ಏಕಾಏಕಿ ಸ್ತಬ್ಧಗೊಳ್ಳಲಿದೆ ಬಸ್ ಸಂಚಾರ! ದಿನಾಂಕ ಘೋಷಿಸದೆ ದಿಢೀರ್ ಮುಷ್ಕರಕ್ಕೆ ಸಾರಿಗೆ ನೌಕರರ ಸಿದ್ಧತೆ
Karnataka Transport Strike: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಆಗಸ್ಟ್ ನಲ್ಲಿ ಸಾರಿಗೆ ನೌಕರರು ಮುಷ್ಕರಕ್ಕೆ ಮುಂದಾಗಿದ್ದರು. ಆದರೆ ಹೈಕೋರ್ಟ್ ಆದೇಶದ ಹಿನ್ನೆಲೆ ಮುಷ್ಕರ ಕೈಬಿಟ್ಟಿದ್ದರು. ಇದೀಗ ಮತ್ತೆ ಮುಷ್ಕರಕ್ಕೆ ಸಿದ್ದತೆ ಮಾಡಿಕೊಳ್ಳಲಾಗುತ್ತಿದ್ದು, ಈ ಬಾರಿ ದಿನಾಂಕ ಘೋಷಣೆ ಮಾಡದೆ ಏಕಾಏಕಿ ಬಸ್ ನಿಲ್ಲಿಸಲು ಪ್ಲಾನ್ ಮಾಡಲಾಗುತ್ತಿದೆ. ಇದರಿಂದ ಪ್ರಯಾಣಿಕರು ಸಂಕಷ್ಟಕ್ಕೀಡಾಗುವ ಸಾಧ್ಯತೆ ಇದೆ.

ಬೆಂಗಳೂರು, ಡಿಸೆಂಬರ್ 16: ಕೆಎಸ್ಆರ್ಟಿಸಿ (KSRTC), ಬಿಎಂಟಿಸಿ (BMTC) ಸೇರಿದಂತೆ ನಾಲ್ಕು ನಿಗಮಗಳ ನೌಕರರು ಇದೀಗ ಮತ್ತೆ ಸಾರಿಗೆ ಮುಷ್ಕರಕ್ಕೆ (Transport Strike) ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಆಗಸ್ಟ್ 5 ರಂದು ನಾಲ್ಕು ನಿಗಮಗಳ ನೌಕರರು ಸಾರಿಗೆ ಮುಷ್ಕರಕ್ಕೆ ಮುಂದಾಗಿದ್ದರು. ಆದರೆ ಹೈಕೋರ್ಟ್ ಆದೇಶದ ಹಿನ್ನೆಲೆ ಮುಷ್ಕರವನ್ನು ಕೈಬಿಡಲಾಗಿತ್ತು. ಆದರೆ ಈ ಬಾರಿ ಮುಷ್ಕರದ ದಿನಾಂಕವನ್ನು ಘೋಷಣೆ ಮಾಡದೆ ಹಠಾತ್ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಿದ್ದಾರೆ. ಇದು ಪ್ರಯಾಣಿಕರನ್ನು, ಸಾರ್ವಜನಿಕರನ್ನು ಹಠಾತ್ ಸಮಸ್ಯೆಗೆ ಈಡುಮಾಡಲಿದೆ.
ಸಾರಿಗೆ ನೌಕರರ ಬೇಡಿಕೆಗಳ ಸಂಬಂಧ ಶನಿವಾರ ಸಾರಿಗೆ ಸಚಿವರ ಜೊತೆಗೆ ಸಭೆ ನಡೆದಿತ್ತು. ಆದರೆ, ಬೇಡಿಕೆಗಳ ಈಡೇರಿಕೆ ಸಂಬಂಧ ಒಮ್ಮತಕ್ಕೆ ಬಾರದ ಹಿನ್ನೆಲೆ, ಮತ್ತೆ ಮುಷ್ಕರಕ್ಕೆ ಸಾರಿಗೆ ನೌಕರರು ಮುಂದಾಗುತ್ತಿದ್ದಾರೆ. ಈಗಾಗಲೇ ಸಿಎಂ ಜೊತೆಗೆ ನಾಲ್ಕು ಸುತ್ತಿನ ಸಭೆ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜೊತೆಗೆ ಮೂರು ಸುತ್ತಿನ ಸಭೆ ನಡೆದಿದ್ದರೂ, ಸರ್ಕಾರ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮತ್ತು ವೇತನ ಹಿಂಬಾಕಿ ನೀಡಲು ಮುಂದಾಗುತ್ತಿಲ್ಲ ಎನ್ನಲಾಗಿದೆ.
