ಕರ್ತವ್ಯಕ್ಕೆ ಹಾಜರಾದ 10,430 ಸಿಬ್ಬಂದಿಗೆ ಮಾರ್ಚ್ ತಿಂಗಳ ಸಂಬಳ ಪಾವತಿಸಿದ ಸಾರಿಗೆ ಸಂಸ್ಥೆ
ಮುಷ್ಕರ ನಿರತ ಸಾರಿಗೆ ನೌಕರರಿಗೆ ಮಾತ್ರ ಸಂಬಳ ಜಮೆ ಆಗಿಲ್ಲ. ಈಮೂಲಕ ‘ಮುಷ್ಕರ ಬಿಟ್ಟು ಬನ್ನಿ, ವೇತನ ಪಡೆಯಿರಿ’ ಎಂದು ಸಾರಿಗೆ ನಿಗಮ ಪರೋಕ್ಷವಾಗಿ ಸೂಚನೆ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರು: ಕರ್ತವ್ಯಕ್ಕೆ ಹಾಜರಾದ ಸಾರಿಗೆ ನೌಕರರ ಮಾರ್ಚ್ ತಿಂಗಳ ಸಂಬಳವನ್ನು ಸಾರಿಗೆ ಇಲಾಖೆ ಪಾವತಿಸಿದೆ. ರಾಜ್ಯಾದ್ಯಂತ 4,256 ಕೆಎಸ್‌ಆರ್‌ಟಿಸಿ, 960 ಬಿಎಂಟಿಸಿ, 1837 ಎನ್ಡಬ್ಲ್ಯುಕೆಆರ್ಟಿಸಿ ಮತ್ತು 3377 ಎನ್ಈಕೆಆರ್ಟಿಸಿ ಸಿಬ್ಬಂದಿಗಳಿಗೆ ಮಾರ್ಚ್ ತಿಂಗಳ ಸಂಬಳವನ್ನು ನೀಡಲಾಗಿದೆ. ಈ ಮೂಲಕ ರಾಜ್ಯದ ಒಟ್ಟು 10,430 ಸಾರಿಗೆ ಸಿಬ್ಬಂದಿಗೆ ಮಾರ್ಚ್ ತಿಂಗಳ ವೇತನ ಕೈಗೆ ಸಿಕ್ಕಂತಾಗಿದೆ. ಆದರೆ ಮುಷ್ಕರ ನಿರತ ಸಾರಿಗೆ ನೌಕರರಿಗೆ ಮಾತ್ರ ಸಂಬಳ ಜಮೆ ಆಗಿಲ್ಲ. ಈ ಮೂಲಕ ‘ಮುಷ್ಕರ ಬಿಟ್ಟು ಬನ್ನಿ, ವೇತನ ಪಡೆಯಿರಿ’ ಎಂದು ಸಾರಿಗೆ ನಿಗಮ ಪರೋಕ್ಷವಾಗಿ ಸೂಚನೆ ನೀಡುತ್ತಿದೆ ಎಂದು ಹೇಳಲಾಗುತ್ತಿದೆ.
ಸಾರಿಗೆ ನೌಕರರ ಮುಷ್ಕರದ ಮಧ್ಯೆಯೂ ರಾಜ್ಯದಲ್ಲಿ ಮಧ್ಯಾಹ್ನ 3ರವರೆಗೆ 2,962 ಬಸ್ಗಳು ಸಂಚರಿಸಿವೆ. 1,449 ಕೆಎಸ್‌ಆರ್‌ಟಿಸಿ ಬಸ್, 650 NEKRTC ಬಸ್, 420 ಬಿಎಂಟಿಸಿ ಬಸ್, 448 NWKRTC ಬಸ್ ಸಂಚಾರ ನಡೆದಿದೆ.
ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಅಂತ್ಯ ಕಾಣದೇ ಇರುವ ಹಿನ್ನೆಲೆ ಸರ್ಕಾರ ಅವರ ವಿರುದ್ಧ ಮತ್ತೊಂದು ಅಸ್ತ್ರ ಪ್ರಯೋಗಿಸಲು ಮುಂದಾಗಿದೆ. 52 ವರ್ಷ ಮೇಲ್ಪಟ್ಟ ಸಾರಿಗೆ ಸಿಬ್ಬಂದಿಗೆ ಫಿಟ್ನೆಸ್ ಸರ್ಟಿಫಿಕೆಟ್ ಸಲ್ಲಿಸಲು ಬಿಎಂಟಿಸಿ ಸೂಚನೆ ನೀಡಿದ್ದು, ಸರ್ಟಿಫಿಕೇಟ್ ಸಲ್ಲಿಕೆಗೆ ಇಂದೇ ಕೊನೆಯ ದಿನವಾಗಿದೆ. ಒಂದು ವೇಳೆ ಇಂದು ಸರ್ಟಿಫಿಕೇಟ್ ನೀಡಲು ವಿಫಲವಾದ್ರೆ ಗೇಟ್ಪಾಸ್ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದೆ. ಆ ಮೂಲಕ ಮುಷ್ಕರ ನಿರತ ಸಾರಿಗೆ ಸಿಬ್ಬಂದಿ ವಿರುದ್ಧ ಬಿಎಂಟಿಸಿ ಮತ್ತಷ್ಟು ಬಿಗಿ ಕ್ರಮ ಕೈಗೊಳ್ಳಲು ಸಜ್ಜಾಗಿದೆ.
