KEA Recruitment 2026: ಕೆಇಎ ನೇಮಕಾತಿ; ತೋಟಗಾರಿಕೆ ಇಲಾಖೆಯಲ್ಲಿ 80 ಹುದ್ದೆಗಳಿಗೆ ಅರ್ಜಿ ಆಹ್ವಾನ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ತೋಟಗಾರಿಕೆ ಇಲಾಖೆಯಲ್ಲಿ 80 ಗ್ರೂಪ್-ಬಿ ಅಧಿಕಾರಿ ಹುದ್ದೆಗಳಿಗೆ (AHO, ADH) ಆನ್‌ಲೈನ್ ಅರ್ಜಿ ಆಹ್ವಾನಿಸಿದೆ. ಬಿ.ಎಸ್ಸಿ/ಎಂ.ಎಸ್ಸಿ ತೋಟಗಾರಿಕೆ ಪದವಿ ಹೊಂದಿದವರು ಅರ್ಹರು. ಆಯ್ಕೆ ಪ್ರಕ್ರಿಯೆಯು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನಡೆಯಲಿದೆ. ಆಸಕ್ತ ಅಭ್ಯರ್ಥಿಗಳು KEA ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.

KEA Recruitment 2026: ಕೆಇಎ ನೇಮಕಾತಿ; ತೋಟಗಾರಿಕೆ ಇಲಾಖೆಯಲ್ಲಿ 80 ಹುದ್ದೆಗಳಿಗೆ ಅರ್ಜಿ ಆಹ್ವಾನ
ತೋಟಗಾರಿಕೆ ಇಲಾಖೆಯಲ್ಲಿ ನೇಮಕಾತಿ
Image Credit source: Getty Images

Updated on: Aug 06, 2026 | 1:23 PM

ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) ತೋಟಗಾರಿಕೆ ಇಲಾಖೆಯಲ್ಲಿ ಖಾಲಿ ಇರುವ ಗ್ರೂಪ್-ಬಿ ವೃಂದದ ಅಧಿಕಾರಿ ಹುದ್ದೆಗಳ ಭರ್ತಿಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಈ ಸಂಬಂಧ ಅಧಿಸೂಚನೆ ಸಂಖ್ಯೆ: ಇಡಿ/ಕೆಇಎ/32/ನೇ.ವಿ/2026 (ಆರ್ ಪಿಸಿ) ಅನ್ನು ಆಯಕ್ತರು ಆಗಸ್ಟ್​​ 04 ರಂದು ಹೊರಡಿಸಿದ್ದಾರೆ. ಅರ್ಹ ಅಭ್ಯರ್ಥಿಗಳನ್ನು ಪಾರದರ್ಶಕವಾಗಿ ಆಯ್ಕೆ ಮಾಡಲು ಪ್ರಾಧಿಕಾರವು ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಲಿದೆ.

ಖಾಲಿ ಇರುವ ಹುದ್ದೆಗಳು ಮತ್ತು ವೇತನ ಶ್ರೇಣಿ:

ಈ ನೇಮಕಾತಿ ಪ್ರಕ್ರಿಯೆಯ ಮೂಲಕ ಒಟ್ಟು 80 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಇದರಲ್ಲಿ ಸಹಾಯಕ ತೋಟಗಾರಿಕೆ ಅಧಿಕಾರಿ (AHO) ಹುದ್ದೆಗೆ 75 ಖಾಲಿ ಸ್ಥಾನಗಳಿದ್ದು, ಆಯ್ಕೆಯಾಗುವ ಅಭ್ಯರ್ಥಿಗಳಿಗೆ 65,950 ರಿಂದ 1,24,900 ರೂ. ಗಳ ಮಾಸಿಕ ವೇತನ ಶ್ರೇಣಿ ಇರಲಿದೆ. ಹಾಗೆಯೇ ಸಹಾಯಕ ತೋಟಗಾರಿಕೆ ನಿರ್ದೇಶಕರು (ADH) ಹುದ್ದೆಗೆ 05 ಖಾಲಿ ಸ್ಥಾನಗಳಿದ್ದು, ಇವುಗಳಿಗೆ 69,250 ರಿಂದ 1,34,200 ರೂ. ಗಳ ಮಾಸಿಕ ವೇತನ ಶ್ರೇಣಿಯನ್ನು ನಿಗದಿಪಡಿಸಲಾಗಿದೆ. ಹುದ್ದೆವಾರು ಮತ್ತು ಪ್ರವರ್ಗವಾರು ವಿವರಗಳನ್ನು ತೋಟಗಾರಿಕೆ ಇಲಾಖೆಯು ಶೀಘ್ರದಲ್ಲೇ ಪ್ರತ್ಯೇಕವಾಗಿ ಪ್ರಕಟಿಸಲಿದೆ.