ಸಾರಿಗೆ ಮುಷ್ಕರಕ್ಕಾಗಿ ಬುಧವಾರದಿಂದ ಮುಖಂಡರ ಅಭಿಯಾನ
ಹೀಗಾಗಿ ಇದೀಗ ಸಾರಿಗೆ ನೌಕರರು ಬುಧವಾರದಿಂದ ಮತ್ತೆ ರಾಜ್ಯದ ಎಲ್ಲಾ ಬಸ್ ಡಿಪೋಗಳಿಗೆ ಭೇಟಿ ನೀಡಿ ಮುಷ್ಕರಕ್ಕೆ ಸಿದ್ದರಾಗಲು ಮನವಿ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸರ್ಕಾರಕ್ಕೆ ಟಕ್ಕರ್ ಕೊಡಲು ದಿನಾಂಕ ನಿಗದಿ ಮಾಡದೆ ಮುಷ್ಕರ
ದಿನಾಂಕ ನಿಗದಿ ಮಾಡಿ ಮುಂಚಿತವಾಗಿ ಮಾಹಿತಿ ನೀಡಿದರೆ ಸರ್ಕಾರ ಮತ್ತೆ ಮುಷ್ಕರಕ್ಕೆ ಅಡ್ಡಿ ಮಾಡಬಹುದು ಎಂಬ ಚಿಂತೆ ಸಾರಿಗೆ ನಕರರು, ಮುಖಂಡರದ್ದು. ಹಾಗಾಗಿ ಈ ಬಾರಿ ದಿನಾಂಕ ನಿಗದಿ ಮಾಡದೆ ಸಾರಿಗೆ ನೌಕರರು ಸರ್ಕಾರಕ್ಕೆ ಟಕ್ಕರ್ ಕೊಡಲು ಪ್ಲ್ಯಾನ್ ಮಾಡಿದ್ದಾರೆ. ಕಾರ್ಮಿಕ ಇಲಾಖೆಗೆ ಮುಷ್ಕರದ ನೋಟಿಸ್ ಕೂಡ ನೀಡದೆ ಏಕಾಏಕಿ ಬಸ್ಸುಗಳ ಸಂಚಾರ ನಿಲ್ಲಿಸಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ರಾತ್ರೋರಾತ್ರಿ ಸಾರಿಗೆ ಮುಖಂಡರು ವಾಟ್ಸಾಪ್ ಮೂಲಕ ಸಂದೇಶ ಕಳಿಸಿ ಬಸ್ ಸಂಚಾರ ನಿಲ್ಲಿಸಲಿದ್ದಾರಂತೆ.
ಇದನ್ನೂ ಓದಿ: ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
38 ತಿಂಗಳ ವೇತನ ಮತ್ತು 2024 ಜನವರಿಯಿಂದ 1.20 ಲಕ್ಷ ಸಾರಿಗೆ ನೌಕರರಿಗೆ ವೇತನ ಹೆಚ್ಚಳ ಮಾಡಬೇಕಿತ್ತು. ಆದರೆ 2025 ಡಿಸೆಂಬರ್ ಬಂದರೂ ವೇತನ ಹೆಚ್ಚಳ ಮಾಡಲು ಮುಂದಾಗಿಲ್ಲ. ಒಟ್ಟಿನಲ್ಲಿ ಸಾರಿಗೆ ನೌಕರರಿಗೆ ಸರ್ಕಾರ ನೀಡಬೇಕಿರುವ ಹಿಂಬಾಕಿ ನೀಡಲ್ಲ, ವೇತನ ಹೆಚ್ಚಳ ಮಾಡಲ್ಲ. ನೌಕರರ ಯಾವ ಬೇಡಿಕೆಯನ್ನು ಸರ್ಕಾರ ಈಡೇರಿಸುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಇದರಿಂದ ಪ್ರಯಾಣಿಕರಿಗೆ ಸಮಸ್ಯೆ ಆಗುವುದಂತೂ ಗ್ಯಾರೆಂಟಿ.



