರ್ಗಾವಣೆಯಾಗಿತ್ತು.
ಇದನ್ನೂ ಓದಿ: ವಾಲ್ಮೀಕಿ ನಿಗಮ ಹಗರಣ ತನಿಖೆ ಸಿಬಿಐಗೆ ನೀಡಿ ಕೋರ್ಟ್ ಆದೇಶ: ಹಲವರಿಗೆ ಢವ ಢವ
ಹೀಗೆ ವರ್ಗಾವಣೆ ಆದ ಹಣವನ್ನು ಮಧ್ಯವರ್ತಿ ಸತ್ಯನಾರಾಣ ವರ್ಮಾ ಬಿಡಿಸಿಕೊಂಡಿದ್ದನು. ಈ 18 ನಕಲಿ ಖಾತೆಗಳಿಂದ ಬೇರೆ ಖಾತೆಗಳಿಗೆ 94 ಕೋಟಿ ರೂಪಾಯಿ ವರ್ಗಾವಣೆ ಮಾಡಲಾಗಿತ್ತು. ನೆಟ್ ಬ್ಯಾಂಕಿಂಗ್, ಆರ್ಟಿಜಿಎಸ್, ಫೋನ್ ಪೇ, ಗೂಗಲ್ ಪೇ ಮೂಲಕ ಹಣವನ್ನು ವರ್ಗಾವಣೆ ಮಾಡಿ, ಆ ಹಣವನ್ನ ಸತ್ಯನಾರಾಯಣ ವರ್ಮಾ ಡ್ರಾ ಮಾಡಿಕೊಂಡು ನೆಕ್ಕಂಟಿ ನಾಗರಾಜ್, ನಾಗೇಶ್ವರ್ ರಾವ್ ಜತೆಗೂಡಿ ಹಣ ಹಂಚಿಕೆ ಮಾಡಿಕೊಂಡಿದ್ದರು.
ನಿಗಮದ ಎಂಡಿಯಾಗಿದ್ದ ಪದ್ಮನಾಭಗೆ 5 ಕೋಟಿ ರೂಪಾಯಿ ಪಾಲು ಬಂದಿತ್ತು. ಈ ಹಣದಲ್ಲಿ ಅರ್ಧ ಹಣವನ್ನ ಮಗನ ಸ್ನೇಹಿತನ ಮನೆಯಲ್ಲಿ, ಅಂದರೆ ನೆಲಮಂಗಲದ ಗೋವಿನಹಳ್ಳಿಯ ಕೆಂಪೇಗೌಡ ಮನೆಯಲ್ಲಿದ್ದ ಇಟ್ಟಿದ್ದ. ಕೆಂಪೇಗೌಡ ಮನೆಯಲ್ಲಿ ಎಸ್ಐಟಿ ಅಧಿಕಾರಿಗಳು 3.64 ಕೋಟಿ ರೂಪಾಯಿ ಹಣವನ್ನ ಸೀಜ್ ಮಾಡಿದ್ದರು. ಅಲ್ಲದೆ, ಪದ್ಮನಾಭ ಸ್ನೇಹಿತರೊಬ್ಬರ ಕಾರಿನಲ್ಲಿ ಬಚ್ಚಿಟ್ಟಿದ್ದ 30 ಲಕ್ಷ ರೂಪಾಯಿ ನಗದು ಕೂಡ ಸೀಜ್ ಆಗಿತ್ತು. ಅಲ್ಲದೆ, ನಾಗೇಂದ್ರ ಆಪ್ತ ಹರೀಶ್ಗೆ 25 ಲಕ್ಷ ರೂ., ದದ್ದಲ್ ಆಪ್ತನಿಗೆ 55 ಲಕ್ಷ ರೂ., ದದ್ದಲ್ ಆಪ್ತ ಹಂಪಣ್ಣಗೆ 55 ಲಕ್ಷ ರೂ. ನೀಡಿರುವುದು ತನಿಖೆಯಲ್ಲಿ ತಿಳಿದುಬಂದಿತ್ತು. ಹೀಗೆ 94 ಕೋಟಿ ರೂಪಾಯಿ ಹಣವನ್ನ ನೆಕ್ಕಂಟಿ ನಾಗರಾಜ್ ಮತ್ತು ಸತ್ಯನಾರಾಯಣ ವರ್ಮಾ ಹಂಚಿಕೆ ಮಾಡಿದ್ದರು.
Published On - 2:56 pm, Wed, 2 July 25