
ಬೆಂಗಳೂರು, ಮಾರ್ಚ್ 18: ಕರ್ನಾಟಕದಲ್ಲಿ ಬೇಸಿಗೆ ಮಳೆ (Rain) ಆರ್ಭಟ ಶುರುವಾಗಿದೆ. ಕಳೆದ ಕೆಲ ದಿನಗಳಿಂದ ರಾಜ್ಯದ ಹಲವೆಡೆ ಆಲಿಕಲ್ಲು ಸಹಿತ ಭಾರಿ ಮಳೆ ಆಗುತ್ತಿದ್ದು, ಇಂದು ಕೂಡ ಮಳೆ ಸುರಿದಿದೆ. ಇತ್ತ ಬೆಂಗಳೂರಿನಲ್ಲಿ ಇಂದು ಮೋಡ ಕವಿದ ವಾತಾವರಣವಿದ್ದು, ಸಂಜೆ ಆಗುತ್ತಿದ್ದಂತೆ ನಗರದ ಹಲವೆಡೆ ಆಲಿಕಲ್ಲು ಸಹಿತ ಮಳೆ ಆಗಿದೆ. ಆ ಮೂಲಕ ಸಿಲಿಕಾನ್ ಸಿಟಿ ಕೂಲ್ ಕೂಲ್ ಆಗಿದೆ. ಆಲಿಕಲ್ಲಿನ ಮಳೆ ಕಂಡು ಸಿಟಿ ಮಂದಿ ಫುಲ್ ಖುಷ್.
ರಣ ರಣ ಬಿಸಿಲಿನ ನಡುವೆ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಆಲಿಕಲ್ಲು ಸಹಿತ ಭಾರಿ ಮಳೆ ಆಗಿದೆ. ಮೆಜೆಸ್ಟಿಕ್, ಶಾಂತಿನಗರ, ಕಾಡುಗೋಡಿ, ಮಾರ್ಕೆಟ್, ಜಯನಗರ, ಬಸವೇಶ್ವರ ನಗರ, ಶಾಂತಿನಗರ, ವಿಲ್ಸನ್ಗಾರ್ಡನ್, ರಿಚ್ಮಂಡ್ಟೌನ್ ಸುತ್ತಮುತ್ತ ಮಳೆ ಆಗಿದೆ.
ಇದನ್ನೂ ಓದಿ: ಕರ್ನಾಟಕ ಹವಾಮಾನ: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ; ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ಸ್ಥಿತಿ ಏನು?
ದಾವಣಗೆರೆ ಜಿಲ್ಲೆಯಲ್ಲಿ ಇಂದು ಮತ್ತೆ ಮಳೆ ಆಗಿದೆ. ದಾವಣಗೆರೆ ತಾಲೂಕಿನ ಗುಮ್ಮನೂರ, ಗುಡಾಳ್, ಹೆಬ್ಬಾಳ್, ಆನಗೋಡ್ ಸೇರಿದಂತೆ ಬಹುತೇಕ ಕಡೆ ಮಳೆ ಆಗಿದೆ. ಗ್ರಾಮದ ರಸ್ತೆ ತುಂಬೆಲ್ಲಾ ರಾಶಿ ರಾಶಿ ಅಲಿಕಲ್ಲು ಬಿದ್ದಿದ್ದು, ರಸ್ತೆ ಜಮ್ಮು ಕಾಶ್ಮೀರದಂತಾಗಿದೆ.
ಚಾಮರಾಜನಗರ ಪಟ್ಟಣ ಹಾಗೂ ಚಾಮರಾಜನಗರ ತಾಲೂಕಿನಾದ್ಯಂತ ಭಾರೀ ಬಿರುಗಾಳಿ ಸಮೇತ ವರುಣ ಆರ್ಭಟಿಸಿದ್ದಾನೆ. ಮಳೆಯ ಆರ್ಭಟಕ್ಕೆ ರಸ್ತೆ ಕಾಣದೆ ವಾಹನ ಸವಾರರು ಪರದಾಡಿದ್ದಾರೆ. ಬಿರುಗಾಳಿಯ ರಭಸಕ್ಕೆ ತೆಂಗಿನ ಗರಿಗಳು ದರಶಾಹಿ ಆಗಿದೆ. ನಿನ್ನೆ ಆಲಿಕಲ್ಲು ಸಮೇತ ಮಳೆ ಸುರಿದು ರೈತರಿಗೆ ಸಂಕಷ್ಟ ತಂದೊಡ್ಡಿತ್ತು. ಇಂದು ಮತ್ತೆ ರಣ ಚಂಡಿ ಮಳೆ ಸುರಿದಿದೆ. ಈ ಅಕಾಲಿಕ ಮಳೆಗೆ ಚಾಮರಾಜನಗರ ಜನತೆ ಮತ್ತು ರೈತರು ತಬ್ಬಿಬ್ಬಾಗಿದ್ದಾರೆ.
ಇದನ್ನೂ ಓದಿ: ಬಿರು ಬೇಸಿಗೆಯಲ್ಲೂ ಕಾರವಾರದಲ್ಲಿ ಭರ್ಜರಿ ಆಲಿಕಲ್ಲು ಮಳೆ!
ಇನ್ನು ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನಾದ್ಯಂತ ಮಳೆ ಸುರಿದಿದೆ. ಕೊಂಬಾರು ಗ್ರಾಮದಲ್ಲಿ ಆಲಿಕಲ್ಲು ಮಳೆ ಸುರಿದಿದೆ. ಆ ಮೂಲಕ ಬಿಸಿಲ ಧಗೆಗೆ ಮಳೆರಾಯ ತಂಪೆರೆದಿದ್ದಾನೆ. ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ಸುಮಾರು ಒಂದು ಗಂಟೆ ನಿರಂತರ ಮಳೆ ಆಗಿದೆ. ವರ್ಷದ ಮೊದಲ ಮಳೆಗೆ ಮೈಸೂರಿಗರ ಸಂತಸಗೊಂಡಿದ್ದಾರೆ. ಬಿಸಿಲಿನ ಬೇಗೆಯಿಂದ ಬಸವಳಿದಿದ್ದವರಿಗೆ ವರುಣ ಸಿಂಚನವಾಗಿದೆ.
ವರದಿ: ನಟರಾಜ್ ಟಿವಿ9
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.