ಅಗತ್ಯ ಶೈಕ್ಷಣಿಕ ವಿದ್ಯಾರ್ಹತೆ:

ಸಹಾಯಕ ತೋಟಗಾರಿಕೆ ಅಧಿಕಾರಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐ.ಸಿ.ಎ.ಆರ್ (ICAR) ನಿಂದ ಮಾನ್ಯತೆ ಪಡೆದ ಭಾರತದ ಯಾವುದೇ ವಿಶ್ವವಿದ್ಯಾಲಯದಿಂದ ತೋಟಗಾರಿಕೆಯಲ್ಲಿ ಪದವಿ (B.Sc. Horticulture) ಹೊಂದಿರಬೇಕು. ಇನ್ನು ಸಹಾಯಕ ತೋಟಗಾರಿಕೆ ನಿರ್ದೇಶಕರ ಹುದ್ದೆಗೆ ಅರ್ಜಿ ಸಲ್ಲಿಸಲು ಬಿ.ಎಸ್ಸಿ. ತೋಟಗಾರಿಕೆ ಪದವಿಯ ಜೊತೆಗೆ ಐ.ಸಿ.ಎ.ಆರ್ ಮಾನ್ಯತೆ ಪಡೆದ ಸಂಸ್ಥೆಯಿಂದ ತೋಟಗಾರಿಕೆಯಲ್ಲಿ ಸ್ನಾತಕೋತ್ತರ ಪದವಿ (M.Sc. Horticulture) ಪಡೆದಿರುವುದು ಕಡ್ಡಾಯವಾಗಿದೆ.

ಇದನ್ನೂ ಓದಿ: ಜಾಬ್ ಇಂಟರ್‌ವ್ಯೂಗೆ ಹೋಗುವ ಮುನ್ನ ಈ ತಪ್ಪು ಮಾಡಬೇಡಿ; ಸಿಂಪಲ್​ ಟಿಪ್ಸ್​ ಇಲ್ಲಿದೆ

ಅಭ್ಯರ್ಥಿಗಳಿಗೆ ಪ್ರಮುಖ ನಿಯಮಗಳು ಹಾಗೂ ಸೂಚನೆಗಳು:

ನಿಗದಿತ ವಿದ್ಯಾರ್ಹತೆ ಹೊಂದಿಲ್ಲದ ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರೆ, ಅಂತಹ ಅಭ್ಯರ್ಥಿಗಳನ್ನು ನೇಮಕಾತಿ ಪ್ರಕ್ರಿಯೆಯ ಯಾವುದೇ ಹಂತದಲ್ಲಾದರೂ ಮುನ್ಸೂಚನೆ ನೀಡದೆ ತಿರಸ್ಕರಿಸಲಾಗುತ್ತದೆ. ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದ ವೇಳೆಗೆ ಫಲಿತಾಂಶಕ್ಕಾಗಿ ಕಾಯುತ್ತಿರುವ (Awaiting Results) ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಿರುವುದಿಲ್ಲ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದೊಳಗಾಗಿ ಅಭ್ಯರ್ಥಿಗಳು ತಮ್ಮ ಎಲ್ಲಾ ಅಂಕಪಟ್ಟಿ ಮತ್ತು ಪ್ರಮಾಣಪತ್ರಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

ಅರ್ಜಿ ಸಲ್ಲಿಕೆ ಮತ್ತು ದಾಖಲೆ ಪರಿಶೀಲನೆ:

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ವೆಬ್‌ಸೈಟ್ cetonline.karnataka.gov.in/kea/ ಮೂಲಕವೇ ಆನ್‌ಲೈನ್ ಅರ್ಜಿ ಸಲ್ಲಿಸಬೇಕಿರುತ್ತದೆ. ಮೂಲ ದಾಖಲೆಗಳ ಪರಿಶೀಲನೆಯ ಸಮಯದಲ್ಲಿ ಅಭ್ಯರ್ಥಿಗಳು ತಮ್ಮ ಎಲ್ಲಾ ಶೈಕ್ಷಣಿಕ ದಾಖಲೆಗಳು ಹಾಗೂ ಅಂಕಪಟ್ಟಿಗಳ ಮೂಲ ಪ್ರತಿಯನ್ನು ತಪ್ಪದೇ ಹಾಜರುಪಡಿಸಬೇಕಾಗುತ್ತದೆ.

ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 1:22 pm, Thu, 6 August 26

Loading...
Unable to load recommendations.
Follow Us