
ಶಾಲಾ ಶಿಕ್ಷಣ ಇಲಾಖೆಯು ರಾಜ್ಯದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿಯಿರುವ ವಿವಿಧ ಶಿಕ್ಷಕರ ಹುದ್ದೆಗಳಿಗೆ ಆನ್‌ಲೈನ್ ಅರ್ಜಿ ಸಲ್ಲಿಕೆಯ ದಿನಾಂಕವನ್ನು ವಿಸ್ತರಿಸಿದೆ. ಅರ್ಹ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಂಡು ಅರ್ಜಿ ಸಲ್ಲಿಸಬಹುದಾಗಿದೆ.
ಪ್ರಾಥಮಿಕ ಶಾಲೆಗಳಲ್ಲಿ ಖಾಲಿಯಿರುವ ಸಾಮಾನ್ಯ ಶಿಕ್ಷಕ (ಪಿಎಸ್‌ಟಿ 1 ರಿಂದ 5ನೇ ತರಗತಿ), ಪಿ.ಇ ಗ್ರೇಡ್-2 (1 ರಿಂದ 8ನೇ ತರಗತಿ), ಜಿಪಿಟಿ (6 ರಿಂದ 8ನೇ ತರಗತಿ), ಸಿಎಸ್‌ಟಿ (1 ರಿಂದ 8ನೇ ತರಗತಿ) ಹಾಗೂ ಪ್ರೌಢಶಾಲೆಗಳಲ್ಲಿ ಖಾಲಿಯಿರುವ ಸಹಶಿಕ್ಷಕರ ವೃಂದ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಗ್ರೇಡ್-1 ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಈಗಾಗಲೇ ಜಿಲ್ಲಾವಾರು ಅಧಿಸೂಚನೆ ಹೊರಡಿಸಿದ್ದ ಶಿಕ್ಷಣ ಇಲಾಖೆಯು, ಈ ಹಿಂದೆ ಪ್ರಕಟಿಸಿದ್ದ ಪರೀಕ್ಷೆಗಳನ್ನು ಮುಂದೂಡಿದೆ. ಪರಿಷ್ಕೃತ ವೇಳಾಪಟ್ಟಿಯಂತೆ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಅ.26 ರವರೆಗೆ ಅವಧಿ ವಿಸ್ತರಿಸಲಾಗಿದ್ದು, ಪಾವತಿಸಿರುವ ಅರ್ಜಿ ಶುಲ್ಕವನ್ನು ಖಚಿತಪಡಿಸಿಕೊಳ್ಳಲು ಅ. 28 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ವಕೀಲಿ ವೃತ್ತಿಗೆ ಗುಡ್‌ಬೈ ಹೇಳಿ ‘ಡಾಗ್ ವಾಕರ್’ ಆದ ಮಹಿಳೆ: ಈಗ ಕಮ್ಮಿ ಕೆಲಸ, ತಿಂಗಳಿಗೆ ಲಕ್ಷ ಲಕ್ಷ ಸಂಪಾದನೆ!
ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಪರೀಕ್ಷೆಗಳನ್ನು ನವೆಂಬರ್ ಅಥವಾ ಡಿಸೆಂಬರ್ ತಿಂಗಳಿನಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಪರೀಕ್ಷೆಗೆ ಸಂಬಂಧಿಸಿದ ನಿಖರವಾದ ವೇಳಾಪಟ್ಟಿಯನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಮಾಹಿತಿ ನೀಡಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