ಬೆಂಗಳೂರು, ಫೆಬ್ರವರಿ 26: ಕರ್ನಾಟಕದಲ್ಲಿ ಗರಿಷ್ಠ ತಾಪಮಾನದಲ್ಲಿ ಭಾರಿ ಏರಿಕೆ ಕಂಡುಬರುತ್ತಿದ್ದು, ಮೂರು ಜಿಲ್ಲೆಗಳಿಗೆ ಉಷ್ಣ ಅಲೆಯ ಎಚ್ಚರಿಕೆ ನೀಡಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬಿಸಿಲ ಝಳ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೇಸಿಗೆಯನ್ನು ಎದುರಿಸುವುದು ಹೇಗೆ ಹವಾಮಾನ ಇಲಾಖೆ ಸಲಹೆ
ಹೆಚ್ಚಿನ ತಾಪಮಾನ, ದೀರ್ಘಕಾಲದವರೆಗೆ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ಶಾಖ ಅಲೆಯು ಹೆಚ್ಚಿನ ಪರಿಣಾಮವನ್ನುಂಟು ಮಾಡುತ್ತದೆ. ಶಿಶುಗಳು, ದುರ್ಬಲರು, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರು ಹೆಚ್ಚಿನ ಆರೋಗ್ಯ ಕಾಳಜಿವಹಿಸಬೇಕು ಎಂದು ಸಲಹೆ ನೀಡಿದೆ.
ಹಾಗೆಯೇ ಮಧ್ಯಾಹ್ನ 12 ರಿಂದ 3ಗಂಟೆಯವರೆಗೆ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸಬೇಕು, ಬಾಯಾರಿಕೆ ಇಲ್ಲದಿದ್ದರೂ ಕೂಡ ಸಾಕಷ್ಟು ನೀರು ಕುಡಿಯಬೇಕು, ಹಗುರವಾದ, ತಿಳಿ ಬಣ್ಣದ , ಸಡಿಲವಾದ ಬಟ್ಟೆ ಧರಿಸಬೇಕು, ತಲೆಗೆ ಬಿಸಿಲ ಶಾಖ ತಾಕದಂತೆ ನೋಡಿಕೊಳ್ಳಿ.
ಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ, ಅವುಗಳಿಗೆ ಕುಡಿಯಲು ಸಾಕಷ್ಟು ನೀರು ನೀಡಿ. ನಿಮ್ಮನ್ನು ಹೈಡ್ರೇಟ್ ಆಗಿರಿಸಿಕೊಳ್ಳಲು ಒಆರ್ಎಸ್ ಅಥವಾ ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ, ಅಕ್ಕಿ ನೀರು, ನಿಂಬೆ ನೀರು ಇತ್ಯಾದಿಗಳನ್ನು ಕುಡಿಯಿರಿ ಎಂದು ಹವಾಮಾನ ಇಲಾಖೆ ಹೇಳಿದೆ.
ಮತ್ತಷ್ಟು ಓದಿ: Karnataka Weather: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಮುನ್ಸೂಚನೆ
ಕಾರವಾರ, ಪಣಂಬೂರು, ಮಂಗಳೂರು, ಬಾಗಲಕೋಟೆ, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಚಿಂತಾಮಣಿ, ಮಡಿಕೇರಿ, ಶಿವಮೊಗ್ಗ, ಮೈಸೂರು, ಮಂಡ್ಯದಲ್ಲಿ ಗರಿಷ್ಠ ತಾಪಮಾನ ಹೆಚ್ಚಾಗಿದೆ.
ಗರಿಷ್ಠ ತಾಪಮಾನ ಕರಾವಳಿಯಲ್ಲಿ 36-39 ಡಿಗ್ರಿ ಸೆಲ್ಸಿಯಸ್ ಇದೆ, ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಧಾರವಾಡ, ಗದಗ, ಕೊಪ್ಪಳ, ರಾಯಚೂರು ಮತ್ತು ಹಾವೇರಿಯಲ್ಲಿ 33-36 ಡಿಗ್ರಿ ಸೆಲ್ಸಿಯಸ್, ಕಲಬುರಗಿ, ಚಿಕ್ಕಮಗಳೂರಿನಲ್ಲಿ 33 ಡಿಗ್ರಿ ಸೆಲ್ಸಿಯಸ್, ಚಿಂತಾಮಣಿ, ಮಡಿಕೇರಿ, ಶಿವಮೊಗ್ಗ, ಮೈಸೂರು, ಆಗುಂಬೆ, ದಾವಣಗೆರೆ, ಮಂಡ್ಯದಲ್ಲಿ 34-35 ಡಿಗ್ರಿ ಸೆಲ್ಸಿಯಸ್ನಷ್ಟಿದೆ.
ಬೆಂಗಳೂರಿನಲ್ಲಿ ಶುಭ್ರ ಆಕಾಶವಿರಲಿದ್ದು, ಗಾಳಿ ವೇಗ ಸ್ವಲ್ಪ ಹೆಚ್ಚಿದೆ, ಎಚ್ಎಎಲ್ನಲ್ಲಿ 31.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ32.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 18.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 31.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.5 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 31.4 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17.0 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:22 am, Wed, 26 February 25