
ಬೆಂಗಳೂರು, ಅ.9: ರಾಜ್ಯದಲ್ಲಿ ನಡೆಸಲಾದ ಆಂತರಿಕ ತನಿಖೆ ಹಾಗೂ ವನ್ಯಜೀವಿ ಗಣತಿಯ ಪ್ರಕಾರ ಕರ್ನಾಟಕದಲ್ಲಿ ಹುಲಿಗಳ ಸಂಖ್ಯೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿರುವ ‘ಅಖಿಲ ಭಾರತ ಹುಲಿ ಗಣತಿ ವರದಿ’ಯಲ್ಲಿ (All India Tiger Estimation Report) ಈ ಸಂಖ್ಯೆ 700 ರ ಗಡಿ ದಾಟುವ ನಿರೀಕ್ಷೆಯಿದೆ. 72ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಆಯೋಜಿಸಲಾಗಿದ್ದ ‘ಬೆಂಗಾಳೂರು ಕಾನ್‌ಕ್ಲೇವ್’ನಲ್ಲಿ ಮಾತನಾಡಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಅವರು, 2022ರ ಗಣತಿಯಲ್ಲಿ 563 ಇದ್ದ ಹುಲಿಗಳ ಸಂಖ್ಯೆ ಪ್ರಸ್ತುತ 700 ರ ಆಸುಪಾಸಿಗೆ ತಲುಪಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಸಂರಕ್ಷಿತ ಅರಣ್ಯಗಳು, ಹುಲಿ ಸಂರಕ್ಷಿತ ಪ್ರದೇಶಗಳು ಹಾಗೂ ವನ್ಯಜೀವಿ ಅಭಯಾರಣ್ಯಗಳು ಮಾತ್ರವಲ್ಲದೆ ಪ್ರಾದೇಶಿಕ ಅರಣ್ಯ ವಿಭಾಗಗಳು ಮತ್ತು ಕಾಡಿನ ಹೊರಗಿನ ಪ್ರದೇಶಗಳಲ್ಲೂ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಹುಲಿ ಗಣತಿ ಪ್ರಕ್ರಿಯೆಯು ನವೆಂಬರ್ 2025 ರಲ್ಲಿ ಪ್ರಾರಂಭವಾಗಿ ಮೇ 2026 ರಲ್ಲಿ ಪೂರ್ಣಗೊಂಡಿದೆ. ದತ್ತಾಂಶವನ್ನು ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯಕ್ಕೆ ಅಂತಿಮ ಮೌಲ್ಯಮಾಪನ ಹಾಗೂ ಅಧಿಕೃತ ಬಿಡುಗಡೆಗಾಗಿ ರವಾನಿಸಲಾಗಿದೆ. ಮಧ್ಯಪ್ರದೇಶ, ಉತ್ತರಾಖಂಡ ಹಾಗೂ ಕರ್ನಾಟಕ ರಾಜ್ಯಗಳಲ್ಲಿ ಹುಲಿಗಳ ಸಂಖ್ಯೆ ಭರವಸೆ ಮೂಡಿಸುವ ರೀತಿಯಲ್ಲಿ ಹೆಚ್ಚಾಗಿದೆ. 2022 ರ ವರದಿಯಂತೆ ಕರ್ನಾಟಕವು ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ.
ಭಾರತದಲ್ಲೇ ಅತಿ ಹೆಚ್ಚು ಅಂದರೆ 6,395 ಆನೆಗಳನ್ನು ಹೊಂದುವ ಮೂಲಕ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಆನೆಗಳ ಸಂಚಾರಕ್ಕೆ ಅಡೆತಡೆಯಾಗದಂತೆ ತಡೆಯಲು ವಿಶೇಷ ‘ಆನೆ ಕಾರಿಡಾರ್ ನೀತಿ’ಯನ್ನು ರೂಪಿಸಲಾಗಿದ್ದು, ಶೀಘ್ರದಲ್ಲೇ ಅನುಮೋದನೆಗಾಗಿ ಸಚಿವ ಸಂಪುಟದ ಮುಂದೆ ಮಂಡಿಸಲಾಗುವುದು. ಪ್ರಸ್ತುತ ಇರುವ ಆನೆ ಕಾರಿಡಾರ್‌ಗಳನ್ನು ಬಲಪಡಿಸುವುದು ಹಾಗೂ ನಾಶವಾಗಿರುವ ಕಾರಿಡಾರ್‌ಗಳನ್ನು ಪುನರುಜ್ಜೀವನಗೊಳಿಸುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ.
