ತಳ್ಳುವ ಗಾಡಿ ವ್ಯಾಪಾರಿಗೂ ವಾಣಿಜ್ಯ ಇಲಾಖೆ ನೋಟಿಸ್​: ಮತ್ತೆ ನಗದು ವ್ಯವಹಾರದತ್ತ ಮುಖಮಾಡಿದ ವರ್ತಕರು

ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ UPI ಮೂಲಕ 40 ಲಕ್ಷ ರೂಪಾಯಿಗಿಂತ ಹೆಚ್ಚು ವಹಿವಾಟು ನಡೆಸಿದ ವ್ಯಾಪಾರಿಗಳಿಗೆ ತೆರಿಗೆ ನೋಟಿಸ್ ಜಾರಿಗೊಳಿಸಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಹೂವಿನ ವ್ಯಾಪಾರಿಯೊಬ್ಬರಿಗೆ 52 ಲಕ್ಷ ರೂಪಾಯಿ ತೆರಿಗೆ ಪಾವತಿಸುವಂತೆ ನೋಟಿಸ್ ನೀಡಲಾಗಿದೆ. ಇದರಿಂದಾಗಿ ಅನೇಕ ವ್ಯಾಪಾರಿಗಳು ನಗದು ವ್ಯವಹಾರಕ್ಕೆ ತಿರುಗುತ್ತಿದ್ದಾರೆ ಮತ್ತು UPI QR ಕೋಡ್ ಗಳನ್ನು ತೆಗೆಯುತ್ತಿದ್ದಾರೆ. ಇಲಾಖೆ 65,000 ವರ್ತಕರ ಮಾಹಿತಿಯನ್ನು ಸಂಗ್ರಹಿಸಿದೆ ಮತ್ತು ಸುಮಾರು 5900 ವರ್ತಕರಿಗೆ ನೋಟಿಸ್ ನೀಡಿದೆ.

ತಳ್ಳುವ ಗಾಡಿ ವ್ಯಾಪಾರಿಗೂ ವಾಣಿಜ್ಯ ಇಲಾಖೆ ನೋಟಿಸ್​: ಮತ್ತೆ ನಗದು ವ್ಯವಹಾರದತ್ತ ಮುಖಮಾಡಿದ ವರ್ತಕರು
ವರ್ತಕರಿಂದ ನೋ ಗೂಗಲ್​, ಪೋನ್​ ಪೇ ಬೋರ್ಡ್​
Updated By: ವಿವೇಕ ಬಿರಾದಾರ

Updated on: Jul 18, 2025 | 4:20 PM

ಬೆಂಗಳೂರು, ಜುಲೈ 18: ಯುಪಿಐ (UPI) ಮೂಲಕ 40 ಲಕ್ಷ ರೂಪಾಯಿಗಿಂತ ಅಧಿಕ ವಹಿವಾಟು ನಡೆಸಿದ ಬೇಕರಿ, ಕಾಂಡಿಮೆಂಟ್ಸ್, ಬೀಡ ಅಂಗಡಿಗಳು ಕಮರ್ಷಿಯಲ್ ಟ್ಯಾಕ್ಸ್ ಪಾವತಿ ಮಾಡಬೇಕೆಂಬ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆ (Karnataka Commercial Tax Department) ನೋಟಿಸ್​ಗೆ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ವಾಣಿಜ್ಯ ತೆರಿಗೆ ಇಲಾಖೆ ಹೂವಿನ ವ್ಯಾಪಾರಿಗೂ ಶಾಕ್​ ನೀಡಿದೆ. ತಳ್ಳುವ ಗಾಡಿಯಲ್ಲಿ ಹೂವು ವ್ಯಾಪಾರ ಮಾಡುವ ಉಳ್ಳಾಲದ ಹೂವಿನ ವ್ಯಾಪಾರಿ ಸೋಮೆಗೌಡ ಎಂಬುವರಿಗೆ 52 ಲಕ್ಷ ರೂ. ತೆರಿಗೆ ಪಾವತಿಸುವಂತೆ ವಾಣಿಜ್ಯ ತೆರಿಗೆ ಇಲಾಖೆ ಶೋಕಾಸ್ ನೋಟಿಸ್ ನೀಡಿದೆ.