ಮಾರ್ಚ್ ತಿಂಗಳ ಸಾರಿಗೆ ನೌಕರರ ಸಂಬಳ ತಡೆಹಿಡಿದಿರುವ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಡಿಸಿ ಕಚೇರಿ ಹಾಗೂ ತಾಲೂಕು ಕಚೇರಿಗಳ ಬಳಿ ದೈಹಿಕ ಅಂತರ ಪಾಲಿಸಿ ತಟ್ಟೆ, ಲೋಟ ಬಡಿದು ಸಾರಿಗೆ ನೌಕರರು ಧರಣಿ ನಡೆಸುತ್ತಿದ್ದಾರೆ. 11 ಗಂಟೆಯಿಂದ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿ ವಿನೂತನ ಪ್ರತಿಭಟನೆ ರಾಜ್ಯಾದ್ಯಂತ ಆರಂಭವಾಗಿದೆ.
ಮಾರ್ಚ್ ತಿಂಗಳ ಸಂಬಳ ಹಾಗೂ 6ನೇ ವೇತನ ಆಯೋಗ ಜಾರಿಗೆ ಒತ್ತಾಯಿಸಿ ಪ್ರಾರಂಭ ಮಾಡಿರುವ ಮುಷ್ಕರ ಸದ್ಯ ಪ್ರತಿಭಟನೆ ರೂಪ ಪಡೆದಿದೆ. ನಾಳೆ ಯುಗಾದಿ ಹಬ್ಬ ಹಿನ್ನೆಲೆ ಸಂಬಳ ತಡೆ ಹಿಡಿದಿರುವ ಕ್ರಮವನ್ನು ವಿರೋಧಿಸಿ, ನೌಕರರ ಕುಟುಂಬದಿಂದ ತಟ್ಟೆ ಲೋಟ ಬಡಿದು ಪ್ರತಿಭಟನೆ ನಡೆಸಲಾಗುತ್ತಿದೆ.
ಈ ಬಗ್ಗೆ ನಿನ್ನೆ ಹೇಳಿಕೆ ನೀಡಿದ್ದ ಕೋಡಿಹಳ್ಳಿ ಚಂದ್ರಶೇಖರ್, ಚಳವಳಿ ಯಶಸ್ವಿಯಾಗಿ ನಡೆಯಲಿದೆ. ಸಂಬಳ ತಡೆಹಿಡಿದಿರುವುದು ನೌಕರರಿಗೆ ಗೊತ್ತಿದೆ. ಆದರೂ ನೌಕರರು ಮುಷ್ಕರದಲ್ಲಿ ಭಾಗಿಯಾಗಿದ್ದಾರೆ. ಇದೀಗ ತಟ್ಟೆ ಲೋಟ ಬಡಿಯುವುದರ ಮೂಲಕ ವಿಭಿನ್ನ ಚಳುವಳಿ ನಡೆಸುತ್ತೇವೆ. ನೌಕರರಿಗೆ 6ನೇ ವೇತನ ಘೋಷಣೆ ಮಾಡಲು ಒತ್ತಾಯ ಮಾಡುತ್ತೇವೆ. ಸರ್ಕಾರ ಮುಷ್ಕರ ದಮನ ಮಾಡಲು ಮುಂದಾಗಿದೆ. ಕೆಲ ಸಂಘಟನೆಗಳ ಮೂಲಕ ಕೆಲ ಬಸ್ ಗಳು ಓಡಾಡುತ್ತಿವೆ. ಒಂದೆರಡು ಬಸ್ ಓಡಾಡಬಹುದು. ಒಂದೆರಡು ನೌಕರರು ಕರ್ತವ್ಯಕ್ಕೆ ಹಾಜರಾಗಿರಬಹುದು ಆದ್ರೆ ಮುಷ್ಕರ ನಿಂತಿಲ್ಲ. ರಾಜ್ಯಾದ್ಯಂತ ಮುಷ್ಕರ, ಪ್ರತಿಭಟನೆ ನಡೆಯುತ್ತೆ ಎಂದು ತಿಳಿಸಿದ್ದರು.
ಇದನ್ನೂ ಓದಿ: ನಾಳೆ ತಟ್ಟೆ ಲೋಟ ಬಡಿಯುವುದರ ಮೂಲಕ ರಾಜ್ಯಾದ್ಯಂತ ಚಳವಳಿ ನಡೆಸುತ್ತೇವೆ -ಕೋಡಿಹಳ್ಳಿ ಚಂದ್ರಶೇಖರ್
ಸಾರಿಗೆ ಮುಷ್ಕರ; ಬಸ್ಗಳಿಲ್ಲದೆ ಪರದಾಡುತ್ತಿದ್ದ ತಲ್ಸೇಮಿಯಾ ರೋಗಿಗೆ ನೆರವಾದ ಟಿವಿ9
(Karnataka Transport department paid March month salary to one who attend work instead of protest)
Published On - 3:55 pm, Mon, 12 April 21