
ಬೆಂಗಳೂರು, ನವೆಂಬರ್ 27: ಕರ್ನಾಟಕ ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ವಿವಿಧ ವಿಷಯಗಳ ಒಟ್ಟು 814 ಉಪನ್ಯಾಸಕರ ನೇಮಕಾತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅಧಿಸೂಚನೆ ಹೊರಡಿಸಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಡಿಸೆಂಬರ್ 25 ಅರ್ಜಿ ಸಲ್ಲಿಸಲು ಹಾಗೂ ಶುಲ್ಕ ಪಾವತಿಸಲು ಡಿಸೆಂಬರ್ 26 ಕೊನೆ ದಿನ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಒಟ್ಟು ಉಪನ್ಯಾಸಕರ ಹುದ್ದೆಗಳಲ್ಲಿ ಉಳಿಕೆ ಮೂಲ ವೃಂದದ 778 ಹಾಗೂ ಕಲ್ಯಾಣ ಕರ್ನಾಟಕ ವೃಂದದ 36 ಹುದ್ದೆಗಳು ಸೇರಿವೆ. ಸ್ನಾತಕೋತ್ತರ ಪದವಿ ಜೊತೆಗೆ ಬಿ.ಎಡ್ ಮಾಡಿರುವವರು ಅರ್ಜಿ ಸಲ್ಲಿಸಲು ಅರ್ಹರು. ಮಾರ್ಚ್ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಹುದ್ದೆಗಳ ವಿವರ: ಕನ್ನಡ ವಿಷಯದಲ್ಲಿ 89 ಹುದ್ದೆ ಭರ್ತಿಗೆ ಅರ್ಜಿ ಕರೆಯಲಾಗಿದೆ. ಇಂಗ್ಲಿಷ್-145, ಇತಿಹಾಸ-50, ಅರ್ಥಶಾಸ್ತ್ರ-90, ರಾಜ್ಯಶಾಸ್ತ್ರ-25, ಸಮಾಜಶಾಸ್ತ್ರ-25, ಭೂಗೋಳ ಶಾಸ್ತ್ರ-10, ವಾಣಿಜ್ಯ ಶಾಸ್ತ್ರ-150, ಭೌತಶಾಸ್ತ್ರ-30, ರಸಾಯನಶಾಸ್ತ್ರ-30, ಗಣಿತ-30, ಜೀವಶಾಸ್ತ್ರ-30, ಕಂಪ್ಯೂಟರ್ ಸೈನ್ಸ್-110. ಹೀಗೆ ಹಲವು ವಿಷಯಗಳ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಕರೆದಿದ್ದು, ಅರ್ಹರು ನಿಗದಿತ ಅವಧಿಯೊಳಗೆ ಅರ್ಜಿ ಸಲ್ಲಿಸಬೇಕು ಎಂದು ಮಾಹಿತಿ ನೀಡಿದ್ದಾರೆ.
ಸೇವಾನಿರತ: ಶಾಲಾ ಶಿಕ್ಷಣ (ಪದವಿ ಪೂರ್ವ) ಇಲಾಖೆಯ ವೃಂದ ಮತ್ತು ನೇಮಕಾತಿ
ನಿಯಮಗಳನ್ವಯ ನೇರ ನೇಮಕಾತಿ ಕೋಟಾದ ಶೇ. 75 ರಷ್ಟು ಹುದ್ದೆಗಳಲ್ಲಿ ಶೇ. 74 ರಷ್ಟು ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಹಾಗೂ ಶೇ. 01 ರಷ್ಟು ಹುದ್ದೆಗಳನ್ನು ಸದರಿ ಇಲಾಖೆಯ ಯಾವುದೇ ಗ್ರೂಪ್-ಸಿ ವೃಂದದಲ್ಲಿನ ಸೇವಾನಿರತ ಸಿಬ್ಬಂದಿಗಳು ಖಾಯಂ ಪೂರ್ವಾವಧಿಯನ್ನು ತೃಪ್ತಿಕರವಾಗಿ ಪೂರೈಸಿರುತ್ತಾರೆಂದು ಸಕ್ಷಮ ಪ್ರಾಧಿಕಾರದಿಂದ ಘೋಷಿಸಲ್ಪಟ್ಟಿರುವವರಿಗೆ ಮೀಸಲಿಟ್ಟಿದ್ದು, ಅರ್ಹ ಸೇವಾನಿರತ ಅಭ್ಯರ್ಥಿಗಳು ಲಭ್ಯವಿಲ್ಲದಿದ್ದರೆ ಸದರಿ ಹುದ್ದೆಯನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲಾಗುವುದು.