ಈ ಬಗ್ಗೆ ಹೂವಿನ ವ್ಯಾಪಾರಿ ಸೋಮೆಗೌಡ ಮಾತನಾಡಿ, 10 ವರ್ಷದಿಂದ ಹೂವಿನ ವ್ಯಾಪಾರ ಮಾಡುತ್ತಿದ್ದೇನೆ. ಒಂದು ತಿಂಗಳ ಹಿಂದೆ ಒಂದು ನೋಟಿಸ್ ಕೊಟ್ಟರು. ಈಗ ಮತ್ತೆ ವಾಟ್ಸಪ್ ಮೂಲಕ ಎರಡನೇ ನೋಟಿಸ್ ಬಂದಿದೆ. ಎಲ್ಲಿಂದ ಹಣ ಕಟ್ಟುವುದು, ಹೀಗೆ, ಆದ್ರೆ ನಾವು ಪ್ರಾಣ ಬಿಡಬೇಕಾಗುತ್ತೆ. ಮುಂದೆ ಏನು ಮಾಡಬೇಕು ಎಂಬುವುದು ಗೊತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

‘ನೋ ಗೂಗಲ್, ಪೋನ್​ ಪೇ’

40 ಲಕ್ಷಕ್ಕಿಂತ ಹೆಚ್ಚು ವಹಿವಾಟು ನಡೆಸಿದ ವ್ಯಾಪಾರಿಗಳು ತೆರಿಗೆ ಪಾವತಿಸುವಂತೆ ವಾಣಿಜ್ಯ ತೆರಿಗೆ ಇಲಾಖೆಯು ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಅನೇಕ ವರ್ತಕರು ‘ನೋ ಗೂಗಲ್, ಫೋನ್ ಪೇ, ಓನ್ಲಿ ಕ್ಯಾಶ್’ ಎಂಬ ಬೋರ್ಡ್‌ಗಳನ್ನು ಹಾಕಿದ್ದಾರೆ. ಬೆಂಗಳೂರು ಸೇರಿ ರಾಜ್ಯದೆಲ್ಲೆಡೆ ಚಿಲ್ಲರೆ ವ್ಯಾಪಾರಿಗಳು ನಗದು ವ್ಯಾಪಾರಕ್ಕೆ ಮರಳುವ ಮನಸ್ಸು ಮಾಡುತ್ತಿದ್ದು, ತಮ್ಮ ಅಂಗಡಿಗಳಿಗೆ ಅಂಟಿಸಿದ್ದ ಯುಪಿಐ ಕ್ಯೂ ಆರ್‌ಕೋಡ್ ಸ್ಟಿಕ್ಕರ್ ತೆಗೆಯುತ್ತಿದ್ದಾರೆ.

ಇದನ್ನೂ ಓದಿ
ಗೂಗಲ್ ಪೇ, ಫೋನ್ ಪೇ, ಪೇಟಿಯಂನಲ್ಲಿ ಹಣ ಸ್ವೀಕರಿಸುವ ಮುನ್ನ ಎಚ್ಚರ
ಗ್ರಾಹಕರಿಂದ ಆನ್ಲೈನ್ ಪೇಮೆಂಟ್ಸ್ ಸ್ವೀಕರಿಸಿದ್ದು ವ್ಯಾಪಾರಿಗಳ ಅಪರಾಧ!
ಪಾಕ್​ನಲ್ಲಿ ಫೋನ್‌ಪೇ-ಪೇಟಿಎಂ ಇಲ್ಲ: ಈ ಆ್ಯಪ್ ಯೂಸ್ ಮಾಡ್ತಾರೆ
ಇತರರಿಗೆ ನಿಮ್ಮ ಯುಪಿಐ ಬಳಸಲು ಅನುಮತಿಸುವ ಸರ್ಕಲ್ ಫೀಚರ್

ಯುಪಿಐ ಪ್ಲಾಟ್ ಫಾರ್ಮ್‌ಗಳ ಮೂಲಕ ಮಾಹಿತಿ ಪಡೆದಿರುವ ಇಲಾಖೆ ರಾಜ್ಯದಲ್ಲಿ ಈವರೆಗೆ ಯುಪಿಐ ಮೂಲಕ ಹಣ ಪಡೆಯುತ್ತಿರುವ 65ಸಾವಿರ ವರ್ತಕರ ಮಾಹಿತಿ ಸಂಗ್ರಹಿಸಿದೆ. ಸುಮಾರು 5900 ವರ್ತಕರಿಗೆ ನೋಟಿಸ್‌ ನೀಡಿದೆ. ಜಿಎಸ್‌ಟಿ ಕಟ್ಟುವಂತೆ, ಜಿಎಸ್‌ಟಿಗೆ ನೋಂದಣಿ ಮಾಡಿಕೊಳ್ಳುವಂತೆ ನೋಟಿಸ್ ನೀಡಲಾಗಿದೆ.

