AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪೆಟ್ರೋಲ್‌ನಲ್ಲಿ E20 ಮಿತಿ ಮೀರಿ ಹೆಚ್ಚುವರಿ ಎಥನಾಲ್ ಮಿಶ್ರಣ ಪತ್ತೆ ಎಂದ ಸಚಿವ ರಿಜ್ವಾನ್ ಅರ್ಷದ್; ಬೆಂಗಳೂರಿನ ಐಒಸಿಎಲ್ ಟರ್ಮಿನಲ್‌ಗೆ ನೋಟಿಸ್​

ಬೆಂಗಳೂರಿನ ದೇವನಗೊಂದಿ ಐಒಸಿಎಲ್ ಟರ್ಮಿನಲ್‌ನಲ್ಲಿ ಪೆಟ್ರೋಲ್‌ಗೆ ನಿಗದಿತ E20 ಮಿತಿ ಮೀರಿ ಹೆಚ್ಚುವರಿ ಎಥನಾಲ್ ಮಿಶ್ರಣವಾಗಿರುವುದು ಪತ್ತೆಯಾಗಿದೆ. ಮಾಪನಶಾಸ್ತ್ರ ಇಲಾಖೆ ತಪಾಸಣೆಯಲ್ಲಿ ಈ ಅಕ್ರಮ ಬಯಲಾಗಿದೆ. ಇದರಿಂದ ಪೆಟ್ರೋಲ್ ಪ್ರಮಾಣ ಕಡಿಮೆಯಾಗಿದ್ದು, ಗ್ರಾಹಕರಿಗೆ ನಷ್ಟ ಉಂಟಾಗುವ ಸಾಧ್ಯತೆಯಿದೆ. ಐಒಸಿಎಲ್ ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು, ಏಳು ದಿನಗಳಲ್ಲಿ ವಿವರಣೆ ನೀಡದಿದ್ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

ಪೆಟ್ರೋಲ್‌ನಲ್ಲಿ E20 ಮಿತಿ ಮೀರಿ ಹೆಚ್ಚುವರಿ ಎಥನಾಲ್ ಮಿಶ್ರಣ ಪತ್ತೆ ಎಂದ ಸಚಿವ ರಿಜ್ವಾನ್ ಅರ್ಷದ್; ಬೆಂಗಳೂರಿನ ಐಒಸಿಎಲ್ ಟರ್ಮಿನಲ್‌ಗೆ ನೋಟಿಸ್​
ಸಾಂದರ್ಭಿಕ ಚಿತ್ರ
ಹರೀಶ್ ಜಿ.ಆರ್​.
| Edited By: |

Updated on: Nov 27, 2026 | 9:06 PM

Share

ಬೆಂಗಳೂರು, ನ.27: ಪೆಟ್ರೋಲ್‌ನಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿರುವ E20 (ಶೇ. 20ರಷ್ಟು ಎಥನಾಲ್) ಮಿತಿಯನ್ನು ಮೀರಿ ಹೆಚ್ಚುವರಿ ಎಥನಾಲ್ ಮಿಶ್ರಣ ಮಾಡುತ್ತಿರುವ ಗಂಭೀರ ಪ್ರಕರಣ ಬೆಂಗಳೂರಿನ ದೇವನಗೊಂದಿಯಲ್ಲಿರುವ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಟರ್ಮಿನಲ್‌ನಲ್ಲಿ ಪತ್ತೆಯಾಗಿದೆ. ಈ ಸಂಬಂಧ ಐಒಸಿಎಲ್ ಟರ್ಮಿನಲ್‌ನ ಉಸ್ತುವಾರಿ ಅಧಿಕಾರಿಗೆ ಕಾರಣ ಕೇಳಿ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವ ರಿಜ್ವಾನ್ ಅರ್ಷದ್ ಶುಕ್ರವಾರ (ನವೆಂಬರ್ 27) ಮಾಹಿತಿ ನೀಡಿದ್ದಾರೆ.

