ನಾಳೆಯಿಂದ ರಾಜ್ಯದ ವಾಹನ ಮಾಲೀಕರಿಗೆ ತೆರಿಗೆ ಶಾಕ್: ಟ್ಯಾಕ್ಸಿ, ಲಘು ಗೂಡ್ಸ್ ವಾಹನಗಳು ಮತ್ತಷ್ಟು ದುಬಾರಿ
ಕರ್ನಾಟಕ ಸರ್ಕಾರವು ಹಳದಿ ಬೋರ್ಡ್ ವಾಹನಗಳ ತೆರಿಗೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ನಾಳೆಯಿಂದ ಜಾರಿಗೆ ಬರುವ ಈ ನೂತನ ನಿಯಮದ ಪ್ರಕಾರ, 10 ಲಕ್ಷ ರೂ.ಗಳಿಗಿಂತ ಕಡಿಮೆ ಬೆಲೆಯ ವಾಹನಗಳಿಗೆ ಲೈಫ್ ಟೈಮ್ ಟ್ಯಾಕ್ಸ್ ವಿಧಿಸಲಾಗಿದೆ. ಜೊತೆಗೆ, ಕಟ್ಟಡ ಸಾಮಗ್ರಿ ಸಾಗಾಟದ ವಾಹನಗಳು ಮತ್ತು ವಾಣಿಜ್ಯ ಬಳಕೆಯ ವಿದ್ಯುತ್ ವಾಹನಗಳ ಮೇಲಿನ ತೆರಿಗೆಯನ್ನೂ ಹೆಚ್ಚಿಸಲಾಗಿದೆ.

ಬೆಂಗಳೂರು, ಏಪ್ರಿಲ್ 30: ಮೇ 1ರಿಂದ ಹೊಸ ವಾಹನ ಖರೀದಿಗೆ ಸರ್ಕಾರದ ಹೊಸ ತೆರಿಗೆ ನೀತಿ (New Tax Rules) ಅನ್ವಯವಾಗಲಿದೆ. ವಾಹನ ತೆರಿಗೆ ಹೆಚ್ಚಳದ ಕರ್ನಾಟಕ ಮೋಟಾರು ವಾಹನಗಳ ತೆರಿಗೆ (ತಿದ್ದುಪಡಿ) ವಿಧೇಯಕಕ್ಕೆ ರಾಜ್ಯಪಾಲರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ನಾಳೆಯಿಂದ ಜಾರಿಗೆ ಬರಲಿದೆ. ಆ ಮೂಲಕ ಲಘು ಗೂಡ್ಸ್ ವಾಹನಗಳು ದುಬಾರಿಯಾಗಲಿದ್ದು, ಹೊಸದಾಗಿ ಯೆಲ್ಲೋ ಬೋರ್ಡ್ ವಾಹನ (Yellow board vehicle) ಖರೀದಿ ಮಾಡುವವರಿಗೆ ಶಾಕ್ ಎದುರಾಗಿದೆ.
ಶೇಕಡಾ 5ರಷ್ಟು ತೆರಿಗೆ ಏರಿಕೆ
ಕರ್ನಾಟಕ ಮೋಟಾರು ವಾಹನಗಳ ತೆರಿಗೆ ವಿಧೇಯಕಕ್ಕೆ ರಾಜ್ಯಪಾಲರು ಅಂಕಿತ ಹಾಕಿದ ಹಿನ್ನೆಲೆ ತೆರಿಗೆ ಶಾಕ್ ಉಂಟಾಗಿದ್ದು, ನಾಳೆಯಿಂದ ವಾಹನಗಳ ಜೀವಿತಾವಧಿ ತೆರಿಗೆ ಹೆಚ್ಚಳ ಆಗಲಿದೆ. 10 ಲಕ್ಷದೊಳಗಿನ ಟ್ಯಾಕ್ಸಿ, ಲಘು ಗೂಡ್ಸ್ ವಾಹನಗಳ ಜೀವಿತಾವಧಿ ತೆರಿಗೆ ಶೇಕಡಾ 5ರಷ್ಟು ಏರಿಕೆ ಆಗಲಿದೆ.