ಕಾಫಿ ತೋಟಗಳ ಬಳಿ ವಾಸಿಸುವ ಆನೆಗಳಿಗೆ ಇಮ್ಯೂನ್-ಗರ್ಭನಿರೋಧಕ ಚಿಕಿತ್ಸೆ ನೀಡುವ ಕುರಿತು ವೈಜ್ಞಾನಿಕ ಮತ್ತು ಕಾನೂನು ತಜ್ಞರೊಂದಿಗೆ ಮಾತುಕತೆ ನಡೆಸಲಾಗುತ್ತಿದೆ. ಜೊತೆಗೆ ಕಾಡುಕೋಣಗಳಸಂಖ್ಯೆ ನಿಯಂತ್ರಣಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಸರ್ಪದಂಶವನ್ನು ‘ನೋಟಿಫೈಡ್ ಡಿಸೀಸ್’ ಎಂದು ಘೋಷಿಸಿದ ಮೊದಲ ರಾಜ್ಯ ಕರ್ನಾಟಕವಾಗಿದೆ. ಇದೀಗ ಹಾವು ರಕ್ಷಕರು ಹಾಗೂ ತಜ್ಞರ ಸುರಕ್ಷತೆಗಾಗಿ ಸರ್ಕಾರ ಶೀಘ್ರದಲ್ಲೇ ಸರಣಿ ನಿಯಮಗಳನ್ನು ಹೊರಡಿಸಲಿದೆ. ಹಾವುಗಳ ಸೆರೆ, ರಕ್ಷಣೆ ಮತ್ತು ಪುನರ್ವಸತಿಗಾಗಿ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಲಾಗುತ್ತಿದ್ದು, ನೋಂದಾಯಿತ ಹಾವು ರಕ್ಷಕರ ಪಟ್ಟಿಯನ್ನು ಅರಣ್ಯ ಇಲಾಖೆಯ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗುವುದು.
ಅರಣ್ಯ ಮತ್ತು ಪರಿಸರ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ನಗರೀಕರಣದಿಂದಾಗಿ ಶ್ವಾಸಕೋಶದಂತಿರುವ ಹಸಿರು ಜಾಗಗಳು ಕುಗ್ಗುತ್ತಿವೆ. ವಿಧಾನಸೌಧ ಹಾಗೂ ಹೈಕೋರ್ಟ್ ಸೇರಿ ಕಚೇರಿ ಸಂಕೀರ್ಣಗಳಿಂದಾಗಿ ಕಬ್ಬನ್ ಪಾರ್ಕ್‌ನ ಹಸಿರು ಹೊದಿಕೆ ಕಡಿಮೆಯಾಗಿದೆ. ಇದನ್ನು ಸರಿದೂಗಿಸಲು ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳಲ್ಲಿ ಹೆಚ್ಚಿನ ‘ಟ್ರೀ ಪಾರ್ಕ್‌ಗಳನ್ನು’ ನಿರ್ಮಿಸಲಾಗುವುದು. ರಾಜ್ಯದ ಅರಣ್ಯ ಹೊದಿಕೆ ಶೇ. 20 ರಷ್ಟಿದ್ದು, ಇದನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ. ಕಾರ್ಯಕ್ರಮದಲ್ಲಿ ಸಚಿವರು ‘ಕ್ರಾಸಿಂಗ್ ಪಾತ್ಸ್’, ‘ಲಂಗ್ಸ್ ಆಫ್ ಬೆಂಗಳೂರು’ ಮತ್ತು ‘ಎಲಿಫೆಂಟ್ ಟಾಸ್ಕ್ ಫೋರ್ಸ್ ರಾಮನಗರ’ ಎಂಬ ಮೂರು ಸಾಕ್ಷ್ಯಚಿತ್ರಗಳನ್ನು ಬಿಡುಗಡೆ ಮಾಡಿದರು.
ಇದನ್ನೂ ಓದಿ: ಈ ದಸರಾ ರಜೆಗೆ ಮಕ್ಕಳು-ಫ್ಯಾಮಿಲಿ ಜೊತೆ ಒಂದೇ ದಿನದಲ್ಲಿ ಸುತ್ತಾಡಲು KSTDC ಸೂಪರ್ ಒನ್‌ಡೇ ಟೂರ್ ಪ್ಯಾಕೇಜ್
2025-26 ನೇ ಸಾಲಿನ ಮಾನವ-ವನ್ಯಜೀವಿ ಸಂಘರ್ಷದ ಹಾನಿ:
ಮಾನವ ಸಾವುಗಳು: 51
ಗಾಯಗೊಂಡವರು: 368
ಜಾನುವಾರು ಹಾನಿ : 6,351
ಬೆಳೆ ಹಾನಿ ಪ್ರಕರಣಗಳು (Crop Loss): 41,755
ವನ್ಯಜೀವಿಗಳ ಸಂಖ್ಯೆಯಲ್ಲಿ ಕರ್ನಾಟಕದ ಶ್ರೇಣಿ :
ಆನೆಗಳು (6,395): ಭಾರತದಲ್ಲೇ ನಂ. 1 ಸ್ಥಾನ
ಹುಲಿಗಳು (563 – 2022 ಗಣತಿ): ಭಾರತದಲ್ಲೇ ನಂ. 2 ಸ್ಥಾನ
ಚಿರತೆಗಳು (1,879): ಭಾರತದಲ್ಲೇ ನಂ. 3 ಸ್ಥಾನ
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