ಕಾನೂನು ಮಾಪನಶಾಸ್ತ್ರ ಇಲಾಖೆಯ ಅಧಿಕಾರಿಗಳು ನವೆಂಬರ್ 25ರಂದು ತೈಲ ಕಂಪನಿಗಳ ಟರ್ಮಿನಲ್‌ಗಳಲ್ಲಿನ ಮಾಸ್ ಫ್ಲೋ ಮೀಟರ್‌ಗಳ ಪರಿಶೀಲನೆ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ. ದೇವನಗೊಂದಿ ಐಒಸಿಎಲ್ ಟರ್ಮಿನಲ್‌ನ ಬೇ ನಂಬರ್ 9ರ ಮೀಟರ್ ಪರಿಶೀಲಿಸಿದಾಗ, ಪ್ರತಿ 3,000 ಲೀಟರ್‌ಗೆ 14 ಲೀಟರ್ ಹೆಚ್ಚುವರಿ ಎಥನಾಲ್ ಪೂರೈಕೆಯಾಗುತ್ತಿರುವುದು ಹಾಗೂ ಮೋಟಾರ್ ಗ್ಯಾಸೋಲಿನ್‌ನಲ್ಲಿ (ಪೆಟ್ರೋಲ್) 4 ರಿಂದ 6 ಲೀಟರ್ ಕೊರತೆ ಇರುವುದು ಪತ್ತೆಯಾಗಿದೆ. ಅದೇ ರೀತಿ ಬೇ ನಂಬರ್ 4ರ ಮೀಟರ್‌ನಲ್ಲೂ ಪ್ರತಿ 3,000 ಲೀಟರ್‌ಗೆ 3 ಲೀಟರ್ ಅಧಿಕ ಎಥನಾಲ್ ಮಿಶ್ರಣವಾಗುತ್ತಿರುವುದು ಕಂಡುಬಂದಿದೆ.

ಇದನ್ನೂ ಓದಿ: ರಾಯಚೂರು ಕೃಷಿ ವಿವಿಯಲ್ಲಿ 75 ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಅಕ್ರಮ ಆರೋಪ: ಉನ್ನತ ಮಟ್ಟದ ತನಿಖೆಗೆ ರಾಜ್ಯ ಸರ್ಕಾರ ಆದೇಶ

ವಾಣಿಜ್ಯ ಬಳಕೆಗೆ ನಿರ್ಬಂಧ; 7 ದಿನಗಳಲ್ಲಿ ವಿವರಣೆ ನೀಡದಿದ್ದರೆ ಕಾನೂನು ಕ್ರಮ

ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಎಥನಾಲ್ ಮಿಶ್ರಣ ಮತ್ತು ಗ್ಯಾಸೋಲಿನ್ ಕೊರತೆಯಿಂದಾಗಿ ಕಾನೂನು ಮಾಪನಶಾಸ್ತ್ರ ಕಾಯ್ದೆ-2009ರ ಮಿತಿ ಮೀರಿರುವ ಶಂಕೆ ವ್ಯಕ್ತವಾಗಿದೆ. ಇದರಿಂದ ಗ್ರಾಹಕರು, ಪೆಟ್ರೋಲ್ ಬಂಕ್ ವಿತರಕರು ಹಾಗೂ ಇತರೆ ಪಾಲುದಾರರ ಹಿತಾಸಕ್ತಿಗೆ ಧಕ್ಕೆಯಾಗುವ ಸಾಧ್ಯತೆಯಿದೆ ಎಂದು ಸಚಿವರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಐಒಸಿಎಲ್ ಟರ್ಮಿನಲ್ ಅಧಿಕಾರಿಗಳಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದ್ದು, ಏಳು ದಿನಗಳೊಳಗೆ ಲಿಖಿತ ವಿವರಣೆ ಸಲ್ಲಿಸುವಂತೆ ಇಲಾಖೆ ಸೂಚಿಸಿದೆ. ಅಲ್ಲದೆ, ಅಳತೆ ವ್ಯವಸ್ಥೆಗಳ ನಿಖರತೆಯನ್ನು ದೃಢಪಡಿಸುವವರೆಗೆ ಸಂಬಂಧಪಟ್ಟ ಮೀಟರ್‌ಗಳ ವಾಣಿಜ್ಯ ಬಳಕೆಗೆ ನಿರ್ಬಂಧ ವಿಧಿಸಲಾಗಿದೆ. ಒಂದು ವೇಳೆ ತೃಪ್ತಿಕರ ವಿವರಣೆ ನೀಡದಿದ್ದರೆ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ರಿಜ್ವಾನ್ ಅರ್ಷದ್ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಹರೀಶ್ ಜಿ.ಆರ್​.
ಹರೀಶ್ ಜಿ.ಆರ್​.