ನಂದಿನಿ ಬೂತ್​ ಇಟ್ಟುಕೊಂಡು ಹಾಲು ಮಾರಾಟ ಮಾಡುವ ವ್ಯಾಪಾರಿಗೆ ವಾಣಿಜ್ಯ ಇಲಾಖೆ 50 ಲಕ್ಷ ರೂ. ತೆರಿಗೆ ಪಾವತಿಸುವಂತೆ ನೋಟಿಸ್​ ನೀಡಿದೆ. ಅಭಿಷೇಕ್ ಎಂಬುವರಿಗೆ ನೋಟಿಸ್​ ನೀಡಲಾಗಿದೆ. ಅಭಿಷೇಕ್ ಕಳೆದ ಮೂರು ವರ್ಷದಿಂದ ಹಾಲಿನ ವ್ಯಾಪಾರ ಮಾಡುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ನೋಟೀಸ್ ಬಂದಿದೆ. ಫೇಕ್ ಅಂತ ಸುಮ್ಮನಿದ್ದೆ. ಆದರೆ, ಕಳೆದ 4-5 ದಿನದ ಹಿಂದೆ ಕರೆ ಮಾಡಿ ಆಫೀಸ್​ಗೆ ಬರಲು ಅಧಿಕಾರಿಗಳು ಸೂಚನೆ ನೀಡಿದರು. ಒಟ್ಟು 52 ಲಕ್ಷ ರೂ. ತೆರಿಗೆ ಪಾವತಿ ಮಾಡಲು ಹೇಳಿದ್ದಾರೆ. ಇಷ್ಟೊಂದು ಹಣ ಇದ್ದಿದ್ದರೆ ನಾನೇಕೆ ಹಾಲಿನ ವ್ಯಾಪಾರ ಮಾಡುತ್ತಿದ್ದೆ‌? ಇಷ್ಟೊಂದು ಹಣ ಎಲ್ಲಿಂದ ಪಾವತಿ ಮಾಡಲಿ? ಎಂದು ಅಳಲು ತೋಡಿಕೊಂಡಿದ್ದಾರೆ.

ನಾಳೆ ನಮಗೂ ನೋಟೀಸ್ ಬಂದರೇ ಏನು ಕಥೆ‌? ಯುಪಿಐ ಸಹವಾಸವೇ ಬೇಡ ಶಿವಾ, ಕ್ಯಾಶ್ ಕೊಡಿ ವ್ಯಾಪಾರ ಮಾಡಿ. ಇತರರಿಗೆ ಕೊಡುತ್ತಿರುವ ನೋಟಿಸ್​ ನಮಗೂ ಭಯ ಹುಟ್ಟಿಸಿದೆ. ಲಕ್ಷ ಲಕ್ಷ ಕಟ್ಟಿ ಅಂದ್ರೆ ನಾವೆಲ್ಲಿಗೆ ಹೋಗುವುದು. ಯುಪಿಐ ಸಹವಾಸ ಬೇಡ ಅಂತ ಮಹಿಳಾ ವ್ಯಾಪಾರಿಗಳು ಹೇಳಿದ್ದಾರೆ.

ಇದನ್ನೂ ಓದಿ: ಬೇಕರಿ, ಕಾಂಡಿಮೆಂಟ್ಸ್, ಬೀಡ ಅಂಗಡಿ ಮಾಲೀಕರಿಗೆ ಸಿಹಿ ಸುದ್ದಿ ನೀಡಿದ ವಾಣಿಜ್ಯ ಇಲಾಖೆ

ಸಣ್ಣ ವ್ಯಾಪಾರಿಗಳಿಗೆ ತೊಂದರೆ ಇಲ್ಲ: ತೆರಿಗೆ ಇಲಾಖೆ

ವ್ಯಾಪಾರಿಗಳು ಆತಂಕಗೊಳ್ಳಬೇಕಾಗಿಲ್ಲ. ವರ್ಷದಲ್ಲಿ 40 ಲಕ್ಷ ರೂ.ಗಿಂತ ಹೆಚ್ಚಿನ ವ್ಯಾಪಾರ ವಹಿವಾಟು ನಡೆಸಿದವರಿಗೆ ಸ್ಪಷ್ಟಿಕರಣ ಕೇಳಿ ನೋಟಿಸ್‌ ನೀಡಲಾಗಿದ್ದು, ಸೂಕ್ತ ದಾಖಲೆ ವಿವರಣೆ ನೀಡಿದರೆ ಪ್ರಕರಣ ಮುಕ್ತಾಯಗೊಳಿಸಲಾಗುವುದು ಎಂದು ವಾಣಿಜ್ಯ ತೆರಿಗೆ ಇಲಾಖೆ ಹೆಚ್ಚುವರಿ ಆಯುಕ್ತ ಚಂದ್ರ ಶೇಖರ್ ನಾಯಕ್ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Fri, 18 July 25