ಗೂಗಲ್ ಪೇ, ಫೋನ್ ಪೇ, ಪೇಟಿಯಂನಲ್ಲಿ ಹಣ ಸ್ವೀಕರಿಸುವ ಮುನ್ನ ಎಚ್ಚರ: ಅಂಗಡಿ ಮಾಲೀಕರಿಗೆ ವಾಣಿಜ್ಯ ತೆರಿಗೆ ಗುನ್ನ!
ಗೂಗಲ್ ಪೇ, ಫೋನ್ ಪೇ, ಪೇಟಿಯಂ ಮೂಲಕ ಗ್ರಾಹಕರಿಂದ ಹಣ ಪಡೆದು ವ್ಯಾಪಾರ ಮಾಡಿದ್ದ ಅಂಗಡಿ ಮಾಲೀಕರಿಗೆ ವಾಣಿಜ್ಯ ತೆರಿಗೆ ಇಲಾಖೆ ಸರಿಯಾಗಿ ಗುನ್ನ ಇಟ್ಟಿದ್ದು, ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಗೆ ಸೂಚನೆ ನೀಡುತ್ತಿದೆ. ಪಾವತಿ ಮಾಡದಿದ್ದರೆ ಅಕೌಂಟ್ ಬ್ಲಾಕ್ ಮಾಡಿ ತೆರಿಗೆಗೆ ಬಡ್ಡಿ ವಿಧಿಸುತ್ತೇವೆಂದು ಶೋಕಾಸ್ ನೋಟಿಸ್ ನೀಡಿದ್ದಾರೆ.

ಬೆಂಗಳೂರು, ಜುಲೈ 11: ಇತ್ತೀಚಿನ ದಿನಗಳಲ್ಲಿ ಜನರು ಸಣ್ಣ ಪೆಟ್ಟಿಗೆ ಅಂಗಡಿಯಿಂದ ಹಿಡಿದು ಚಿನ್ನಾಭರಣ ಅಂಗಡಿಗಳ ವರೆಗೆ ಎಲ್ಲದಕ್ಕೂ ಸ್ಕ್ಯಾನರ್ ಮೂಲಕ ಆನ್ಲೈನ್ ಪಾವತಿ (Online Payment) ಮಾಡುತ್ತಾರೆ. ಈಗಂತೂ ಎಲ್ಲಾ ಕಡೆಗಳಲ್ಲೂ ಗೂಗಲ್ ಪೇ, ಫೋನ್ ಪೇ, ಪೇಟಿಯಂ ಮೂಲಕ ಹಣ ಕಳುಹಿಸುವ ವ್ಯವಸ್ಥೆ ಇದೆ. ಹೀಗೆ ಕಳೆದ ನಾಲ್ಕೈದು ವರ್ಷಗಳಿಂದ ಆನ್ಲೈನ್ ಮೂಲಕ ಗ್ರಾಹಕರಿಂದ ಹಣ ಪಡೆದು ಬೀಡಿ, ಸಿಗರೇಟ್, ಗುಟ್ಕಾ, ಟೀ, ಕಾಫಿ, ಸಮೋಸ, ಬನ್ನು, ಬಿಸ್ಕತ್ತು ವ್ಯಾಪಾರ ಮಾಡಿದ್ದ ಸಾವಿರಾರು ಕಾಂಡಿಮೆಂಟ್ಸ್, ಬೇಕರಿ, ಬೀಡ ಶಾಪ್, ಟೀ, ಕಾಫಿ ಶಾಪ್ ಗಳಿಗೆ ಕಳೆದ ಒಂದು ವಾರದಿಂದ ಕರ್ನಾಟಕ ವಾಣಿಜ್ಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗುತ್ತಿದೆ. ‘ನೀವು ಕಳೆದ ನಾಲ್ಕೈದು ವರ್ಷಗಳಿಂದ ಲಕ್ಷಾಂತರ ರುಪಾಯಿ ವ್ಯಾಪಾರ ವಹಿವಾಟು ಮಾಡಿದ್ದೀರಿ. ಅದಕ್ಕಾಗಿ ನೀವು ಕಮರ್ಷಿಯಲ್ ಟ್ಯಾಕ್ಸ್ (Commercial tax) ಪಾವತಿ ಮಾಡಬೇಕು’ ಎಂದು ಶೋಕಾಸ್ ನೋಟಿಸ್ ನೀಡಲಾಗುತ್ತಿದೆ.
ಕರ್ನಾಟಕ ಕಮರ್ಷಿಯಲ್ ಟ್ಯಾಕ್ಸ್ ಅಧಿಕಾರಿಗಳು ಈ ಸಣ್ಣಪುಟ್ಟ ಬೇಕರಿ, ಕಾಂಡಿಮೆಂಟ್ಸ್, ಬೀಡ ಅಂಗಡಿಗಳಿಗೆ 37 ಲಕ್ಷ ರೂ, 32 ಲಕ್ಷ ರೂ.,54 ಲಕ್ಷ ರೂ., 19 ಲಕ್ಷ ರೂ., 15 ಲಕ್ಷ ರೂಪಾಯಿ ಕಮರ್ಷಿಯಲ್ ಟ್ಯಾಕ್ಸ್ ಪಾವತಿ ಮಾಡಬೇಕೆಂದು ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
ರಾಜ್ಯದ ಸಾವಿರಾರು ಸಣ್ಣಪುಟ್ಟ ವ್ಯಾಪಾರ ಮಾಡುವ ಅಂಗಡಿಗಳಿಗೆ ನೋಟಿಸ್ ನೀಡಿದ್ದು, ಇದರಿಂದ ಬೆಂಗಳೂರು ಸೇರಿದಂತೆ ರಾಜ್ಯದ ಇತರ ಕಡೆಗಳಲ್ಲಿನ ಅಂಗಡಿ ಮಾಲೀಕರು ಕಂಗಲಾಗಿದ್ದಾರೆ. ಯಾವುದೇ ಕಾರಣಕ್ಕೂ ಇಷ್ಟೊಂದು ಹಣವನ್ನು ನಾವು ಪಾವತಿ ಮಾಡಲು ಆಗದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಸಣ್ಣ ವ್ಯಾಪಾರಿಗಳಿಗೆ ಕಮರ್ಷಿಯಲ್ ಟ್ಯಾಕ್ಸ್ ಶಾಕ್, ಭಾರೀ ಮೊತ್ತಗಳ ತೆರಿಗೆ ಕಟ್ಟುವಂತೆ ನೋಟೀಸ್!
ಒಟ್ಟಿನಲ್ಲಿ ಈಗಾಗಲೇ ಆನ್ಲೈನ್ ಮೂಲಕ ಗ್ರಾಹಕರಿಂದ ಪೇಮೆಂಟ್ ಸ್ವೀಕರಿಸಿದ್ದ ಅಂಗಡಿ ಮಾಲೀಕರಿಗೆ, ಲಕ್ಷಾಂತರ ರುಪಾಯಿ ಟ್ಯಾಕ್ಸ್ ಪಾವತಿ ಮಾಡಲು ವಾಣಿಜ್ಯ ತೆರಿಗೆ ಇಲಾಖೆ ಹೇಳಿದ್ದು ಇದರಿಂದ ನೋಟಿಸ್ ಪಡೆದುಕೊಂಡವರು ದಿಕ್ಕುತೋಚದಾಗಿದ್ದಾರೆ.