ಇದನ್ನೂ ಓದಿ: ಹೊಸ ವಾಹನ ಖರೀದಿ ಮಾಡುವವರಿಗೆ ಏಪ್ರಿಲ್ ನಿಂದ ಡಬಲ್ ಶಾಕ್! ಕಡಿಮೆ ದರದ ವಾಹನಕ್ಕೂ ತೆರಿಗೆ, ಬೆಲೆಯೂ ಏರಿಕೆ
ವಾಣಿಜ್ಯ ಉದ್ದೇಶ ಬಳಕೆಯ ಎಲೆಕ್ಟ್ರಿಕ್ ವಾಹನಗಳ ತೆರಿಗೆಯಲ್ಲಿ 25 ಲಕ್ಷಕ್ಕೂ ಹೆಚ್ಚಿನ ವಾಣಿಜ್ಯ ಬಳಕೆ ಇವಿಗೆ ಶೇ.10ರಷ್ಟು ತೆರಿಗೆ ಏರಿಕೆ ಆಗಲಿದೆ. ಈವರೆಗೆ 10 ಲಕ್ಷಕ್ಕಿಂತ ಕಡಿಮೆ ಮೌಲ್ಯದ ವಾಹನಗಳಿಗೆ ತೆರಿಗೆ ಇರಲಿಲ್ಲ. ಆದರೆ ನಾಳೆಯಿಂದ ಈ ಎಲ್ಲಾ ವಾಹನಗಳ ಜೀವಿತಾವಧಿ ತೆರಿಗೆ ಏರಿಕೆ ಆಗಲಿದೆ.
ಈ ಹಿಂದೆ ಹತ್ತು ಲಕ್ಷದೊಳಗಿನ ಯೆಲ್ಲೋ ಬೋರ್ಡ್ ವಾಹನಗಳಿಗೆ ಪ್ರತಿ ಸೀಟ್ಗೆ ಮೂರು ತಿಂಗಳಿಗೊಮ್ಮೆ 100 ರೂಪಾಯಿಯಂತೆ, 4 ಸೀಟ್ ವಾಹನಕ್ಕೆ 400 ರೂ ಪಾವತಿ ಮಾಡಬೇಕಿತ್ತು. ಆದರೆ ನೂತನ ತಿದ್ದುಪಡಿ ವಿಧೇಯಕದಲ್ಲಿ ಅದನ್ನು ಬದಲಿಸಿ, 10 ಲಕ್ಷ ದೊಳಗಿನ ಯೆಲ್ಲೋ ಬೋರ್ಡ್ ವಾಹನಗಳಿಗೆ ಜೀವಿತಾವಧಿ 5% ರಷ್ಟು ತೆರಿಗೆ ವಿಧಿಸಲಾಗಿದೆ.
10 ಲಕ್ಷ ರೂ ಯೆಲ್ಲೋ ಬೋರ್ಡ್ ಕಾರು ಖರೀದಿ ಮಾಡಿದರೆ ನಾಳೆಯಿಂದ 50 ಸಾವಿರ ರೂ ಜೀವಿತಾವಧಿ ಟ್ಯಾಕ್ಸ್ ಪಾವತಿ ಮಾಡಬೇಕು. 25 ಲಕ್ಷ ರೂ ಮೇಲ್ಪಟ್ಟ ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ವಾಹನಗಳಿಗೆ, 10% ರಷ್ಟು ಟ್ಯಾಕ್ಸ್ ಪಾವತಿ ಮಾಡಬೇಕು. ಅಂದರೆ 25 ಲಕ್ಷ ರೂ. ವಾಣಿಜ್ಯ ಬಳಕೆಯ ಎಲೆಕ್ಟ್ರಿಕ್ ಕಾರು ಖರೀದಿ ಮಾಡಿದರೆ 2.5 ಲಕ್ಷ ರೂ ಟ್ಯಾಕ್ಸ್ ಪಾವತಿ ಮಾಡಬೇಕು.
ಇದನ್ನೂ ಓದಿ: ಅಕ್ಷಯ ತೃತೀಯದಂದು ಆಸ್ತಿ ತೆರಿಗೆ ಪಾವತಿದಾರರಿಗೆ ಬಿಬಿಎಂಪಿ ಗುಡ್ ನ್ಯೂಸ್: ತೆರಿಗೆ ಪಾವತಿಸಲು ಮೇ 30ರವರೆಗೆ ಅವಕಾಶ
ಈ ಹಿಂದೆ 25 ಲಕ್ಷ ರೂ ಮೇಲ್ಪಟ್ಟ ವಾಣಿಜ್ಯ ಬಳಕೆ ಎಲೆಕ್ಟ್ರಿಕ್ ಕಾರುಗಳಿಗೆ ತೆರಿಗೆ ವಿನಾಯಿತಿ ನೀಡಲಾಗಿತ್ತು. ಕಟ್ಟಡ ಸಾಮಾಗ್ರಿಗಳ ಶಿಫ್ಟಿಂಗ್ ವಾಹನಗಳ ಮೇಲೆ ಈ ಹಿಂದೆ 6% ರಷ್ಟು ಜೀವಿತಾವಧಿ ತೆರಿಗೆ ವಿಧಿಸಲಾಗಿತ್ತು. ನೂತನ ಆದೇಶದಲ್ಲಿ 8% ರಷ್ಟು ಜೀವಿತಾವಧಿ ವಿಧಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