ವಯೋಮಿತಿ: ಕರ್ನಾಟ ಕಸಾಮಾನ್ಯ ಸೇವೆಗಳು (ಪದವಿ ಪೂರ್ವ ಶಿಕ್ಷಣ) (ನೇಮಕಾತಿ) ನಿಯಮಗಳು, 2013 ರಲ್ಲಿ ನಿರ್ದಿಷ್ಟ ಪಡಿಸಿರುವಂತೆ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದಂದು ಕನಿಷ್ಠ 21 ವರ್ಷಗಳು ತುಂಬಿರತಕ್ಕದ್ದು ಹಾಗೂ ಕೆಳಕಂಡಂತೆ ಗರಿಷ್ಠ ವಯೋಮಿತಿಯನ್ನು ಮೀರಿರಬಾರದು.
ಅರ್ಜಿ ಶುಲ್ಕ ವಿವರಗಳು: ಸಾಮಾನ್ಯ ಅರ್ಹತೆ ಮತ್ತು ಇತರೆ ಪ್ರವರ್ಗ ಅಭ್ಯರ್ಥಿಗಳಿಗೆ-750 ರೂ.,
ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಪ್ರವರ್ಗ-1 /ಮಾಜಿ ಸೈನಿಕ / ತೃತೀಯ ಲಿಂಗದ ಅಭ್ಯರ್ಥಿಗಳಿಗೆ 500 ರೂ. ವಿಶೇಷ ಚೇತನ ಅಭ್ಯರ್ಥಿಗಳಿಗೆ 250 ರೂಪಾಯಿ ನಿಗದಿಪಡಿಸಲಾಗಿದ್ದು, ಆನ್ಲೈನ್ ಮೂಲಕ ಮಾತ್ರ ಶುಲ್ಕ ಪಾವತಿಸಬೇಕು. ಇನ್ನು ಪಾವತಿಸಿದ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ. ಹೀಗಾಗಿ ಶುಲ್ಕ ಪಾವತಿಸುವ ಮೊದಲು ಅಗತ್ಯವಿರುವ ಎಲ್ಲಾ ಶೈಕ್ಷ ಕ ಅರ್ಹತೆ, ಮೀಸಲಾತಿ, ವಯೋಮಿತಿ ಹಾಗೂ ಇತರೆ ಎಲ್ಲಾ ಅರ್ಹತಾ ಷರತ್ತುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿಕೊಂಡು ಶುಲ್ಕವನ್ನು ಪಾವತಿ ಮಾಡತಕ್ಕದ್ದು.
ವೇತನ ಶ್ರೇಣಿ: 2024ರ ಪರಿಷ್ಕೃತ ವೇತನ ಶ್ರೇಣಿ 69250-1650-74200-1900-85600-2300-99400-2700-115600-3100-134200. ಇನ್ನು ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್.ಪಿ.ಎಸ್) ಅನ್ವಯಿಸುತ್ತದೆ ಹಾಗೂ ಕೆಜಿಐಡಿ ಸೌಲಭ್ಯ ಇರುತ್ತದೆ.
ಇನ್ನು ಈ ನೇಮಕಾತಿ ವಿವದ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ಗೆ ಭೇಟಿ ನೀಡಿ ನೋಡಿಕೊಳ್ಳಬಹುದಾಗಿದೆ.