ಹರೀಶ್ ಜಿ.ಆರ್ ಮೂಲತಃ ಚಿಕ್ಕಮಗಳೂರಿನವರಾಗಿದ್ದು, ಪೌಢ ಶಿಕ್ಷಣವನ್ನು ಉಜಿರೆಯ ಎಸ್ ಡಿಎಂ ಸಂಸ್ಥೆಯಲ್ಲಿ ಹಾಗೂ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪತ್ರಿಕೋದ್ಯಮ ದಲ್ಲಿ ಬಿ.ಎ ಪದವಿಯನ್ನು, ಮಾನಸ ಗಂಗೋತ್ರಿಯ EMMRC ಸಂಸ್ಥೆಯ ಎಲೆಕ್ಟ್ರಾನಿಕ್ ಮೀಡಿಯಾ ವಿಷಯದಲ್ಲಿ ಎಂಎಸ್ಸಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಧ್ಯ ಪತ್ರಿಕೋದ್ಯಮದಲ್ಲಿ 14 ವರ್ಷದ ಅನುಭವ ಹೊಂದಿರುವ ಇವರು, ದೆಹಲಿಯಲ್ಲಿಯೇ 10 ವರ್ಷಗಳ ಪತ್ರಿಕೋದ್ಯಮದಲ್ಲಿ ಸೇವೆ ಸಲ್ಲಿಸಿದ್ದಾರೆ. ರಾಜ್ಯ, ರಾಜಕೀಯ, ರಾಷ್ಟ್ರೀಯ, ಅಂತರರಾಷ್ಟ್ರೀಯ, ಸುಪ್ರೀಂಕೋರ್ಟ್ ವರದಿಗಾರಿಕೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಅಯೋಧ್ಯೆ ರಾಮಮಂದಿರದ ತೀರ್ಪು ನಿಂದ ಹಿಡಿದು ಮಂದಿರ ಉದ್ಘಾಟನೆವರೆಗೂ ವರದಿ ಮಾಡಿದ ಅನುಭವ ಹೊಂದಿದ್ದಾರೆ. ಪುಲ್ವಾಮ ಉಗ್ರರ ದಾಳಿ, ಪಹಲ್ಗಾಂ ಉಗ್ರರ ದಾಳಿ, ಆದಾದ ನಂತರದ ಆಪರೇಷನ್ ಸಿಂಧೂರ್ ಕಾರ್ಯಾಚರಣೆಗಳನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಗ್ರೌಂಡ್ ರಿಪೋರ್ಟ್ ಮಾಡಿರುವ ಅನುಭವ ಹೊಂದಿದ್ದಾರೆ.. ಉತ್ತರಖಂಡದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳನ್ನು ಗ್ರೌಂಡ್ ರಿಪೋರ್ಟ್ ಮಾಡಿದ್ದಾರೆ. 2019‌ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ವಿವಿಧ ರಾಜ್ಯಗಳನ್ನು ಸುತ್ತಿ ಜನರ ರಾಜಕೀಯ ನಾಡಿಮಿಡಿತದ ವರದಿ ಮಾಡಿದ್ದಾರೆ.. ಸಧ್ಯ ಇವರು ಬೆಂಗಳೂರಿನಲ್ಲಿ ರಾಜಕೀಯ ವರದಿಗಾರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Read More